ದಶರಥರಾಮೇಶ್ವರಕ್ಕೂ ಮತ್ತು ಅಯೋಧ್ಯೆಗಿದೆ ಐತಿಹಾಸಿಕ ನಂಟು!

 

ವಿಶೇಷ ವರದಿ: ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ 

ಹೊಸದುರ್ಗ: ( Hosadurga) ರಾಮಾಯಣ ಜನ  ಕಾಲದ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ದಕ್ಷಿಣಭಾರತದ ಕರ್ನಾಟಕ ರಾಜ್ಯದ ಹೊಸದುರ್ಗ ತಾಲೂಕಿನ ದಶರಥರಾಮೇಶ್ವರ ಕ್ಷೇತ್ರವೂ ಒಂದಾಗಿದೆ. ಇದೊಂದು ಅತ್ಯಂತ ಪ್ರಾಚೀನ ಧಾರ್ಮಿಕ ಕ್ಷೇತ್ರವಾಗಿದ್ದು, ದಶರಥ ರಾಮೇಶ್ವರ ಕ್ಷೇತ್ರಕ್ಕೂ ಮತ್ತು ಉತ್ತರಪ್ರದೇಶದ ಅಯೋಧ್ಯೆ ಕ್ಷೇತ್ರಕ್ಕೂ ಬಹಳಷ್ಟು ನಂಟಿದೆಯೆಂದು ಇಂದಿಗೂ ಪುರಾಣಕಥೆಗಳು ಮತ್ತು ಸ್ಥಳ ಮಹಿಮೆ ಸಾರಿ ಸಾರಿ ಹೇಳುತ್ತಿವೆ.
 ಈ ಕ್ಷೇತ್ರದ ಇತಿಹಾಸ ಮತ್ತು ಮಹಿಮೆಯನ್ನು ಅರಿತ ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸದ ಸಂಶೋಧನಾ ತಂಡ 2017 ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ, ಐತಿಹ್ಯ ಕುರುಹುಗಳನ್ನು ಶೋಧನೆ ನಡೆಸಿತ್ತು. ದಶರಥ ಮತ್ತು ಶ್ರೀರಾಮಚಂದ್ರರು ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿಯನ್ನು ದೃಢಪಡಿಸಿಕೊಂಡ ತಂಡ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರದ ಶಿಲಾನ್ಯಾಸಕ್ಕೆ ದಶರಥರಾಮೇಶ್ವರ ಕ್ಷೇತ್ರದಿಂದ ಪವಿತ್ರ ಜಲ ಮತ್ತು ಮೃತ್ತಿಕೆಯನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗಿ, ರಾಮಮಂದಿರ ಕಟ್ಟಡದ ತಳಪಾಯಕ್ಕೆ ಹಾಕಲಾಗಿದೆ.

ಕ್ಷೇತ್ರಕ್ಕಿದೆ ಐತಿಹಾಸಿಕ ಹಿನ್ನೆಲೆ

ತೇತ್ರಾಯುಗದಲ್ಲಿ ಅಯೋಧ್ಯೆಯನ್ನು ಆಳುತ್ತಿದ್ದ ದಶರಥ ಮಹಾರಾಜನು, ತನ್ನ ಸೇನೆಯೊಂದಿಗೆ ಗೊಂಡಾರಣ್ಯಗಳಲ್ಲಿ ಬೇಟೆಗಾಗಿ ತಿರುಗುತ್ತಾ, ಇಲ್ಲಿನ ವಜ್ರಗಿರಿಗೆ ಬಂದು ತಲುಪಿದನು. ವಜ್ರಗಿರಿ ಅಂದಿನ ಸಂದರ್ಭದಲ್ಲಿ ಬಹುದೊಡ್ಡ ಕಾನನ ಮತ್ತು ಕಾಡುಪ್ರಾಣಿಗಳ ವಾಸಸ್ಥಳವೂ ಆಗಿತ್ತು. ದಶರಥ ರಾಜನೂ ಒಂದು ದಿನ ಬೇಟೆಯಾಡುತ್ತಾ ಅರಣ್ಯ ಮಧ್ಯದ ಸರೋವರ (ವಜ್ರಗಿರಿ) ಬಳಿಗೆ ಬಂದಾಗ ಮೃಗಗಳನ್ನು ಬೇಟೆಯಾಡಲು ಹುನ್ನಾರದಿಂದ ಕಾಯುತ್ತಿದ್ದ. ಆದರೆ, ಅದೇ ಸಮಯಕ್ಕೆ ದೂರದ ನಾಡಿನಿಂದ ತನ್ನ ಅಂಧ ತಂದೆ ಮತ್ತು ತಾಯಿಯನ್ನು ಹೊತ್ತು ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ಸಂಚರಿಸುತ್ತಾ ಬಂದ ಶ್ರವಣಕುಮಾರನೆಂಬ ರಾಜಕುಮಾರ, ತನಗೂ ಮತ್ತು ತನ್ನ ತಂದೆ, ತಾಯಂದಿರಿಗೂ ಬಾಯರಿಕೆಯಾಗಿದ್ದುದರಿಂದ, ಆ ಸರೋವರದ ದಡದಲ್ಲಿ ಅಡ್ಡೆಯನ್ನು ಇಳಿಸಿ, ಸರೋವರದಲ್ಲಿ ತಾನು ನೀರು ಕುಡಿದು, ತಾಯ್ತಂದೆಯರಿಗೂ ನೀರನ್ನು ತರಲು ನೀರಿನ ಬಳಿಗೆ ಹೋಗಿದ್ದಾನೆ. ನೀರನ್ನು ತುಂಬಿಕೊಳ್ಳುವಾಗ ‘ ಬುಳುಬುಳು ‘ ಶಬ್ದವು ಬಂದಿದ್ದು, ಈ ಶಬ್ದವನ್ನು  ಕೇಳಿದ ದಶರಥನಿಗೆ ಯಾವುದೋ ಬಾರೀಮೃಗ ನೀರು ಕುಡಿಯುತ್ತಿದೆ ಎಂಬ ಭ್ರಮೆಯನ್ನುಂಟುಮಾಡಿತು. ದಶರಥನು ತಡ ಮಾಡದೆ, ಬಿಲ್ಲಿಗೆ ಬಾಣವನ್ನು ಹೂಡಿದನು. ಶಬ್ಧವೇದಿ ವಿದ್ಯೆಯ ಜ್ಞಾನದಿಂದ ಶಬ್ದ ಬಂದ ಕಡೆಗೆ ಗುರಿಯಿಟ್ಟು ಬಾಣ ಬಿಟ್ಟನು.
  ದಶರಥನು ಬಿಟ್ಟ ಬಾಣ, ಶ್ರವಣಕುಮಾರನಿಗೆ ತಾಗಿ ಜೋರು ಧ್ವನಿಯಲ್ಲಿ ಚೀರುತ್ತಾ ಪ್ರಾಣಬಿಟ್ಟನು. ಮಗನ ಆರ್ತನಾದವನು ಕೇಳಿದ ವೃದ್ಧ ತಂದೆ- ತಾಯಂದಿರು ನನ್ನ ಮಗನಿಗೆ ಏನೋ ಪ್ರಾಣ ಸಂಕಟ ಬಂದಿದೆ ಎಂದು ತಡಬಡಿಸುವಷ್ಟರಲ್ಲಿಯೇ, ಅಲ್ಲಿಗೆ ಬಂದ ದಶರಥ ಅನಾಹುತವನ್ನು ತಿಳಿಸಿ, ಕ್ಷಮೆಯನ್ನು ಕೇಳಿದನು. ವೃದ್ಧ ದಂಪತಿಗಳಿಗೆ ತಮ್ಮ ಮಗನನ್ನು ವಧೆ ಮಾಡಿದವನ ಮೇಲೆ ಕೋಪ ಬಂದು, ‘ ನಮ್ಮ ಮಗನನ್ನು ಕೊಂದ ನೀನು ನಮ್ಮಂತೆಯೇ ಪುತ್ರಶೋಕದಿಂದ ನರಳಿ ಸಾಯುವಂತಾಗಲಿ’ ಎಂದು ದಶರಥನಿಗೆ ಶಾಪವಿತ್ತು ಮರಣ ಹೊಂದಿದರು.
 ದಶರಥನು ತನ್ನಿಂದಾದ ಪಾಪ ವಿಮೋಚನೆ ಮಾಡಿಕೊಳ್ಳಲು, ಸರೋವರದ ಬಳಿಯೇ ಅವರ ಸಮಾಧಿಗಳನ್ನು ನಿರ್ಮಿಸಿ, ಪೂಜಾ ಕಾರ್ಯಗಳನ್ನು ಪೂರೈಸಿದನು. ನಂತರ ಶಾಪ ವಿಮೋಚನೆಗಾಗಿ ಸಮೀಪದ ಗುಹೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದನು. ದಶರಥನು ಪ್ರತಿಷ್ಠಾಪಿಸಿದ ಶಿವಲಿಂಗವನ್ನು ಮುಂದೆ ಶ್ರೀರಾಮನು ವನವಾಸಕ್ಕೆ ಬಂದಿದ್ದಂತಹ ಸಂದರ್ಭದಲ್ಲಿ ಪೂಜಿಸಿದ್ದರಿಂದ ಈ ಕ್ಷೇತ್ರಕ್ಕೆ ದಶರಥರಾಮೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇದಕ್ಕೆ ಹಿಂಬು ನೀಡುವಂತೆ ಕ್ಷೇತ್ರ ಕಾನನದಲ್ಲಿದ್ದು, ಇಂದಿಗೂ, ಗುಹೆಯ ಮುಂಭಾಗದಲ್ಲಿರುವ ಪರ್ವತವನ್ನು ‘ಶ್ರವಣಕುಮಾರನ ಪರ್ವತ’ ಎಂದು ಭಕ್ತರು ಕರೆಯುವುದುಂಟು. ಗುಹೆಯಲ್ಲಿ ಸ್ಥಾಪಿತ ಶಿವಲಿಂಗವಿದ್ದು, ಗುಹೆಗೆ ಹೊಂದಿಕೊಂಡೆ ಇಲ್ಲಿ ನಿತ್ಯವೂ ನೀರು ಹರಿಯುತ್ತವೆ. ಶ್ರವಣಕುಮಾರನ ಸಮಾಧಿಯ ಜೊತೆಗೆ ಆತನ ತಂದೆ-ತಾಯಿಯಂದಿರ  ಸಮಾಧಿಗಳು ಇಲ್ಲಿರುವುದನ್ನು ನಾವಿಂದು ಕಾಣಬಹುದಾಗಿದೆ.

ಇದನ್ನೂ ಓದಿ: ಗ್ರಾಮ ಲೆಕ್ಕಾಧಿಕಾರಿ ಸಾವಿಗೆ ಟ್ವಿಸ್ಟ್| ಕುಟುಂಬಸ್ಥರು ಮಾಡಿದ ಆರೋಪ ಏನು

*ಕೋಟ್ :-

*ಅಯೋಧ್ಯೆಯಂತೆಯೇ ಅಭಿವೃದ್ಧಿಯಾಗಲಿ.*

 ದಶರಥ ರಾಮೇಶ್ವರ ಕ್ಷೇತ್ರ ಇದೊಂದು ಐತಿಹಾಸಿಕ ಪುಣ್ಯಕ್ಷೇತ್ರವಾಗಿದ್ದು, ಇದು ಉದಾಸೀನಕ್ಕೆ ಒಳಪಟ್ಟಿರುವುದು ಬೇಸರ ತರಿಸಿದೆ. ಈ ಕ್ಷೇತ್ರಕ್ಕೆ ದಶರಥ ಮತ್ತು ಶ್ರೀರಾಮರು ಬಂದು ಪೂಜೆ ಸಲ್ಲಿಸಿ ಹೋದ, ಇತಿಹಾಸವಿದೆ. ಇದು ಪ್ರಾಚೀನ ಐತಿಹಾಸಿಕ ಕ್ಷೇತ್ರವಾಗಿದ್ದು, ಇಲ್ಲಿ ಪುರತತ್ತ್ವ ಮತ್ತು ಪ್ರಾಕ್ತನ ಇಲಾಖೆಯಿಂದ ಸಾಕಷ್ಟು ಸಂಶೋಧನೆ ಮತ್ತು ಅಧ್ಯಯನಗಳು ನಡೆಯಬೇಕಿದೆ. ಇಲ್ಲಿಗೆ ನಿತ್ಯವೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ಬರುವ ಭಕ್ತರಿಗೆ ಮೂಲಸೌಕರ್ಯಗಳ ಅಗತ್ಯವಿದ್ದು, ಅಯೋಧ್ಯೆಯಂತೆಯೇ ಶ್ರೀ ರಾಮನು ಬಂದು ಹೋಗಿರುವ, ದಶರಥ ರಾಮೇಶ್ವರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಂತೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನವರಿಗೆ ಪತ್ರ ಬರೆಯುವೆ. ಬಸ್ ಸೌಲಭ್ಯ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಶಾಸಕ ಬಿ.ಜಿ.ಗೋವಿಂದಪ್ಪನವರಿಗೆ ತಿಳಿಸುವೆ. ಅಭಿವೃದ್ಧಿಯಾದರೆ, ಇದೊಂದು ರಾಜ್ಯದಲ್ಲಿಯೇ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಲಿದೆ.

ಇದನ್ನೂ ಓದಿ:ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆನಂದ್ ಲೋಕಯುಕ್ತ ಬಲೆಗೆ

ಶ್ರೀ ಶಾಂತವೀರ ಸ್ವಾಮೀಜಿ.

ಪೀಠಾಧ್ಯಕ್ಷರು, ಕುಂಚಿಟಿಗ ಮಠ, ಹೊಸದುರ್ಗ

——————————

*ಕೋಟ್ :

ಅಯೋಧ್ಯೆಯ ಶ್ರೀರಾಮನು ವನವಾಸ ಬಂದಿದ್ದಂತಹ ಸಮಯದಲ್ಲಿ ದಶರಥರಾಮೇಶ್ವರ ಕ್ಷೇತ್ರಕ್ಕೂ ಬಂದಿದ್ದನು ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಇತ್ತೀಚೆಗೆ ಅಂದರೆ, 6 ವರ್ಷಗಳ ಹಿಂದೆ ಇಲ್ಲಿಗೆ ಶ್ರೀ ರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸದ ಸಂಶೋಧನ ತಂಡ ಭೇಟಿ ನೀಡಿತ್ತು. ಕ್ಷೇತ್ರದ ಮಹಿಮೆಯ ಬಗ್ಗೆ ಅವರಿಗೆ ಹೇಳಿದ್ದೆವು. ಅವರು ಬಂದಂತಹ ಸಂದರ್ಭದಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಹೊರಟಿತ್ತು. ದೇವರ ಬಳಿಗೆ ಬಂದ ತಂಡ ರಾಮಮಂದಿರ ನಿರ್ಮಾಣದ ಕುರಿತು ಕೇಳಿದ್ದರು. ಇದಕ್ಕೆ ದೇವರು ಒಂದು ವರ್ಷದ ಒಳಗೆ ಮಂದಿರ ನಿರ್ಮಾಣಕ್ಕೆ ಅವಕಾಶ ಒದಗಿ ಬರಲಿದೆ ಎಂದು ಹೇಳಿತ್ತು. ದೇವರ ಭವಿಷ್ಯದಂತೆ ವರ್ಷದ ಒಳಗಾಗಿ ಮಂದಿರದ ಶಿಲಾನ್ಯಾಸ ನೆರವೇರಿತು. ಇದೀಗ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಸರ್ಕಾರ ಅಯೋಧ್ಯೆಯನ್ನು ಅಭಿವೃದ್ಧಿ ಮಾಡಿದಂತೆ, ರಾಮನು ಬಂದು ಹೋಗಿರುವ ದಶರಥ ರಾಮೇಶ್ವರ ಪುಣ್ಯಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು.

ಏನ್.ಕೆ. ರವಿಕುಮಾರ್

ಸಂಚಾಲಕರು, ದಶರಥ ರಾಮೇಶ್ವರ ಕ್ಷೇತ್ರದ ಅಭಿವೃದ್ಧಿ ಸಮಿತಿ.

ಇದನ್ನೂ ಓದಿ: ರಾಜ್ಯ ಎಲ್ಲಾ ಜಿಲ್ಲೆಗಳಿಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ,ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು ಸಂಪೂರ್ಣ ಮಾಹಿತಿ

[t4b-ticker]

You May Also Like

More From Author

+ There are no comments

Add yours