ಸತತ ನಾಲ್ಕನೆ ಬಾರಿಗೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಮುಡಿಗೇರಿಸಿಕೊಂಡ ಹೊಸದುರ್ಗ

 

ಚಿತ್ರದುರ್ಗ :(ಕರ್ನಾಟಕ ವಾರ್ತೆ) :
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣವು ನಾಲ್ಕನೆ ಬಾರಿಗೆ ರಾಷ್ಟ್ರೀಯ ಮಟ್ಟದ ಸ್ವಚ್ಛ ಸರ್ವೇಕ್ಷಣಾ 2023 ಪ್ರಶಸ್ತಿಯನ್ನು ಪಡೆದಿದ್ದು, ನವದೆಹಲಿಯ ಭಾರತ್ ಮಂಟಪಂ ನ ಪ್ರಗತಿ ಮೈದಾನ ಆವರಣದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಹೊಸದುರ್ಗ ಪಟ್ಟಣದಲ್ಲಿನ ಘನ ತ್ಯಾಜ್ಯ ವಿಲೇವಾರಿ, ಮನೆ ಮನೆ ಕಸ ಸಂಗ್ರಹ, ತ್ಯಾಜ್ಯದ ಸಂಸ್ಕರಣೆ, ವಿಲೇವಾರಿ, ಸ್ವಚ್ಛತೆ ಕುರಿತಂತೆ ಕೇಂದ್ರ ಸರ್ಕಾರ ನಡೆಸಿದ ರಾಷ್ಟ್ರೀಯ ಮಟ್ಟದ ಮೌಲ್ಯಮಾಪನದಲ್ಲಿ 01 ಲಕ್ಷ ಜನಸಂಖ್ಯೆಯೊಳಗಿನ ಪಟ್ಟಣದ ವಿಭಾಗದಲ್ಲಿ ಹೊಸದುರ್ಗ ಪಟ್ಟಣಕ್ಕೆ ಸ್ವಚ್ಛ ಸರ್ವೇಕ್ಷಣಾ 2023 ಪ್ರಶಸ್ತಿ ಗಳಿಸಿದೆ.  ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಆಗಮಿಸಿದ್ದ ತಂಡವು, ಹೊಸದುರ್ಗ ಪಟ್ಟಣದಲ್ಲಿನ ಮಾರುಕಟ್ಟೆ, ಬಸ್ ನಿಲ್ದಾಣ ಮುಂತಾದ ಪ್ರದೇಶಗಳಿಗೆ ಸ್ವಯಂ ಹಾಗೂ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೌಲ್ಯಮಾಪನ ಮಾಡಿತ್ತು.  ಅಲ್ಲದೆ ಪಟ್ಟಣದ ಜನಸಂಖ್ಯೆಯ ಶೇ. 20 ರಷ್ಟು ಜನರಿಂದ ಈ ಕುರಿತು ಫೀಡ್ ಬ್ಯಾಕ್ ಪಡೆದುಕೊಂಡಿತ್ತು.  ಇದರ ಜೊತೆಗೆ ಪಟ್ಟಣದಲ್ಲಿ ಬಯಲು ಬಹಿರ್ದೆಸೆ ಇಲ್ಲದಿರುವಿಕೆ, ನಗರದಲ್ಲಿನ ಕಸ ಸಂಗ್ರಹಣೆ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಬಗ್ಗೆಯೂ ಮೌಲ್ಯಮಾಪನ ಮಾಡಿತ್ತು.
ಕೇಂದ್ರ ಸರ್ಕಾರದಿಂದ ಸ್ವಚ್ಛ ಸರ್ವೇಕ್ಷಣೆ ಕಾರ್ಯಕ್ರಮದಡಿ ರಾಜ್ಯದ 318 ನಗರ ಸ್ಥಳೀಯ ಸಂಸ್ಥೆಗಳು, ದೇಶದ 4414 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರೀತಿ ಮೌಲ್ಯಮಾಪನ ಕಾರ್ಯ ಕೈಗೊಳ್ಳಲಾಗಿದ್ದು, ದೇಶಾದ್ಯಂತ ಒಟ್ಟು 51 ನಗರ ಸ್ಥಳೀಯ ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ದೇಶದ ದಕ್ಷಿಣ ವಲಯದಿಂದ ಕರ್ನಾಟಕ ರಾಜ್ಯದ ಹೊಸದುರ್ಗ ಪಟ್ಟಣವು ಸ್ವಚ್ಛ ಸರ್ವೇಕ್ಷಣಾ 2023 ಪ್ರಶಸ್ತಿಗೆ ಆಯ್ಕೆಯಾಗಿದೆ.  ವಿಶೇಷವೆಂದರೆ ಹೊಸದುರ್ಗ ಪಟ್ಟಣವು ನಾಲ್ಕನೆ ಬಾರಿ ಈ ಪ್ರಶಸ್ತಿ ಪಡೆದುಕೊಂಡಿದ್ದು, ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದೆ.
ನವದೆಹಲಿಯ ಭಾರತ್ ಮಂಟಪಂ ನ ಪ್ರಗತಿ ಮೈದಾನ ಆವಣದಲ್ಲಿ ಜರುಗಿದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.  ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ, ಸ್ವಚ್ಛ ಭಾರತ್ ಮಿಷನ್ ಅಭಿಯಾನದ ನಿರ್ದೇಶಕ ಲಕ್ಷ್ಮೀಕಾಂತ್ ರೆಡ್ಡಿ, ಚಿತ್ರದುರ್ಗ ಜಿಲ್ಲೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹೊಸದುರ್ಗ ಪಟ್ಟಣದಲ್ಲಿ ಕಸ ವಿಲೇವಾರಿ, ಶೌಚಾಲಯ ಬಳಕೆ, ಪಟ್ಟಣದ ಸ್ವಚ್ಛತೆ, ತ್ಯಾಜ್ಯ ಸಂಸ್ಕರಣೆ ಮುಂತಾದ ಕಾರ್ಯಗಳಲ್ಲಿ ಅಲ್ಲದೆ ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಕಾಳಜಿ, ಪುರಸಭೆಯ ಅಧಿಕಾರಿ ಸಿಬ್ಬಂದಿ, ಪೌರಕಾರ್ಮಿಕರು, ಎಲ್ಲ ಜನಪ್ರತಿನಿಧಿಗಳು ಕೈಗೊಂಡ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಹೊಸದುರ್ಗ ಪಟ್ಟಣಕ್ಕೆ ನಾಲ್ಕನೆ ಬಾರಿಗೆ ರಾಷ್ಟ್ರೀಯ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಬರಲು ಸಾಧ್ಯವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು.
[t4b-ticker]

You May Also Like

More From Author

+ There are no comments

Add yours