ಪರಿಸರ ರಕ್ಷಣೆಯ ಧ್ಯೇಯದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ ವಾಹನಕ್ಕೆ ಡಿಸಿ ಟಿ.ವೆಂಕಟೇಶ್ ಚಾಲನೆ

 

 ಪರಿಸರ ರಕ್ಷಣೆಯ ಧ್ಯೇಯದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ
*****************
ಜನಜಾಗೃತಿ ಎಲ್.ಇ.ಡಿ. ವಾಹನಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್.ಟಿ ಹಸಿರು ನಿಶಾನೆ
*********************
ಚಿತ್ರದುರ್ಗ (ಕರ್ನಾಟಕ ವಾರ್ತೆ) ಫೆ.13:
ವಾಯು ಮಾಲಿನ್ಯ, ಪರಿಸರ ಮಾಲಿನ್ಯ ತಡೆಗಟ್ಟುವುದು ಹಾಗೂ ರಸ್ತೆ ಸಂಚಾರ ನಿಯಮಗಳ ಪಾಲನೆ ಕುರಿತಂತೆ ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಲು ಸಾರಿಗೆ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಎಲ್.ಇ.ಡಿ. ವಾಹನದ ಮೂಲಕ ಹಮ್ಮಿಕೊಂಡಿರುವ ಪ್ರಚಾರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಅತಿಯಾದ ಪೆಟ್ರೋಲ್ ಇಂಧನಗಳ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲೂ ಶುದ್ದಗಾಳಿ ಗುಣಮಟ್ಟ ಕಡಿಮೆಯಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸಾಂಪ್ರದಾಯಕ ಇಂಧನಗಳ ಬದಲಿಗೆ ಎಲೆಕ್ಟ್ರಿಕಲ್ ವಾಹನ ಹಾಗೂ ಸಮೂಹ ಸಾರಿಗೆ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವತಿಯಿಂದ ಪರಿಸರ ರಕ್ಷಣೆಯ ಧ್ಯೇಯದೊಂದಿಗೆ, ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದ್ದು, ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್.ಟಿ ಜನಜಾಗೃತಿ ಎಲ್.ಇ.ಡಿ ವಾಹನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.
ರಸ್ತೆ ಸುರಕ್ಷತೆಯು ಜೀವನದ ಸುರಕ್ಷತೆಯಾಗಿದೆ.  ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಬಳಸುವುದು, ಅಲ್ಲದೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  ಇದರ ಜೊತೆಗೆ ಅತಿಯಾದ ಇಂಧನಗಳ ಬಳಕೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿದ್ದು, ಸಾಮೂಹಿಕ ಸಂಚಾರ ವ್ಯವಸ್ಥೆ ಬಳಸುವುದಕ್ಕೆ ಆದ್ಯತೆ ನೀಡುವುದು ಮುಂತಾದ ಕಾರ್ಯಗಳಿಂದ ವಾಯುಮಾಲಿನ್ಯ ತಡೆಗಟ್ಟಬಹುದಾಗಿದೆ.  ಸಾರ್ವಜನಿಕರು ಇಂತಹ ಕಾರ್ಯಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ ಅವರು, ಎಲ್.ಇ.ಡಿ ವಾಹನವು ಜಿಲ್ಲೆಯಾದ್ಯಂತ ಸಂಚರಿಸಿ, ಸಾರ್ವಜನಿಕರಲ್ಲಿ ಪರಿಸರ ರಕ್ಷಣೆ, ರಸ್ತೆ ಸುರಕ್ಷತಾ ಸೂಚನೆಗಳು, ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಿದೆ. ಸಾರಿಗೆ ಇಲಾಖೆ ವತಿಯಿಂದ 6 ವಿವಿಧ ಬಗೆಯ ಕಿರುಚಿತ್ರಗಳನ್ನು ನಿರ್ಮಿಸಲಾಗಿದೆ.  ಜಾತ್ರೆ, ಸಂತೆ, ಪಟ್ಟಣ, ನಗರ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಎಲ್.ಇ.ಡಿ ಪರದೆಯ ಮೇಲೆ ಈ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು.  ಸಾರ್ವಜನಿಕರು ಕಿರು ಚಿತ್ರಗಳನ್ನು ವೀಕ್ಷಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜನಜಾಗೃತಿ ಎಲ್.ಇ.ಡಿ ವಾಹನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ, ಮೋಟಾರು ವಾಹನ ನಿರೀಕ್ಷಕರಾದ ಶಾನುಭಾಗ್, ಪ್ರಕಾಶ್, ಲೋಕೋಪಯೋಗಿ ಇಲಾಖೆಯ ರಾಜೇಶ್, ಸಾರಿಗೆ ಇಲಾಖೆಯ ಅಧೀಕ್ಷಕ ಸಿ.ಡಿ.ಹೇಮಂತ್ ಕುಮಾರ್, ಪ್ರಸನ್ನ ಹಾಗೂ ಇತರೆ ಸಿಬ್ಬಂದಿ ಇದ್ದರು.
[t4b-ticker]

You May Also Like

More From Author

+ There are no comments

Add yours