ಚಿತ್ರದುರ್ಗ-ಸಮಗ್ರ ಕೃಷಿ ಪದ್ದತಿ ಅಳವಡಿಕೆಗೆ ಸಲಹೆ

 

ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ತರಬೇತಿ ಕಾರ್ಯಕ್ರಮ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜ.01:
ಸಮಗ್ರ ಕೃಷಿ ಪದ್ದತಿಯನ್ನು ರೈತರು ಅನುಸರಿಸುವುದರಿಂದ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬನೆಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ರೈತರಿಗೆ “ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ”ಕುರಿತು ಒಂದು ದಿನದತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಪ್ರಸ್ತುತ ಹವಾಮಾನ ವೈಪಾರಿತ್ಯದಿಂದ ಕೃಷಿಯನ್ನು ಒಂದೇ ನಂಬಿ ಆರ್ಥಿಕವಾಗಿ ಮುನ್ನೆಡೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಕೃಷಿಗೆ ಪೂರಕವಾದ ತೋಟಗಾರಿಕೆ ಬೆಳೆಗಳು, ಜೇನು ಸಾಕಾಣಿಕೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಕೈಗೊಳ್ಳುವುದರಿಂದ ಒಂದರಲ್ಲಿ ನಷ್ಟವಾದರೆ ಇನ್ನೊಂದು ಕೃಷಿ ಪೂರಕ ಚಟುವಟಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು ಎಂದರು.
ಸಮಗ್ರ ಕೃಷಿ ಪದ್ದತಿಯ ಒಂದು ಅಂಗವಾದ ಕುರಿ ಮತ್ತು ಮೇಕೆ ಸಾಕಾಣಿಕೆಯ ಕುರಿತು ವೈಜ್ಞಾನಿಕವಾಗಿ ಉತ್ತಮ ಕುರಿ ಮತ್ತು ಮೇಕೆ ತಳಿಯ ಆಯ್ಕೆ, ಕುರಿ ಶೆಡ್ ಮತ್ತು ಮೇವಿನ ನಿರ್ವಹಣೆ ಹಾಗೂ ಅವುಗಳ ಆರೋಗ್ಯ ನಿರ್ವಹಣೆ ಬಗ್ಗೆ ರೈತರು ಈ ತರಬೇತಿಯಲ್ಲಿ ನಿಡಲಾಗುವ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಪಶುಸಂಗೋಪನಾ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಭಾರತದಲ್ಲಿ ಮಾಂಸಹಾರ ಸೇವನೆಗೆ ಅತೀ ಹೆಚ್ಚು ಕುರಿ ಮತ್ತು ಮೇಕೆ ಮಾಂಸ ಉಪಯೋಗದಲ್ಲಿದ್ದು, ಕುರಿ ಮತ್ತು ಮೇಕೆಯಿಂದ ಹಾಲು, ಉಣ್ಣೆ, ಚರ್ಮ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಉತ್ತಮ ಗೊಬ್ಬರ ದೊರೆಯುತ್ತದೆ ಎಂದು ತಿಳಿಸಿದ ಅವರು, ಕುರಿ ಮತ್ತು ಮೇಕೆ ಸಾಕಣಿಕೆಯಲ್ಲಿ ರೈತರಲ್ಲಿ ಆಸಕ್ತಿ ಮೂಡಿಸಲು ಬಿ.ಜಿಕೆರೆ ವೀರಭದ್ರಪ್ಪ, ಶಿರಾ ತಾಲ್ಲೂಕಿನ ದಿ. ದೊಡ್ಡಜ್ಜಿ, ಸುಬ್ಬಾರೆಡ್ಡಿ, ವೀರಕೆಂಪಣ್ಣರ ಯಶೋಗಾಥೆಯನ್ನು ಸವಿವರವಾಗಿ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯು ಸಾಂಪ್ರದಾಯಿಕವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಪ್ರಸಿದ್ದಿಯಾಗಿದ್ದು, ಸಾಕಾಣಿಕೆಯ ವೈಜ್ಞಾನಿಕ ಜ್ಞಾನ, ಬದ್ದತೆ ಹಾಗೂ ಶಿಸ್ತು ರೂಢಿಸಿಕೊಂಡರೆ ಉತ್ತಮ ಲಾಭವನ್ನು ನಿರೀಕ್ಷಿಸಲು ಸಾಧ್ಯ. ಜಿಲ್ಲೆಯಲ್ಲಿ ಕುರಿ ಸಾಕಾಣಿಕೆಯ ರೈತರು ಒಟ್ಟುಗೂಡಿ ಕುರಿ ಫೆಡರೇಷನ್ ಮಾಡಿಕೊಳ್ಳುವುದರಿಂದ ಎಲ್ಲರೂ ಸಮಗ್ರವಾಗಿ ಮುನ್ನೆಡೆಯಲು ಅನುಕೂಲಕರವಾಗಿದೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಆಟೋ-ರಾಯಲ್ ಎನ್ ಫೀಲ್ಡ್ ಬೈಕ್ ನಡುವೆ ಅಪಘಾತ ಸ್ಥಳದಲೇ ಎರಡು ಸಾವು

ಕುರಿ ಮತ್ತು ಮೇಕೆ ಮಾಂಸಕ್ಕೆ ಅತೀ ಹೆಚ್ಚು ಬೇಡಿಕೆ

ಕುರಿ ಮತು ್ತಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕುರಿ (13.50 ಲಕ್ಷ) ಮತ್ತು ಮೇಕೆಗಳ (3.85 ಲಕ್ಷ) ಸಂಖ್ಯೆಯಿದ್ದು, ಕುರಿ ಮತ್ತು ಮೇಕೆ ಮಾಂಸಕ್ಕೆ ಅತೀ ಹೆಚ್ಚು ಬೇಡಿಕೆ ಹಾಗೂ ಅವುಗಳ ಸಾಕಾಣಿಕೆ ಉತ್ತಮ ಅವಕಾಶಗಳಿವೆ. ಇವು ಸದಾ ಕಾಲ ಸಣ್ಣ ಮತ್ತು ಅತೀ ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ತಂದುಕೊಡುವಂತಾಗಿವೆ. ಕುರಿಗಳಲ್ಲಿ ಡೆಕನಿ, ಬನ್ನೂರು ಮತ್ತು ಬಳ್ಳಾರಿ ತಳಿಗಳು ಉತ್ತಮವಾಗಿದ್ದು ಮೇಕೆಯಲ್ಲಿ ನಂದಿದುರ್ಗ ತಳಿಯು  ಹೆಸರುವಾಸಿಯಾಗಿದೆ. 25-30 ಕುರಿಗಳಿಗೆ ಒಂದು ಟಗರನ್ನು ಸಾಕುವುದರಿಂದ ಗಣನೀಯವಾಗಿ ಅವುಗಳ ವಂಶಾಭಿವೃದ್ಧಿ ಹೆಚ್ಚಿಸಬಹುದು ಎಂದರು.

ಕುರಿ ಮತ್ತು ಮೇಕೆ ಸಾಕಾಣಿಕೆ ಪದ್ದತಿ ಮತ್ತು ಆರೋಗ್ಯ ನಿರ್ವಹಣೆಯ ಕುರಿತು ಹಾಜರಿದ್ದ ರೈತರ ಪ್ರಶ್ನೆಗಳಿಗೆ ಚರ್ಚಿಸುವುದರ ಮೂಲಕ ಮಾಹಿತಿ ನೀಡಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ರೈತರು ಸಹ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸರ್ಕಾರ ಹಲವು ಯೋಜನೆಗಳು ಡಿಬಿಟಿ ಮೂಲಕ ಸಹಾಯಧನ

ಕೃಷಿ ಅಧಿಕಾರಿ ಎಂ.ಜೆ.ಪವಿತ್ರಾ ಮಾತನಾಡಿ, ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಪಹಣಿ ಮತ್ತು ಆಧಾರ್‍ನೊಂದಿಗೆ ನೋಂದಾಯಿಸುವುದರಿಂದ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸರ್ಕಾರದ ಹಲವು ಯೋಜನೆಗಳಲ್ಲಿ ಡಿ.ಬಿ.ಟಿ ಮೂಲಕ ಸಹಾಯಧನ ಪಡೆಯಲು ಸಹಕಾರಿಯಾಗಿದೆ. ಪಿ.ಎಂ. ಕಿಸಾನ್‍ಯೋಜನೆಯಡಿ ಸೌಲಭ್ಯವನ್ನು ಮುಂದುವರೆಸಲು ಇ.ಕೆ.ವೈ.ಸಿ ಮಾಡಿಸುವುದು ಕಡ್ಡಾಯವಾಗಿದ್ದು, ರೈತರು ಫ್ರೂಟ್ಸ್‍ತಂತ್ರಾಂಶದ ನೋಂದಣಿ, ಆಧಾರ್‍ಜೋಡಣೆ ಮತ್ತು ಇ.ಕೆ.ವೈ.ಸಿ ಕರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಿದರು.
ಕೃಷಿ ಅಧಿಕಾರಿಯಾದ ಪವಿತ್ರಾ ಎಂ. ಜೆ. ಮತ್ತು ಟ.ಪಿ ರಂಜಿತಾ ತರಬೇತಿಗೆ ರೈತರ ನೋಂದಾವಣಿ ಮಾಡಿದರು.  ಜಿಲ್ಲಾ ಕೃಷಿ ತರಬೇತಿಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ) ಎಂ. ಉಷಾರಾಣಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿಕೇಂದ್ರ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ರೈತರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours