ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಪದಗ್ರಹಣ ಕಾರ್ಯಕ್ರಮ, ಆ್ಯಪ್ ಮೂಲಕ ಕಸಾಪ ಚುನಾವಣೆ: ನಾಡೋಜ ಮಹೇಶ ಜೋಶಿ

 

ಚಿತ್ರದುರ್ಗ, ಡಿಸೆಂಬರ್15:

ಮುಂದಿನ ದಿನಗಳಲ್ಲಿ ಒಟಿಪಿ ಆಧಾರಿತ ಆ್ಯಪ್ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಚಿತ್ರದುರ್ಗ ನಗರದ ದೊಡ್ಡಪೇಟೆಯ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೇಂದ್ರ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಡೋಜ ಡಾ.ಮಹೇಶ ಜೋಶಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಬಾರಿ ನಡೆಯುವ ಕಸಾಪ ಚುನಾವಣೆಯು ನಯಾಪೈಸೆ ಖರ್ಚು ಇಲ್ಲದಂತೆ ಮನೆಯಿಂದಲೇ ಆ್ಯಪ್ ಮೂಲಕ ಮತದಾನ ಮಾಡುವ ಕ್ರಾಂತಿಕಾರಕ ಬದಲಾವಣೆ ಜಾರಿಗೆ ತರಲಾಗುವುದು ಎಂದರು.
ಆ್ಯಪ್ ಮೂಲಕ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುವುದು. ಇದರಿಂದ ಮತದಾರರು ಮತಗಟ್ಟೆಗೆ ಬರುವುದನ್ನು ತಡೆಯಬಹುದು, ಚುನಾವಣೆಗಾಗಿ ಕೋಟಿಗಟ್ಟಲೆ ಹಣ ಖರ್ಚಾಗುವುದನ್ನು ತಡೆಯಬಹುದಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಬೇಕು ಎಂದು ಕಾಯ್ದೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ತಾಲ್ಲೂಕು ಅಧ್ಯಕ್ಷರಿಗೂ ಚುನಾವಣೆ ನಡೆಯಲಿದೆ ಎಂದರು.
ನಿಜವಾದ ಕನ್ನಡ ಸಂಸ್ಕøತಿ, ಅಸ್ಮಿತೆ ಎಂಬುವುದು ಎಲ್ಲರಿಗೂ ಸಮಗೌರವ ಕೊಡಲಿದೆ. ಈ ನಿಟ್ಟಿನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತು, ಜನಪರ, ಜನಪಯೋಗಿ ಪರಿಷತ್ತು ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಮನೆಯಲ್ಲಿಯೇ ಕುಳಿತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ವಿಶ್ವದಲ್ಲಿರುವ ಕನ್ನಡಿಗರು ಯಾವುದೇ ತೊಂದರೆ ಇಲ್ಲದೇ ಸದಸ್ಯತ್ವ ಪಡೆಯಬಹುದು. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.
ಪದಗ್ರಹಣ ಕಾರ್ಯಕ್ರಮ ಎನ್ನುವುದಕ್ಕಿಂತ ಸೇವಾ ಮನೋಭಾವನೆಯಿಂದ ಜವಾಬ್ದಾರಿ ಸ್ವೀಕಾರದ ಸಮಾರಂಭ ಎಂದು ಹೇಳಬಯಸುತ್ತೇನೆ. ನಾವು ಯಾರೂ ಸಹ ಅಧಿಕಾರವನ್ನು ಚಲಾಯಿಸಲು ಬಂದವರಲ್ಲ. ಸೇವಾ ಮನೋಭಾವನೆಯಿಂದ ಕನ್ನಡದ ಅಸ್ಮಿತೆ ಹೆಚ್ಚು ಮಾಡುವಂತಹ, ಕನ್ನಡ ತನ ಎತ್ತಿ ಹಿಡಿಯುವ ಜವಾಬ್ದಾರಿಯಿಂದ ಬಂದಿದ್ದೇವೆ ಎಂದು ಹೇಳಿದರು.
ಚಿತ್ರದುರ್ಗದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ದುರ್ಗದ ಬಗ್ಗೆ ಬಹಳ ಹೆಮ್ಮೆ ಇದೆ. ತರಾಸು ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ಮನುಷ್ಯ ಸಹಜವಾದ ಸಂದರ್ಭದಲ್ಲಿ ಬೇಸರವಾದಾಗ ದುರ್ಗಾಸ್ತಮಾನ ಕಾದಂಬರಿ ಓದಲು ಪ್ರಾರಂಭ ಮಾಡಿದರೆ ಮುಗಿಯುವವರೆಗೂ ಬಿಡುವುದಿಲ್ಲ. ತ.ರಾ.ಸು. ರಚಿಸಿದ ಎಲ್ಲಾ ಕಾದಂಬರಿ ಹಾಗೂ ಸಾಹಿತ್ಯವನ್ನು ಮರು ಮುದ್ರಣ ಮಾಡಿಸಿ ರಿಯಾಯಿತಿ ದರದಲ್ಲಿ ನೀಡಲು ಕ್ರಮ ವಹಿಸಲಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಮಾತನಾಡಿ, ಪ್ರೌಢ ಮತ್ತು ಮಾಧ್ಯಮಿಕ ಹಂತಗಳಲ್ಲಿ ಹಾಗೂ ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ನೀಡಿ ಕನ್ನಡ ಪುಸ್ತಕಗಳನ್ನು ಓದಲು ಹದಿನೈದು ದಿನಗಳ ಕಾಲಾವಕಾಶ ನೀಡಿ ನಂತರ ಆ ಪುಸ್ತಕಗಳಿಗೆ ಸಂಬಂಧಿಸಿದಂತೆ ಅನಿಸಿಕೆ, ಅಭಿಪ್ರಾಯ ಬರೆಯಲು, ಸ್ಪರ್ಧಾತ್ಮಕ ಮನೋಭಾವ ಮೂಡಿಸುವ ಯೋಜನೆ ಇದೆ. ಇದರಿಂದ ಕನ್ನಡ ಓದು, ಬರಹ, ಅರ್ಥ ಗ್ರಹಿಕೆ ಜೊತೆಗೆ ಕನ್ನಡ ಅಭಿಮಾನ ಮೂಡಿಸಲು ಸಹಕಾರಿಯಾಗಲಿದೆ ಎಂಬುವುದು ನನ್ನ ಅಭಿಪ್ರಾಯ ಎಂದರು.
ತರಾಸು ಜನಿಸಿ 100 ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ಜನ್ಮ ಶತಮಾನೋತ್ಸವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲು ತರಾಸು ಸಾಹಿತ್ಯವನ್ನು ಜನಮಾಸಕ್ಕೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ಅಗತ್ಯ ಸಹಕಾರದ ಅಗತ್ಯವಿದೆ ಎಂದರು.
ಡಯಟ್ ಉಪನ್ಯಾಸ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವೃತ್ತಿನಿರತ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ಸ್ ಅಸೋಸಿಯೇಷನ್‍ನ ಪಿ.ಎಲ್.ಸುರೇಶ್‍ರಾಜು ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಎ.ಸತ್ಯನಾರಾಯಣ ಶೆಟ್ಟಿ, ಪದಾಧಿಕಾರಿ ರಾಮಲಿಂಗಶೆಟ್ರು ಇದ್ದರು. ಉಪನ್ಯಾಸಕ ಧನಂಜಯ ಸ್ವಾಗತಿಸಿದರು.
ಫೋಟೋ ವಿವರ: ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಪದಗ್ರಹಣ ಮಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಕನ್ನಡ ಬಾವುಟ ಹಸ್ತಾಂತರಿಸಿದರು. ಕೇಂದ್ರ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಇದ್ದರು.
=====

[t4b-ticker]

You May Also Like

More From Author

+ There are no comments

Add yours