ಒಕ್ಕಲಿಗ ಸಂಘದ ಚುನಾವಣಾ ಫಲಿತಾಂಶ ಪ್ರಕಟ:ಜೆ.ರಾಜು ಬೇತೂರು ಪಾಳ್ಯಗೆ ಭರ್ಜರಿ ಗೆಲುವು

 

 

ಚಿತ್ರದುರ್ಗ:  ಅತ್ಯಂತ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿನ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಜೆ.ರಾಜು ಬೇತೂರು ಪಾಳ್ಯ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಇವರ ಗೆಲುವಿನೊಂದಿಗೆ ಹಿರಿಯೂರು ತಾಲೂಕಿಗೆ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನ ದಕ್ಕಿದೆ. ಈ ಹಿಂದೆ ಗನ್ನಾಯಕನಹಳ್ಳಿಯ ಆರ್.ಮಂಜುನಾಥ್ ಆಯ್ಕೆಯಾಗಿದ್ದು ಬಿಟ್ಟರೆ ಈಗ ರಾಜು ಅವರು ನಿರ್ದೇಶಕರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಸೇರಿದಂತೆ ಬೆಳಗಾವಿ, ವಿಜಯಪುರ, ಬಳ್ಳಾರಿ, ದಾವಣಗೆರೆ, ರಾಯಚೂರು, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ನಡೆದ ಚಿತ್ರದುರ್ಗ ಜಿಲ್ಲೆಯ ನಿರ್ದೇಶಕರ ಚುನಾವಣೆಯಲ್ಲಿ ಜೆ.ರಾಜು 4074 ಮತಗಳನ್ನು ಪಡೆದು ಆಯ್ಕೆಯಾದರೆ ಅವರ ಸಮೀಪ ಸ್ಪರ್ಧಿ ಚಳ್ಳಕೆರೆ ತಾಲೂಕಿನ ಟಿ.ಎನ್.ಕೋಟೆಯ ಅಭಿಜಿತ್ ಬಿ.ಎಲ್.ಗೌಡ ಅವರು 2960 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದ ಡಾ.ಶ್ರೀನಾಥ್ 36, ಧನಂಜಯ 35, ಎಂ.ಎನ್.ಬಸವರಾಜ್ 13 ಮತಗಳನ್ನು ಪಡೆದು ಸೋತಿದ್ದಾರೆ. ಬೇತೂರು ರಾಜು ಅವರಿಗೆ ಹಿರಿಯೂರಿನಲ್ಲಿ 987, ಚಿತ್ರದುರ್ಗದಲ್ಲಿ132 ಲೀಡ್ ಬಂದರೆ ಅವರ ಪ್ರತಿಸ್ಪರ್ಧಿ ಅಭಿಜಿತ್ ಗೌಡರಿಗೆ ಚಳ್ಳಕೆರೆ ತಾಲೂಕಿನಲ್ಲಿ 4 ಲೀಡ್ ಬಂದಿದೆ.

ಚಿತ್ರದುರ್ಗ ಸೇರಿದಂತೆ ಮಧ್ಯ ಮತ್ತು ಉತ್ತರ ಕರ್ನಾಟಕದ 8 ಜಿಲ್ಲೆಗಳಿಂದ 8997 ಮತದಾರರಿದ್ದು ಆ ಪೈಕಿ 7164 ಮತಗಳು ಚಲಾವಣೆ ಆಗಿದ್ದವು. 7118 ಮತಗಳು ಸಿಂಧುವಾಗಿದ್ದು 46 ಮತಗಳು ತಿರಸ್ಕೃತಗೊಂಡಿವೆ.

ಜಿಲ್ಲಾ ಒಕ್ಕಲಿಗ ಸಂಘದಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಒಟ್ಟು 6 ಟೇಬಲ್ ಗಳಲ್ಲಿ 3 ಸುತ್ತು ಮತ ಎಣಿಕೆ ಮಾಡಲಾಯಿತು.

1ನೇ ಸುತ್ತಿನ ಮತ ಎಣಿಕೆಯಲ್ಲಿ ಜೆ.ರಾಜು 1241 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಅಭಿಜಿತ್ ಗೌಡ 1105 ಮತಗಳನ್ನು ಪಡೆದು ಹಿನ್ನೆಡೆ ಅನುಭವಿಸಿದರು. 2ನೇ ಸುತ್ತಿನಲ್ಲಿ ಅಭಿಜಿತ್ 955, ಜೆ.ರಾಜು1405, 3ನೇ ಮತ್ತು ಅಂತಿಮ ಸುತ್ತಿನಲ್ಲಿ ಅಭಿಜಿತ್ 900 ಮತಗಳನ್ನು ಪಡೆದರೆ ರಾಜು 1428 ಮತಗಳನ್ನು ಪಡೆದರು. ಮೂರು ಸುತ್ತಿನಲ್ಲೂ ಜೆ.ರಾಜು ಮುನ್ನಡೆ ಕಾಯ್ದುಕೊಂಡು ಒಟ್ಟು 4074 ಮತಗಳನ್ನು ಪಡೆದು 1114 ಮತಗಳ ಅಂತರದಿಂದ ಭಾರಿ ಗೆಲುವು ಸಾಧಿಸಿದರು. ಮೂರು ಸುತ್ತುಗಳಿಂದ ಅಭಿಜಿತ್ 2960 ಮತಗಳನ್ನು ಪಡೆದು ಸೋಲು ಒಪ್ಪಿಕೊಂಡರು.

ಚುನಾವಣಾಧಿಕಾರಿಗಳಾಗಿ ಅಂಜನಮೂರ್ತಿ ಕರ್ತವ್ಯ ನಿರ್ವಹಿಸಿದರು. ಸಹಕಾರ ಸಂಘಗಳ ಉಪ ನಿರ್ದೇಶಕ ಬಿ.ಜಯಪ್ರಕಾಶ್, ಸಹಾಯಕ ನಿರ್ದೇಶಕಿ ಲಾವಣ್ಯ ಸೇರಿದಂತೆ ಒಟ್ಟು 20 ಮಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರು.

ಅದ್ಧೂರು ಮೆರವಣಿಗೆ-ಅಧಿಕ ಮತಗಳ ಅಂತರದಿಂದ ಜೆ.ರಾಜು ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು ಹೂವಿನ ಹಾರಗಳನ್ನು ರಾಜು ಅವರಿಗೆ ಹಾಕಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದರಲ್ಲದೆ ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.

ನಂತರ ನ್ಯೂಸ್ 19 ಕನ್ನಡ ಜೊತೆಯಲ್ಲಿ ಮಾತನಾಡಿದ ಜೆ.ರಾಜು ಬೇತೂರು ಪಾಳ್ಯ ಅವರು, ಜಿಲ್ಲಾ ಒಕ್ಕಲಿಗ ಸಂಘದ ಪುನರುಜ್ಜೀವನ ಕಾರ್ಯ ಸೇರಿದಂತೆ ಚಳ್ಳಕೆರೆ ಮತ್ತು ಹಿರಿಯೂರು ತಾಲೂಕುಗಳ ಒಕ್ಕಲಿಗ ಸಂಘಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ. ಒಕ್ಕಲಿಗ ಜನಾಂಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ರಕ್ಷಣೆಗೆ ಒತ್ತು ನೀಡುವುದರ ಜೊತೆಗೆ ಜನಾಂಗದ ಹಾಸ್ಟೆಲ್ ಸೌಲಭ್ಯಗಳನ್ನು ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.

ಒಕ್ಕಲಿಗ, ಕುಂಚಿಟಿಗ ಎಂದು ಯಾವುದೇ ಬೇಧ ಮಾಡುವುದಿಲ್ಲ, ಗೊಂದಲ ಸೃಷ್ಠಿಸುವ ಕಾರ್ಯ ಮಾಡುವುದಿಲ್ಲ. ಭವಿಷ್ಯದಲ್ಲಿ ಯೋಚಿಸಿ ಸೂಕ್ತ ತೀರ್ಮಾನ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಕ್ಕಲಿಗ ಜನಾಂಗದ ಮುಖಂಡರಾದ ಶ್ರಾವಣಗೆರೆ ಶಿವಪ್ರಸಾದ್ ಗೌಡ, ತಿಮ್ಮನಹಳ್ಳಿ ರಾಜು, ನಗರಸಭಾ ಸದಸ್ಯ ಈರಲಿಂಗೇಗೌಡ, ರಘುನಾಥ್, ಶಿವಣ್ಣ, ಮದಕರಿಪುರ ಬಸವರಾಜ್, ಸಿದ್ದಪ್ಪ, ಕೆ.ಟಿ.ರುದ್ರಮುನಿ ಸೇರಿದಂತೆ ನೂರಾರು ಮಂದಿ ಅಭಿಮಾನಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours