ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ: ಎ.ನಾರಾಯಣಸ್ವಾಮಿ

 

 

ಚಿತ್ರದುರ್ಗ:ಕೇಂದ್ರ ಸರಕಾರದ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂಬುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ  ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಹಾಗೂ ಸಂಸದ  (MP)ಎ.ನಾರಾಯಣಸ್ವಾಮಿ ತಿಳಿಸಿದರು.

ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನದ ಅಂಗವಾಗಿ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಭಾಷಣ ವೀಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮವನ್ನು ದೇಶದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ, ಸ್ಥಳೀಯರ ಸರಕಾರಗಳು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಮಹನೀಯರ ಸಹಭಾಗಿತ್ವದಲ್ಲಿ ಆಗಬೇಕಿತ್ತು. ರಾಜ್ಯ ಸರಕಾರ ಈ ಜವಾಬ್ದಾರಿ ಪಡೆಯಬೇಕಿತ್ತು. ಯಾವುದೇ ರಾಜ್ಯ ಕೇಂದ್ರದ ಸಹಕಾರ, ಆರ್ಥಿಕ ಸಹಕಾರವಿಲ್ಲದೆ, ಅದರ ಬೆನ್ನೆಲುಬು ಇಲ್ಲದೆ ತನ್ನ ರಾಜ್ಯವನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ.

ಕರ್ನಾಟಕ ಸರಕಾರ ಈ ಕಾರ್ಯಕ್ರಮವನ್ನು ನಾವು ಮಾಡುವುದಿಲ್ಲ, ಕೇಂದ್ರ ಸರಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಂದಲ್ಲ, ಮೋದಿಯವರ ದೂರದೃಷ್ಟಿಯನ್ನು ಕರ್ನಾಟಕದ ಜನರಿಗೆ ನಾನು ಹೇಳುವುದಿಲ್ಲ, ಕರ್ನಾಟಕದ ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಈ ಕಾರ್ಯಕ್ರಮವನ್ನು ಬ್ಯಾಂಕಿನವರು ಮಾಡುವಂತಾಗಿದೆ ಎಂದು ಟೀಕಿಸಿದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಪಡೆ ಈ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಸರಕಾರಿ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷಕ್ಕೆ ಜೋತುಬೀಳುವ ಅವಶ್ಯಕತೆ ಇಲ್ಲ, ಮೋದಿಯವರು ಬಿಜೆಪಿಯಿಂದ ಗೆದ್ದು ಬಂದಿದ್ದರೂ ಈ ದೇಶದ ಪಕ್ಷಾತೀತವಾಗಿ ಪ್ರಧಾನಿ. ಈ ದೇಶದ ಎಲ್ಲಾ ನಾಗರೀಕರಿಗೂ ಕಾರ್ಯಕ್ರಮ ಕೊಡಬೇಕು ಎಂಬುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಆರೇಳು ತಿಂಗಳುಗಳಿಂದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆ ಆಗುತ್ತಿದೆ. ಮೋದಿಯವರು, ಕೇಂದ್ರ ಸರಕಾರ ಯಾವುದೋ ಒಂದು ಕಾರ್ಯಕ್ರಮಕ್ಕೆ ಜೋತು ಬಿದ್ದಿಲ್ಲ, ಈ ದೇಶದ ಪ್ರತಿ ನಾಗರೀಕರ, ಪ್ರತಿ ಧರ್ಮದ, ಪ್ರತಿ ತಾಯಂದಿರ ಜವಾಬ್ದಾರಿ ನನ್ನದು, ಎಲ್ಲರ ಕುಟುಂಬದ ಸಮಸ್ಯೆ ನಂದು. ಒಂದು ಯೋಜನೆ ಕೊಟ್ಟು ವೋಟು ಹಾಕಿ ಅಧಿಕಾರಕ್ಕೆ ತನ್ನಿ ಎನ್ನುವುದು ಮೋದಿಯ ಸಂಕಲ್ಪ ಅಲ್ಲ ಎಂದು ಹೇಳಿದರು.

ದೇಶದಲ್ಲಿ ಒಂಬತ್ತು ವರ್ಷದಲ್ಲಿ 74 ಏರ್‍ಪೋರ್ಟ್‍ಗಳನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಐಐಟಿ, ಮೆಡಿಕಲ್ ಕಾಲೇಜುಗಳು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಟಾನ ಮಾಡಲಾಗುತ್ತಿದೆ. 65 ವರ್ಷಗಳ ಕಾಲ ಕಾಶ್ಮೀರವನ್ನು ನಂದಲ್ಲ ಎಂದು ಕೈಚೆಲ್ಲಿ, ಅಲ್ಲಿನ ಮುಖ್ಯಮಂತ್ರಿಯನ್ನು ಪ್ರಧಾನಮಂತ್ರಿ ಎಂಬುದಾಗಿ ಸಂಬೋಧನೆ ಮಾಡಿ ಅವರ ಮನೆ ಬಾಗಿಲನ್ನು ಕಾಯುತ್ತಿದ್ದ ರಾಜಕಾರಣಕ್ಕೆ ತಿಲಾಂಜಲಿ ಎಳೆದವರು ಬಿಜೆಪಿ ಸರಕಾರ, ಮೋದಿ, ಅಮಿತ್ ಶಾ ಅವರು ಎಂದು ಬಣ್ಣಿಸಿದರು. ಆರ್ಟಿಕಲ್ 371 ಕಿತ್ತೊಗೆದು ತಿದ್ದುಪಡಿ ಮಾಡಿದ್ದಾರೆ. ಅದಕ್ಕೆ ಎದೆಗಾರಿಕೆ ತೋರಿದ್ದು ಮೋದಿಯವರು. ಈ ದೇಶದ ಬಡವರ ಸಂಕಷ್ಟ, ಈ ದೇಶದ ರೈತರ ಸಮಸ್ಯೆಗಳನ್ನು ಅರಿತುಕೊಂಡು ಪಿಎಂ ಕೃಷಿ ಸಮ್ಮಾನ್, ಫಸಲ್ ಬಿಮಾ, ಗೊಬ್ಬರದ ಸಬ್ಸಿಡಿ, ಈ ದೇಶದ ಪ್ರತಿ ಮನೆಗೆ ಶೌಚಾಲಯ, ಪಿಎಂ ಆವಾಜ್ ಯೋಜನೆ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಿದ್ದು ಮೋದಿ ನೇತೃತ್ವದ ಕೇಂದ್ರ ಸರಕಾರ ಎಂದು ಹೇಳಿದರು.

ಬಳಿಕ ಸಚಿವರು ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ಭಾಷಣ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕೇಂದ್ರ ಸರಕಾರ ನಾನಾ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು.

ಇದನ್ನೂ ಓದಿ: ಮದುವೆಯ ಬಸ್ ಪಲ್ಟಿ ಇಬ್ಬರ ಸಾವು

ಕಾರ್ಯಕ್ರಮದಲ್ಲಿ ಚಿಕ್ಕಬೆನ್ನೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೇಂದ್ರ ಕಚೇರಿ ಬಳ್ಳಾರಿಯ ಪ್ರಧಾನ ವ್ಯವಸ್ಥಾಪಕಿ ಭಾಗ್ಯರೇಖ, ಬೆಂಗಳೂರು ದೂರದರ್ಶನದ ಕೇಂದ್ರದ ಡಿಡಿಜಿ ಮಾದವರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮುಖಂಡರಾದ ಕೋಗುಂಡೆ ಮಂಜುನಾಥಪ್ಪ, ತೀರ್ಥಪ್ಪ, ಶೈಲೇಶಪ್ಪ, ಚಿತ್ರದುರ್ಗ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ವೈ.ಎನ್.ಶಿವಪ್ರಸಾದ್, ಪ್ರಾದೇಶಿಕ ವ್ಯವಸ್ಥಾಪಕ ಹರಿಪ್ರಸಾದ್, ಕೆನರಾ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್, ಮತ್ತಿತರರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours