ಚಳ್ಳಕೆರೆ: ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ನ್ಯಾಯಸಿಗಬೇಕೆಂಬ ಹಂಬಲಸಾಮಾನ್ಯ. ಅದೇ ರೀತಿ ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸುವಾಗ ಕೂಲಂಕುಷವಾಗಿ ಪ್ರಕರಣವನ್ನು ಪರಿಶೀಲನೆ ನಡೆಸಬೇಕಾಗುತ್ತದೆ. ಎರಡೂ ಕಡೆಯ ವಾದವಿವಾದವನ್ನು ಆಲಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ತೀರ್ಪು ನಿಗದಿತ ಅವಧಿಯಲ್ಲಿ ಸಿಗಲು ಸಾಧ್ಯವಿಲ್ಲ. ಆದರೆ, ರಾಜಿಸಂದಾನದ ಮೂಲಕ ಪ್ರಕರಣವನ್ನು ಇತ್ಯಾರ್ಥಪಡಿಸಿಕೊಂಡರೆ ಎರಡೂ ಕಡೆಯ ಕಕ್ಷಿದಾರರಲ್ಲಿ ಪ್ರೀತಿ, ಗೌರವ, ವಿಶ್ವಾಸ ಹೆಚ್ಚಾಗುತ್ತದೆಯಲ್ಲದೆ, ನ್ಯಾಯಾಲಯಕ್ಕೂ ಗೌರವ ಬರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಕಲಕಪ್ಪ ಗೋಣಿ ತಿಳಿಸಿದರು.
ಅವರು, ಶನಿವಾರ ನ್ಯಾಯಾಲಯದಲ್ಲಿ ನಡೆದ ಲೋಕಾಅದಾಲತ್‌ನಲ್ಲಿ (Lok Adalat)ತಳಕು ಹೋಬಳಿಯ ಮೈಲನಹಳ್ಳಿ ಗ್ರಾಮದ ಗುರುರಾಜ, ಅನಿತಾಕುಮಾರಿ ದಂಪತಿಗಳು ಕಳೆದ ೨೦೧೯ರಲ್ಲಿ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶರು, ವಕೀಲರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಇಬ್ಬರೂ ಒಂದಾಗಿ ರಾಜಿಯಾಗಿ ಪ್ರಕರಣವನ್ನು ವಾಪಾಸ್ ಪಡೆದ ಸಂದರ್ಭದಲ್ಲಿ ಮಾತನಾಡಿದರು. ಸುಮಾರು ಐದು ವರ್ಷಗಳ ಕಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಓಡಾಡಿದ್ದೀರಿ, ಆದರೆ ನಿಮ್ಮ ಮನಸ್ಸು ಪರಿವರ್ತನೆಯಾಗಿರುವುದು ಸಂತಸ ವಿಷಯ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಸಂದರ್ಭ ಬರದಂತೆ ಜಾಗ್ರತೆ ವಹಿಸಬೇಕೆಂದರು.
ಇದನ್ನೂ ಓದಿ: ಹಾಸ್ಟೆಲ್‍ನಲ್ಲಿಯೇ ಮುದ್ದೆ, ಅನ್ನ ಸಾಂಬಾರ್, ಮಜ್ಜಿಗೆ ಊಟ ಸವಿದ ಜಿ.ಪಂ.ಸಿಇಒ
ದಂಪತಿಗಳ ಪರವಾಗಿ ವಕೀಲರಾದ ಎಂ.ಚಂದ್ರಪ್ಪ, ಕೆ.ಎಂ.ನಾಗರಾಜು ವಕಾಲತ್ತು ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಮಾಜಿ ಅಧ್ಯಕ್ಷ ಜಿ.ಎಂ.ಆನಂದಪ್ಪ, ಜಿ.ಆರ್.ಅಶ್ವತ್ಥನಾಯಕ, ಬೋರಯ್ಯ, ನಾಗರಾಜು, ಬೋರನಾಯಕ, ಜಯಶೀಲರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours