ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಗೆ ಹೊಸ ಡಾಸ್ಕ್ ನೀಡಿದ ಹೈಕಮಾಂಡ್

 

ತೆಲುಗು ರಾಜ್ಯದಲ್ಲಿ ಕಾಂಗ್ರೆಸ್‌ನ ಉತ್ಸಾಹವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ನಾಟಕ ಚುನಾವಣೆಗೂ ಮುನ್ನ ಪಕ್ಷ ತೊರೆದಿದ್ದ ನಾಯಕರು, ಕನ್ನಡ ನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸುತ್ತಿದ್ದಂತೆ ಈಗ ತೆಲಂಗಾಣದಲ್ಲಿ ಒಬ್ಬೊಬ್ಬರಾಗಿ ಕಾಂಗ್ರೆಸ್‌ಗೆ ಮರಳುತ್ತಿದ್ದಾರೆ. ಈ ಬೆಳವಣಿಗೆಯನ್ನು ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ.


ಇದೀಗ ಸದ್ಯದ ಬೆಳವಣಿಗೆ ಪ್ರಕಾರ ಕರ್ನಾಟಕ ಚುನಾವಣೆಯಲ್ಲಿ ಪಕ್ಷವನ್ನು ಯಶಸ್ವಿಯಾಗಿ ಗೆಲ್ಲಿಸಿದ ಕೆಪಿಸಿಸಿ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಅವರನ್ನು ತೆಲಂಗಾಣ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನಾಗಿಯೂ ನೇಮಿಸಲಾಗುತ್ತದೆ ಎಂಬ ಗುಸು ಗುಸು ಶುರುವಾಗಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಡಸಾಲೆಯಲ್ಲಿ ತೆಲಂಗಾಣ ರಾಜ್ಯದ ರಾಜಕೀಯವನ್ನು ಪರಿಶೀಲಿಸಲಾಗುತ್ತಿದೆ. ಡಿಕೆ ಶಿವಕುಮಾರ್ ಅವರನ್ನು ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ, ಪೊಂಗುಲೇಟಿ, ಜುಪಲ್ಲಿ ಅವರು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

ಅಂದ ಹಾಗೆ ಡಿಕೆ ಶಿವಕುಮಾರ್ ಸಾಮಾನ್ಯ ನಾಯಕನಲ್ಲ, ಮೊದಲಿನಿಂದಲೂ ರಾಜಕೀಯ ತಂತ್ರಗಳನ್ನು ರೂಪಿಸುವಲ್ಲಿ ಪಂಟರ್‌ ಎನಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ಡಿಕೆಶಿ, ಹೈಕಮಾಂಡ್ ಏನೇ ಹೇಳಿದರೂ ಶಿರಸಾ ಪಾಲಿಸಿ ಯಶಸ್ಸಿನ ಗುರಿ ಮುಟ್ಟಿಸಿದ ಛಾತಿ ಅವರಿಗಿದೆ. ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಪಕ್ಷವನ್ನು ಮತ್ತೆ ಗೆಲ್ಲಿಸುವಲ್ಲಿ ಡಿಕೆಶಿ ಅವರ ಶ್ರಮ, ತಂತ್ರಗಾರಿಕೆ ಅಷ್ಟಿಷ್ಟಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಇದೀಗ ಡಿಕೆ ಶಿವಕುಮಾರ್‌ಗೆ ತೆಲಂಗಾಣವನ್ನು ಗೆಲ್ಲಿಸುವ ಜವಾಬ್ದಾರಿಯ ಟಾಸ್ಕ್‌ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸರಿಯಾದ ತಂತ್ರ ಹೆಣೆದಿದೆ ಎನ್ನುತ್ತಾರೆ ತೆಲಂಗಾಣದ ರಾಜಕೀಯ ವಿಶ್ಲೇಷಕರು.

ಸದ್ಯ ಡಿ.ಕೆ ಶಿವಕುಮಾರ್ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಭರವಸೆಗಳ ಅನುಷ್ಠಾನಗೊಳಿಸುವತ್ತ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಜತೆ ಚರ್ಚೆಯನ್ನೂ ನಡೆಸಿದ್ದಾರೆ. ಹೀಗಾಗಿ 2 ವಾರಗಳ ಬಳಿಕ ಡಿಕೆ ಶಿವಕುಮಾರ್ ಸಂಪೂರ್ಣವಾಗಿ ತೆಲಂಗಾಣದತ್ತ ಗಮನ ಹರಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಶೀಘ್ರದಲ್ಲೇ ತೆಲಂಗಾಣದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಗಳಲ್ಲಿ ಆಯಾ ನಾಯಕರ ಸಾಧನೆ, ಕಾರ್ಯತಂತ್ರ ತಿಳಿದು ಹೈಕಮಾಂಡ್‌ಗೆ ವರದಿ ನೀಡಲಿದ್ದಾರಂತೆ. ಅದನ್ನು ಆಧರಿಸಿ ಹೈಕಮಾಂಡ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದೆ.


ತೆಲಂಗಾಣದಲ್ಲಿ ಪಿಸಿಸಿ ಮುಖ್ಯಸ್ಥರಾಗಿರುವ ರೇವಂತ್ ರೆಡ್ಡಿ ಅವರಿಗೆ ಪಕ್ಷದಲ್ಲೇ ಕೆಲವು ವಿರೋಧಿಗಳಿದ್ದಾರೆ. ಅವರು ಜತೆಯಾಗಿ ಹೆಜ್ಜೆ ಹಾಕಲು ನಿರ್ಧರಿಸಿದ್ದರೂ ಕೂಡ ಕೆಲವು ಅಸಮಾಧಾನಿತರು ಮುಂದೆ ಬರುತ್ತಿಲ್ಲ. ಪಕ್ಷದ ಕೆಲವು ವರಿಷ್ಠರು ರೇವಂತ್ ರೆಡ್ಡಿ ವಿರುದ್ಧ ಸಾರ್ವಜನಿಕವಾಗಿಯೇ ಮಾತನಾಡಿ ಪಕ್ಷಕ್ಕೂ ಮುಜುಗರ ತರುತ್ತಿದ್ದಾರೆ. ಇದರಿಂದ ಜನರಲ್ಲೂ ಪಕ್ಷದ ಬಗ್ಗೆ ಭಿನ್ನ ಅಭಿಪ್ರಾಯ ಬರುತ್ತಿದೆ. ಹೀಗಾಗಿ ಇಂತಹದ್ದಕ್ಕೆಲ್ಲ ಕಡಿವಾಣ ಹಾಕಲು ಡಿಕೆ ಶಿವಕುಮಾರ್‌ನಂತಹ ನಾಯಕರೇ ಸೂಕ್ತ ಎಂದು ಹೈಕಮಾಂಡ್ ಭಾವಿಸಿರುವಂತಿದೆ. ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್‌ ಅನ್ನು ಗೆಲುವಿನ ದಡ ತಲುಪಿಸಿರುವ ಡಿಕೆ ಶಿವಕುಮಾರ್ ಅವರ ವಿರುದ್ಧ ತೆಲಂಗಾಣದಲ್ಲಿ ಕಾಂಗ್ರೆಸ್‌ ವರಿಷ್ಠರು ಮಾತನಾಡುವಂತಿಲ್ಲ. ಹೀಗಾಗಿ ಡಿಕೆಶಿ ಹೇಳಿದ್ದನ್ನು ಕಡ್ಡಾಯವಾಗಿ ಪಾಲಿಸಲೇಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಈ ಮಧ್ಯೆ ಖಮ್ಮಂನ ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಜಂಟಿ ಮಹಬೂಬ್‌ನಗರ ಜಿಲ್ಲೆಯಿಂದ ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ಮತ್ತು ನಾಗರ್ ಕರ್ನೂಲ್‌ನಿಂದ ದಾಮೋದರ್ ರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಡಿಕೆ ಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ರೇವಂತ್ ರೆಡ್ಡಿ ಈ ಮೂವರು ನಾಯಕರ ಜೊತೆ ಬೆಂಗಳೂರಿಗೆ ಹೋಗಿದ್ದರು. ಆಗ ಡಿಕೆ ಶಿವಕುಮಾರ್ ಮನೆಗೆ ತೆರಳಿ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಆ ಬಳಿಕ ಆ ಮೂವರು ನಾಯಕರು ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ.

ಮುಂದಿನ ಅಕ್ಟೋಬರ್‌ನಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇನ್ನು ನಾಲ್ಕು ತಿಂಗಳಲ್ಲಿ ಬಿಆರ್‌ಎಸ್‌ ಸರ್ಕಾರದ ಅವಧಿ ಮುಗಿದು ಮುಂದೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆಯೂ ಪಕ್ಷದ ವಲಯದಲ್ಲಿ ಉಂಟಾಗಿದೆ. ಇದೇ ನಿರೀಕ್ಷೆಯಲ್ಲಿ ಸದ್ಯದಲ್ಲೇ ಬಿಆರ್‌ಎಸ್‌ ಪಕ್ಷದ ಕೆಲವು ಪ್ರಮುಖ ನಾಯಕರನ್ನೂ ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದ ಬೆಳವಣಿಗೆ ನೋಡಿದ್ರೆ ತೆಲಂಗಾಣದಲ್ಲಿ ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷದ ಜೋಶ್ ಹೈ ಲೆವೆಲ್‌ನಲ್ಲಿದೆ. ಚುನಾವಣೆ ತನಕ ಹೀಗೆಯೇ ಮುಂದುವರಿದು ಗೆಲುವಿನ ದಡ ತಲುಪುತ್ತಾ ಅಥವಾ ಅರ್ಧದಲ್ಲೇ ಜೋಶ್ ಕಮ್ಮಿಯಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours