ಸೀಬೆ ಬೆಳೆದು ನೀರಿನ ಬವಣೆ ನೀಗಿಸಿದ “ತಿಪ್ಪೀರಮ್ಮ”

 

ನರೇಗಾ ಯೋಜನೆಯಡಿ ಸೌಲಭ್ಯ, 2.20 ಎಕರೆಯಲ್ಲಿ ತೈವಾನ್ ಪಿಂಕ್ ತಳಿಯ ಸೀಬೆ, ಉತ್ತಮ ಆದಾಯ ಗಳಿಸುತ್ತಿರುವ ರೈತ ಮಹಿಳೆ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ21:
ತೋಟಗಾರಿಕೆ ಇಲಾಖೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸವಲತ್ತು ಪಡೆದು ಯಶ್ವಸಿಯಾಗಿರುವ ರೈತ ಮಹಿಳೆಯ ಯಶೋಗಾಥೆ ಇದು.
ಚಿತ್ರದುರ್ಗ  ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕಾಗಿದ್ದರೂ ಇಲ್ಲಿನ ರೈತರ ಪ್ರಯೋಗಶೀಲತೆಯಲ್ಲಿ ಕೊರತೆ ಕಾಣದು. ಚಳ್ಳಕೆರೆ ತಾಲ್ಲೂಕಿನ ತಿಮ್ಮಪ್ಪಯ್ಯನಹಳ್ಳಿ ಪಂಚಾಯಿತಿಯ ರಾಮಸಾಗರ ಗ್ರಾಮದ ತಿಪ್ಪೀರಮ್ಮ ಕೋಂ ಲೇ.ಪಾಲಯ್ಯ ಅವರು ಸೀಬೆ ಬೆಳೆದು ಉತ್ತಮ ಆದಾಯಗಳಿಸುತ್ತಿರುವ ರೈತ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ತಮ್ಮ 7 ಎಕರೆ ಜಮೀನಿನಲ್ಲಿ ಈ ಹಿಂದೆ ಲಭ್ಯವಿದ್ದ ಅತ್ಯಲ್ಪ ನೀರಿನಲ್ಲಿ ಈರುಳ್ಳಿ, ಟೊಮೋಟೊ, ರಾಗಿ ಈ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದ ಇವರು, ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಕಡಿಮೆ ನೀರನ್ನು ಬಯಸುವ ಖುಷ್ಕಿ ತೋಟಗಾರಿಕೆ ಬೆಳೆಯಾದ ಸೀಬೆಯನ್ನು ಬೆಳೆಯಲು ನಿರ್ಧರಿಸಿ, ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೌಲಭ್ಯ ಪಡೆದು 2 ಎಕರೆ 20 ಗುಂಟೆಯಲ್ಲಿ ತೈವಾನ್ ಪಿಂಕ್ ತಳಿಯ ಸೀಬೆಯನ್ನು ಬೆಳೆದಿದ್ದಾರೆ.
ಸಸಿಗಳನ್ನು ಬಿಜಾಪುರ ಜಿಲ್ಲೆಯಿಂದ ಪ್ರತಿ ಸಸಿಗೆ ರೂ. 45/- ರಂತೆ ಹಣ ಪಾವತಿಸಿ ಡೋರ್ ಡೆಲವರಿ ಪಡೆದುಕೊಂಡು ಸಸಿಗಳನ್ನು 5*5 ಮೀ. ಅಂತರದ ಅಧಿಕ ಸಾಂದ್ರ ಪದ್ಧತಿಯಲ್ಲಿ ನಾಟಿ ಮಾಡಿ ಸಸಿಗಳನ್ನು ಆರೈಕೆ ಮಾಡಿದ್ದಾರೆ. ಸಸಿಗಳಿಗೆ ಈಗ ಒಂದು ವರ್ಷ ಆಗಿದ್ದು, ಎರಡು ಬೀಡುಗಳಲ್ಲಿ ಒಟ್ಟಾರೆ 1200 ಕೆ.ಜಿ ಹಣ್ಣನ್ನು ಕಟಾವು ಮಾಡಿ ತಾವೇ ಸ್ವತಃ ಬೈಕ್‍ನಲ್ಲಿ ಸ್ಥಳೀಯ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಹಾಗೂ ಹೆಚ್ಚಿನ ಫಸಲು ಬಂದಾಗ ಚಿತ್ರದುರ್ಗ, ಚಳ್ಳಕೆರೆ ಮಾರುಕಟ್ಟೆಗೆ ಕೊಂಡೊಯ್ದು ಪ್ರತಿ ಕೆ.ಜಿ ಗೆ ರೂ.30 ರಿಂದ 50 ರ ವರೆಗೆ ದರಗಳನ್ನು ಪಡೆದಿರುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಇಳುವರಿಯ ನೀರಿಕ್ಷೆಯಲ್ಲಿದ್ದಾರೆ ರೈತ ಮಹಿಳೆ ತಿಪ್ಪೀರಮ್ಮ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449151288ಕ್ಕೆ ರೈತರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours