ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚರಿಕೆ ವಹಿಸಿ:ದಿವ್ಯಪ್ರಭು ಜಿ.ಆರ್.ಜೆ

 

ಚಿತ್ರದುರ್ಗ:ರಾಜ್ಯದಲ್ಲಿ ಈಗಾಗಲೇ ಬರ ಪರಿಸ್ಥಿತಿ ಎದುರಾಗಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಪಶುಪಾಲನೆ ಮಾಡುವ ರೈತರ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡಿ ಸಾವುಗಳು ಉಂಟಾಗದಂತೆ ತಡೆಯುವುದು ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 4ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನ ಮತ್ತು ಉಚಿತ ರೇಬೀಸ್ ಲಸಿಕೆ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಲಸಿಕಾ ಕಾರ್ಯಕ್ರಮದ ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಪ್ರತಿ ಜಾನುವಾರುಗಳಿಗೆ ಲಸಿಕೆ ನೀಡಿದ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಲಸಿಕೆ ನೀಡದ ಜಾನುವಾರುಗಳ ವಿವರವನ್ನು ಸಂಗ್ರಹಿಸಬೇಕು. ಲಸಿಕಾ ಅಭಿಯಾನದ ಕುರಿತು ವ್ಯಾಪಕವಾಗಿ ಪ್ರಚಾರ ನೀಡಿ ಜಿಲ್ಲೆಯ ಎಲ್ಲಾ ಭಾಗಗಳಲ್ಲಿನ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಚರ್ಮಗಂಟು ರೋಗದ ಕುರಿತು ನಿಗಾ ವಹಿಸಬೇಕು ಎಂದರು.
30 ದಿನಗಳ ಅಭಿಯಾನದಲ್ಲಿ 3,38,907 ಜಾನುವಾರುಗಳಿಗೆ ಲಸಿಕೆ : ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 25 ರವರೆಗೆ 30 ದಿನಗಳ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಜರುಗಲಿದೆ. ಈ ಅಭಿಯಾನದಲ್ಲಿ ಜಿಲ್ಲೆಯ 3,38,907 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲೆಯ ಆರು ತಾಲೂಕುಗಳ 991 ಗ್ರಾಮಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದ್ದು, 3390 ಲಸಿಕಾ ಕಾರ್ಯದ ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಈಗಾಗಲೇ 3,39,000 ಲಸಿಕಾ ಡೊಸ್‍ಗಳನ್ನು ಸಂಗ್ರಹಿಸಿ ಇಡಲಾಗಿದೆ. ಒಟ್ಟು 237 ಲಸಿಕಾದಾರರು ಲಸಿಕಾ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿದಿನ 3 ಗಂಟೆ ದಿನದ ಲಸಿಕಾ ಪ್ರಗತಿ ವರದಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಕಳೆದ ವರ್ಷ ನವೆಂಬರ್‍ನಲ್ಲಿ ಜರುಗಿದ 3ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನದಲ್ಲಿ ಶೇ.98 ರಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಸಭೆಯಲ್ಲಿ ಮಾಹಿತಿ ನೀಡಿದರು.
 ಜಿಲ್ಲೆಯಲ್ಲಿ ಗುರುತಿಸಲಾಗಿರುವ 3,38,907 ಜಾನುವಾರುಗಳ ಪೈಕಿ 2,25,603 ದನಗಳು ಹಾಗೂ 1,13,304 ಎಮ್ಮೆಗಳು ಇವೆ. ಗರ್ಭಧರಿಸಿದ ಜಾನುವಾರುಗಳಿಗೆ ಮಾಲೀಕರು ಲಸಿಕೆ ಕೊಡಿಸದಿದ್ದರೆ ಅಂತಹ ವಿವರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡಲಾಗುವುದು ಎಂದರು.  ಉಚಿತ ರೇಬೀಸ್ ಲಸಿಕೆ :  ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 27 ರವರೆಗೆ ರೇಬೀಸ್ ಲಸಿಕಾ ಅಭಿಯಾನವು ಜರುಗಲಿದೆ. ಉಚಿತವಾಗಿ ರೇಬೀಸ್ ಲಸಿಕೆಯನ್ನು ನೀಡಲಾಗುವುದು. ಸಾರ್ವಜನಿಕರು ಸಾಕು ನಾಯಿಗಳಿಗೆ ರೇಬೀಸ್ ಹಾಕಿಸಿಕೊಳ್ಳುವಂತೆ ಉಪನಿರ್ದೇಶಕ ಡಾ.ಬಾಬುರತ್ನ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ 4ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನದ ಫೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಸೇರಿದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours