ಸರ್ಕಾರಿ ಸೌಲಭ್ಯ ಲೂಟಿ ಮಾಡಿದ್ದು ಶ್ರೀರಾಮುಲು ಸಾಧನೆ:ಎಚ್.ಟಿ.ನಾಗಿರೆಡ್ಡಿ

 

ಚಳ್ಳಕೆರೆ: ಮೊಳಕಾಲ್ಮುರು ಕ್ಷೇತ್ರದಲ್ಲಿ ಕಳೆದ 5ವರ್ಷಗಳಿಂದ ಸರ್ಕಾರಿ ಸೌಲಭ್ಯಗಳನ್ನು ಲೂಟಿ ಮಾಡಿದ ಹೆಗ್ಗಳಿಕೆ ಶ್ರೀರಾಮುಲು ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಹಾಗಾಗಿ ಕ್ಷೇತ್ರದ ನೊಂದ ಬಡಜನರ ಅಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿ ಶ್ರೀರಾಮುಲು ಸೂಚಿಸಿದ ವ್ಯಕ್ತಿಗೆ ನಮ್ಮ ಬೆಂಬಲವಿಲ್ಲ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್.ಟಿ.ನಾಗಿರೆಡಿ ಹೇಳಿದರು.

ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮತನಾಡಿದರು.
ಶ್ರೀರಾಮುಲು ಪರಿಶಿಷ್ಟ ಪಂಗಡದ ರಾಜ್ಯ ನಾಯಕ. ಅವರಿಂದ ಹಿಂದುಳಿದ ಮೊಳಕಾಲ್ಮುರು ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂಬ ದೂರದೃಷ್ಠಿಯಿಂದ ಅವರನ್ನು ಕಳೆದ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರಕ್ಕೆ ಕರೆ ತರಲಾಯಿತು. ಆದರೆ ಕೆಲವೇ ತಿಂಗಳಲ್ಲಿ ಅವರ ನೈಜವಾದ ಗುಣ ನಮಗೆ ಅರ್ಥವಾಯಿತು. ಹಲವು ಆಪ್ತ ಸಹಾಯಕರನ್ನು ನೇಮಿಸಿಕೊಂಡು ರೈತರು, ನಿರ್ಗತಿಕರು, ವಸತಿ ರಹಿತರು ಸೇರಿದಂತೆ ದೀನದಲಿತರ ಹಲವು ಸರ್ಕಾರಿ ಸೌಲಭ್ಯಗಳು ಲೂಟಿ ಮಾಡಿದರು. ಕ್ಷೇತ್ರದಲ್ಲಿ ಶಿಕ್ಷಣ, ಸಾರಿಗೆ , ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಲ್ಲಿ 10ವರ್ಷಗಳಷ್ಟು ಹಿಂದುಳಿದ ಪರಿಸ್ಥಿತಿ ತಲೆದೋರಿದೆ. ಇವರ ಈ ನಡೆಗೆ ಕ್ಷೇತ್ರದ ಜನರು ರೋಸಿಹೋಗಿದ್ದರು. ಇದರಿಂದ ಸೋಲಿನ ಭಯದಿಂದ ಕ್ಷೇತ್ರವನ್ನು ಬಿಟ್ಟುಹೋಗುವ ತೀರ್ಮಾನ ಮಾಡಿದರು.
ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಅವರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ ಪರಿಣಾಮವಾದ ಅವರಿಂದ ನಾಯಕನಹಟ್ಟಿ ಒಳಮಠದ ಮುಂಭಾಗದಲ್ಲಿ ಇಟ್ಟಿಗೆ ಕಲ್ಲುಗಳಿಂದ ಒದೆಯನ್ನೂ ಸಹ ತಿಂದರು. ನಂತರ 5ವರ್ಷಗಳ ಕಾಲ ಶತ್ರುಗಳ ರೀತಿ ಇಬ್ಬರೂ ಹಗೆಯನ್ನು ಸಾಧಿಸಿಕೊಂಡು ಬಂದಿದ್ದರು. ಆದರೆ ಏಕಾಏಕಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಶ್ರೀರಾಮುಲು ಮತ್ತೊಮ್ಮೆ ಮೊಳಕಾಲ್ಮುರು ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಲು ಯೋಜನೆ ರೂಪಿಸಿದ್ದಾರೆ. ಹಾಗಾಗಿ ಶ್ರೀರಾಮುಲು ಅವರು ಸೂಚಿಸಿದ ವ್ಯಕ್ತಿಗೆ ನಮ್ಮ ಬೆಂಬಲವಿಲ್ಲ. ಅದಾಗ್ಯೂ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ದೊರೆತರೆ ಕ್ಷೇತ್ರದಲ್ಲಿ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸುವುದು ಖಚಿತ ಎಂದರು.
ಬಿಜೆಪಿ ಮುಖಂಡ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, “ಕಳೆದ ಚುನಾವಣೆಯಲ್ಲಿ ಶ್ರೀರಾಮುಯಲು ವಿರುದ್ಧ ತೊಡೆತಟ್ಟಿದ್ದ ಮಾಜಿ ಎಸ್.ತಿಪ್ಪೇಸ್ವಾಮಿಯವರು ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡು 5ವರ್ಷಗಳ ಕಾಲ ನಿರಂತರವಾಗಿ ಬಿಜೆಪಿ ಮತ್ತು ಶ್ರೀರಾಮುಲು ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅಂತವರಿಗೆ ಇಂದು ಶ್ರೀರಾಮುಲು ಟಿಕೆಟ್ ಕೊಡಿಸಲು ಪಣತೊಟ್ಟಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇದರಿಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ನೋವುಂಟಾಗಿದೆ” ಎಂದರು.
ಇದೇವೇಳೆ ಮುಖಂಡರಾದ ದಾಸರೆಡ್ಡಿ, ಸಿ.ಬಿ.ಮೋಹನ್‍ಕುಮಾರ್, ರಾಜಣ್ಣ, ದೊಡ್ಡಬೋರಯ್ಯ, ಮಲಿಕಾರ್ಜುನ, ನಾಗರಾಜ್, ಚಿನ್ನಯ್ಯ, ಮಹಾಂತೇಶ್ ಅವರೂ ಇದ್ದರು.

[t4b-ticker]

You May Also Like

More From Author

+ There are no comments

Add yours