ರಾಜಕೀಯ ಪಕ್ಷಗಳ ಸಭೆಯಲ್ಲಿ ಚಿತ್ರದುರ್ಗ ವಿಧಾನಸಭಾ ಚುನಾವಣಾಧಿಕಾರಿ ಆರ್.ಚಂದ್ರಯ್ಯ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಏಪ್ರಿಲ್05:
ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆ ಮಾಡಬೇಕು. ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡುವಂತಿಲ್ಲ. ಹಣ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ವಿತರಿಸುವಂತಿಲ್ಲ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘಿಸಿದರೆ ಐಪಿಸಿ ಕಲಂ 188 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಆಗಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.
ನಗರದ ಚಿತ್ರದುರ್ಗ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳು ತಮ್ಮ ವಕ್ತಾರರು ಸೇರಿದಂತೆ ಯಾರಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು ಎಂಬ ಬಗ್ಗೆ ಹಾಗೂ ಸಭೆಗಳಿಗೆ ಯಾರನ್ನು ಕರೆಯಬೇಕು ಎಂಬುವುದರ ಬಗ್ಗೆ ಅಧಿಕೃತವಾಗಿ ಪತ್ರದ ಮೂಲಕ ತಿಳಿಸಬೇಕು. ಚುನಾವಣಾಧಿಕಾರಿಗಳ ಕಚೇರಿಗೆ ತಮ್ಮ ಪ್ರತಿನಿಧಿಗಳ ವಿಳಾಸ, ವಿವರಗಳನ್ನು ನೀಡಬೇಕು ಎಂದರು.
ರಾಜಕೀಯ ಪಕ್ಷಗಳು ನಡೆಸುವ ಸಭೆ, ಸಮಾರಂಭಗಳಿಗೆ ಅನುಮತಿ ಪಡೆಯಲು 48 ಗಂಟೆಗಳ ಮುಂಚಿತವಾಗಿ ಸುವಿಧಾ ತಂತ್ರಂಶದ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ತುರ್ತಾಗಿ ಅನುಮತಿ ನೀಡುವುದು ಕಷ್ಟ ಸಾಧ್ಯ. ರಾಜಕೀಯ ಪಕ್ಷಗಳು ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದ ಒಳಿತು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ನೀಡಲು, ಧ್ವನಿವರ್ಧಕ ಬಳಸಲು ಅನುಮತಿ ಪಡೆದುಕೊಳ್ಳಬೇಕು. ಪ್ರಚಾರ ಸಾಮಗ್ರಿಗಳಾದ ಕರಪತ್ರ, ಪೋಸ್ಟರ್, ಬ್ಯಾನರ್ಸ್ ಮುದ್ರಣದ ಬಗ್ಗೆ ಸರಿಯಾದ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆಯದೇ ಪ್ರಚಾರ ಸಾಮಾಗ್ರಿ ಮುದ್ರಿಸುವಂತಿಲ್ಲ ಎಂದು ತಿಳಿಸಿದರು.
ಚುನಾವಣೆಗೆ ಹೊಸ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಮತಯಂತ್ರಗಳನ್ನು ಸ್ವೀಕರಿಸಲಾಗಿದೆ. ಈ ಮತಯಂತ್ರಗಳನ್ನು ಇದೇ ಏಪ್ರಿಲ್ 6 ರಂದು ಚಿತ್ರದುರ್ಗ ನಗರದ ಗುರುಭವನದಲ್ಲಿ ಇರಿಸಲಾಗುವುದು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ಸ್ಟ್ರಾಂಗ್ ರೂಂ ಕಾರ್ಯಾಚರಣೆಯನ್ನು ಹಾಗೂ ಪ್ರಕ್ರಿಯೆಯನ್ನು ಗಮನಿಸಬಹುದು ಎಂದರು.
ಈ ಬಾರಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಫಾರಂ 12ಡಿನಲ್ಲಿ ಅರ್ಹರಿಗೆ ಅಂಚೆ ಮತಪತ್ರ ನೀಡಲು ಅರ್ಜಿ ಪಡೆಯಲಾಗಿದೆ. ಮತದಾನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಗಟ್ಟೆ ಏಜೆಂಟ್‍ಗಳನ್ನು ತುರ್ತಾಗಿ ನೇಮಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮತಗಟ್ಟೆಗಳಲ್ಲಿ ರ್ಯಾಂಪ್, ವೀಲ್‍ಚೇರ್, ಕುಡಿಯುವ ನೀರು, ಸೂಕ್ತ ನೆರಳಿನ ವ್ಯವಸ್ಥೆಯನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷ ಮತಗಟ್ಟೆಗಳಾಗಿ ಪಿಂಕ್‍ಬೂತ್‍ಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಸತ್ಯನಾರಾಯಣ, ಸಭೆಗಳ ನೋಡಲ್ ಅಧಿಕಾರಿ ಧನಂಜಯ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours