ಸಮಾಜದ ಏಳಿಗೆಗಾಗಿ ಶ್ರಮಿಸಿದ ಸಿದ್ಧರಾಮೇಶ್ವರರು:ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

 

ಚಿತ್ರದುರ್ಗ:12ನೇ ಶತಮಾನದ ದಿನಗಳಲ್ಲಿ ಅಲ್ಲಲ್ಲಿ ಕೆರೆ, ಕಟ್ಟೆ ಹಾಗೂ ಬಾವಿಗಳನ್ನು ನಿರ್ಮಿಸಿ, ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿ, ಜನ-ಜಾನುವಾರು, ಪಕ್ಷಿ ಸಂಕುಲಗಳೂ ಸೇರಿದಂತೆ ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸಿ ಸಮಾಜದ ಏಳಿಗೆಗಾಗಿ  ಶ್ರಮಿಸಿದವರು ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆ ಸಮಾರಂಭದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕರ್ಮಯೋಗಿ, ಕಾಯಕಯೋಗಿ, ಶಿವಯೋಗಿ ಸಿದ್ಧರಾಮೇಶ್ವರರು ಬೋಧನೆ, ವಚನಗಳನ್ನು ನೀಡುವುದು ಮಾತ್ರವಲ್ಲದೇ ಕಾಯಕದ ಮೂಲಕ ಸಮಾಜದ ಸೇವೆ ಮಾಡಿದ್ದಾರೆ ಎಂದು ತಿಳಿಸಿದ ಅವರು, ನಾವುಗಳು ನಮ್ಮಲ್ಲಿನ ಮಹಾನ್ ದಾರ್ಶನಿಕರ, ಚಿಂತಕರ ವಿಚಾರಧಾರೆಗಳನ್ನು ತಿಳಿದುಕೊಳ್ಳುತ್ತಿಲ್ಲ. ದಾರ್ಶನಿಕರ ವಿಚಾರಧಾರೆಗಳ ಕುರಿತು ತಿಳಿದುಕೊಂಡಾಗ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ತಿಳಿಸಿದರು.
ಭೋವಿ ಸಮಾಜ ಕಾಯಕದಲ್ಲಿ ತುಂಬಾ ಶ್ರಮಜೀವಿಗಳಾಗಿದ್ದು, ಕಾಯಕನಿಷ್ಠ ಸಮಾಜವಾಗಿದೆ. ಈ ಸಮಾಜಕ್ಕೆ ಸಾಕಷ್ಟು ಮೀಸಲಾತಿ ಸೌಲಭ್ಯಗಳಿದ್ದು, ಶೈಕ್ಷಣಿಕ, ರಾಜಕೀಯ ಸೇರಿದಂತೆ ಸರ್ಕಾರದ ಸೌಲಭ್ಯಗಳ ಅವಕಾಶ ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಕೆಲವರು ಅಲೆಮಾರಿ ಜೀವನ ಸಾಗಿಸುತ್ತಿದ್ದು, ತಾವುಗಳು ಕೆಲಸಕ್ಕೆ ಹೋಗಬೇಕಾದರೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಎಂದು ಮನವಿ ಮಾಡಿದ ಅವರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.
ಆದರ್ಶ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹನೀಯರು ಹಾಕಿಕೊಟ್ಟ ದಾರಿದೀವಿಗೆಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ಶಿವಯೋಗಿ ಸಿದ್ಧರಾಮೇಶ್ವರರ ವಿಚಾರಧಾರೆಗಳನ್ನು ನಾವುಗಳು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯೂರು ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರು ಹಾಗೂ ಸಾಹಿತಿ ಪ್ರೊ.ಬಸವರಾಜ ಟಿ.ಬೆಳಗಟ್ಟ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಜೇಡರದಾಸಿಮಯ್ಯ, ಅಕ್ಕಮಹಾದೇವಿ ಸೇರಿದಂತೆ ಇಂತಹ ಅಗ್ರಗಣ್ಯ  ಪ್ರಥಮ ಸ್ಥಾನದಲ್ಲಿದ್ದವರು ಶಿವಯೋಗಿ ಶ್ರೀ ಸಿದ್ಧರಾಮರು ಎಂದು ಹೇಳಿದರು.
ಸಿದ್ಧರಾಮರು ವಚನ, ಸ್ವರವಚನ, ಬಸವಸ್ತ್ರೋತ್ರ, ತ್ರಿವಧಿ, ಅಷ್ಟಾವರಣ ಸ್ತ್ರೋತ್ರದ ತ್ರಿವಧಿ, ಸಂಕೀರ್ಣ ತ್ರಿವಧಿ ಸೇರಿದಂತೆ ವೈವಿಧ್ಯಮಯ ಸಾಹಿತ್ಯ ಸೃಷ್ಠಿಮಾಡಿದ್ದಾರೆ. ವಚನ ಮತ್ತು ಸ್ವರವಚನಗಳಲ್ಲಿ ಸಿದ್ಧರಾಮೇಶ್ವರ ಅಂಕಿತನಾಮ ಕಪಿಲಸಿದ್ದ ಮಲ್ಲಿಕಾರ್ಜನ ಅಂತಾ ಇದ್ದರೆ ತ್ರಿವಧಿಗಳಲ್ಲಿ ಯೋಗಿನಾಥ ಎಂಬ ಅಂಕಿತನಾಮ ಇದೆ. 12ನೇ ಶತಮಾನದಲ್ಲಿ ಎರಡು ಅಂಕಿತನಾಮವಿರುವ ಏಕೈಕ ವ್ಯಕ್ತಿ ಶಿವಯೋಗಿ ಸಿದ್ದರಾಮರು. ಇವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿಗಳು, ಧರ್ಮ ತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ವಿಷಯಗಳ ವಚನಗಳು ಪ್ರಧಾನವಾಗಿ ಕಂಡುಬಂದಿವೆ ಎಂದು ಹೇಳಿದರು.
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, ಕಾಯಕದಿಂದ ಕೈಲಾಸ ಕಂಡ ಪುಣ್ಯಾತ್ಮರು ಸಿದ್ಧರಾಮರು. ಶಿವಯೋಗಿ ಸಿದ್ಧರಾಮರು ಕಾಯಕದ ಜೊತೆಗೆ ಹಲವಾರು ವಚನಗಳನ್ನು ರಚನೆ ಮಾಡಿದ್ದಾರೆ. ಕೆರೆ-ಕಟ್ಟೆ, ಬಾವಿ ನಿರ್ಮಾಣ, ರಸ್ತೆ ನಿರ್ಮಾಣ ಸೇರಿದಂತೆ ಕಷ್ಟದ ಕಾಯಕವನ್ನು ಇಂದಿಗೂ ಸಮಾಜ ಮುಂದುವರೆಸಿಕೊಂಡು ಬರುತ್ತಿದೆ ಎಂದರು.
ಜಯಂತಿ ಅಂಗವಾಗಿ ಮೊಳಕಾಲ್ಮುರು ತಾಲ್ಲೂಕು ಸಿದ್ದಯ್ಯನಕೋಟೆಯ ನುಂಕೇಶ್ ಮತ್ತು ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್, ತಹಶೀಲ್ದಾರ್ ನಾಗವೇಣಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜನ, ಜಿಲ್ಲಾ ಭೋವಿ ಸಮಾಜದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಸಮಾಜದ ಮುಖಂಡರಾದ ಡಿ.ಸಿ.ಮೋಹನ್, ಲಕ್ಷ್ಮಣಪ್ಪ, ಸತೀಶ್, ಭರತ್, ಶ್ರೀನಿವಾಸ್ ಮಳಲಿ, ಆನಂದ್, ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours