ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಭೇಟೆ, ಕೆಜಿ ಕೆಜಿ ಚಿನ್ನ ಬೆಳ್ಳಿ ಸಿಕ್ಕಿದ್ದು ಎಲ್ಲಿ,ನೋಡಿ ಇಲ್ಲಿದೆ ಮಾಹಿತಿ

 

ಬೆಂಗಳೂರು,ಮೇ.೩೧-ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಮರ ಸಾರಿದ್ದು ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ, ತುಮಕೂರು, ಹಾವೇರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹಠಾತ್ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು. ಆದಾಯಕ್ಕೂ ಮೀರಿ ಆಸ್ತಿ ಪಾಸ್ತಿ ಗಳಿಸಿರುವ ಭ್ರಷ್ಟ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ತುಂಗಾ ಮೇಲ್ದಂಡೆ ಯೋಜನೆಯನ್ನು ಮುಖ್ಯ ಇಂಜಿನಿಯರ್ ಪ್ರಶಾಂತ್ ಅವರ ನಿವಾಸದಲ್ಲಿ ಕೆಜಿಗಟ್ಟಲೇ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಲಭ್ಯವಾಗಿವೆ. ಈ ಬಗ್ಗೆ ಲೋಕಾಯುಕ್ತರು ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಇಬ್ಬರು ಇಂಜಿನಿಯರ್‌ಗಳ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಶಂಕರ್ ನಾಯಕ ನಿವಾಸಕ್ಕೆ ಲಗ್ಗೆ ಹಾಕಿರುವ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.ಪ್ರಶಾಂತ್ ಅವರ ಶಿವಮೊಗ್ಗದ ಹೊಸ ಮನೆಯ ಮೂರನೇ ಮುಖ್ಯರಸ್ತೆಯ ಕೆಎಚ್‌ಬಿ ಕಾಲೋನಿಯ ಮನೆ, ಭದ್ರಾವತಿ ತಾಲೂಕಿನ ಶೆಟ್ಟಿಹಳ್ಳಿಯ ಎರಡು ತೋಟದ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಶೆಟ್ಟಿ ಹಳ್ಳಿಯಲ್ಲಿ ೮ ಎಕರೆ ಅಡಿಕೆ ತೋಟವಿದೆ.ಶರಾವತಿ ನಗರದ ಬಿ ಬ್ಲಾಕ್‌ನ ಪ್ರಶಾಂತ್ ಪತ್ನಿಯ ತಮ್ಮ ನಾಗೇಶ್ ಅವರ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ಪ್ರಶಾಂತ್ ಅವರು ಕಾರ್ಯ ನಿರ್ವಹಿಸುತ್ತಿರುವ ಸಾಗರ ರಸ್ತೆಯಲ್ಲಿರುವ ತುಂಗಾ ಮೆಲ್ದಂಡೆ ಕಚೇರಿ, ಪ್ರಶಾಂತ್ ಅವರ ಪತ್ನಿಯ ಸೋದರ ಮನೆ, ತೋಟದ ಮನೆ ಸೇರಿ ೫ ಕಡೆ ದಾಳಿ ನಡೆಸಲಾಗಿದೆ.ಜೂನಿಯರ್ ಇಂಜಿನಿಯರ್ ಶಂಕರ್ ನಾಯಕ್ ಅವರಿಗೆ ಸೇರಿರುವ ಶಿಕಾರಿಪುರದ ೩ ಕಡೆಗಳಲ್ಲಿ ದಾಳಿ ಮಾಡಿ ಅಕ್ರಮ ಆಸ್ತಿ ಸಂಪಾದನೆಯ ದಾಖಲೆಗಳನ್ನು ಜಾಲಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಚಿತ್ರದುರ್ಗದ ಲೋಕಾಯುಕ್ತ ಎಸ್‌ಪಿ ವಾಸುದೇವಾ ರಾಮ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಒಟ್ಟು ೮ ಕಡೆಗಳಲ್ಲಿ ದಾಳಿ ಮಾಡಲಾಗಿದೆ.ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ಆರ್‌ಟಿ ನಗರದಲ್ಲಿರುವ ಕೆಐಎಡಿಬಿ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದಾರೆ.ಆರ್.ಟಿ. ನಗರದ ಸಮೀಪವಿರುವ ಶಂಕರಪುರಂನ ಡಿ ಬ್ಲಾಕ್‌ನಲ್ಲಿ ವಾಸವಿರುವ ಪ್ರಸ್ತುತ ಮೈಸೂರಿನ ಕೆಐಎಡಿಬಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್. ನರಸಿಂಹಮೂರ್ತಿ ಎಂಬುವರ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಎಸ್ಪಿ ವಲಿಬಾಷಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್ ಮತ್ತು ಹರೀಶ್ ನೇತೃತ್ವದ ತಂಡ ದಾಳಿ ನಡೆಸಿ ದಾಖಲಾತಿಗಳ ತಪಾಸಣೆಯಲ್ಲಿ ತೊಡಗಿದ್ದಾರೆ.ಬೆಳಿಗ್ಗೆ ೫.೧೫ಕ್ಕೆ ಐದು ವಾಹನಗಳಲ್ಲಿ ದಿಢೀರ್ ದಾಳಿ ನಡೆಸಿರುವ ೬ ಮಂದಿ ಲೋಕಾಯುಕ್ತ ಅಧಿಕಾರಿಗಳು ತಂಡ ಹಾಗೂ ೧೫ ಮಂದಿ ಸಿಬ್ಬಂದಿಗಳನ್ನೊಳಗೊಂಡ ತಂಡ ಕೆಐಎಡಿಬಿ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹಮೂರ್ತಿ ಮನೆ ಹಾಗೂ ಸಮೀಪದಲ್ಲೇ ಇರುವ ಇವರ ಮಾವ ಮತ್ತು ನಾದಿನಿ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಈ ಮೂರು ಮನೆಗಳವರಿಗೂ ಮುಂಜಾನೆಯೇ ಶಾಕ್ ನೀಡಿದ್ದಾರೆ.ಸುದೀರ್ಘವಾಗಿ ಕಾಗದ ಪತ್ರಗಳು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಈ ಮನೆಗಳಲ್ಲಿರುವ ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದು ತೂಕ ಮಾಡುವ ಕಾರ್ಯದಲ್ಲಿ ಮುಂದಾಗಿದ್ದಾರೆ.ಸದರಿ ಅಧಿಕಾರಿ ನರಸಿಂಹಮೂರ್ತಿ ತಮ್ಮ ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇದುವರೆವಿಗೂ ಇವರ ಮನೆಯಲ್ಲಿ ೮ ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣಗಳು, ಚರ ಆಸ್ತಿಯ ದಾಖಲಾತಿಗಳು ಲಭ್ಯವಾಗಿವೆ ಎಂದು ಲೋಕಾಯುಕ್ತ ಎಸ್ಪಿ ವಲಿಬಾಷ ತಿಳಿಸಿದ್ದಾರೆ.ತುಮಕೂರು ನಗರ ಸೇರಿದಂತೆ ಬೇರೆ ಬೇರೆ ಕಡೆ ಸದರಿ ಅಧಿಕಾರಿ ನಿವೇಶನಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸಂಜೆವರೆಗೂ ದಾಖಲಾತಿಗಳ ಪರಿಶೀಲನೆ ಕಾರ್ಯ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹಮೂರ್ತಿ ವಿರುದ್ಧ ಭ್ರಷ್ಟಾಚಾರದ ಆರೋಪ ಹಾಗೂ ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಸಂಪಾದಿಸಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಇಲಾಖೆ ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ದಾಳಿ:
ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ೫೬ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರಿನ ನಿವೇದಿತಾ ನಗರ ಸಂಕ್ರಾಂತಿ ವೃತ್ತದ ಮನೆ, ತೋಟದ ಮನೆ ಸೇರಿ ಹಲವು ಕಡೆ ೧೩ ತಂಡದಿಂದ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.
ಕೆಜಿಗಟ್ಟಲೇ ಚಿನ್ನ ಪತ್ತೆ
ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಅವರ ನಿವಾಸದಲ್ಲಿ ಕೆಜಿಗಟ್ಟಲೇ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಲಭ್ಯವಾಗಿವೆ. ಇವರ ಹೆಸರಿನಲ್ಲಿದ್ದ ಐಷರಾಮಿ ಕಾರುಗಳು ಪತ್ತೆಯಾಗಿವೆ. ಇವರಿಬ್ಬರು ಇಂಜಿನಿಯರ್‌ಗಳು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.

[t4b-ticker]

You May Also Like

More From Author

+ There are no comments

Add yours