ನನ್ನ ಅಭಿವೃದ್ದಿ ಕೆಲಸಗಳು ಮಾತನಾಡುತ್ತವೆ: ಎಂ.ಚಂದ್ರಪ್ಪ

 

ಹೊಳಲ್ಕೆರೆ : ಕಳೆದ ಐದು ವರ್ಷಗಳಿಂದ ಹೊಳಲ್ಕೆರೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾನು ಮಾತನಾಡಲ್ಲ. ನನ್ನ ಅಭಿವೃದ್ದಿ ಕೆಲಸಗಳೆ ಮಾತನಾಡುತ್ತವೆ ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪ ಹೇಳಿದರು.
ಬಿಜೆಪಿ. ಕಚೇರಿಯಿಂದ ಬಾರಿ ಜನಬೆಂಬಲದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಬುಧವಾರ ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಭ್ಯರ್ಥಿ ಎಂ.ಚಂದ್ರಪ್ಪ ಕ್ಷೇತ್ರಾದ್ಯಂತ 496 ಹಳ್ಳಿಗಳಲ್ಲಿ ಸಿ.ಸಿ.ರಸ್ತೆ, ಟಾರ್ ರಸ್ತೆ, ಕೆರೆ ಕಟ್ಟೆ, ಚೆಕ್‍ಡ್ಯಾಂಕ್‍ಗಳನ್ನು ನಿರ್ಮಿಸಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆ ನಿವಾರಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ದಿನಕ್ಕೆ ಎರಡು ಗಂಟೆ ವಿದ್ಯುತ್ ಇರುತ್ತಿರಲಿಲ್ಲ. ಆಗ ರೈತರು ತೊಂದರೆ ಪಡುತ್ತಿದ್ದುದನ್ನು ಕಣ್ಣಾರೆ ಕಂಡು ಪಂಡರಹಳ್ಳಿ, ಮಧುರೆ, ಬೆಂಕಿಕೆರೆಯಿಂದ ಒಂದೊಂದು ದೊಡ್ಡ ಹೈಟೆನ್ಷ್‍ನ್ ವಿದ್ಯುತ್ ಲೈನ್ ತಂದು ದಿನಕ್ಕೆ ಐದಾರು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಜೋಗ್‍ಫಾಲ್ಸ್‍ನ ಶರಾವತಿಯಿಂದ ನೇರವಾಗಿ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 220 ಮೆ.ವ್ಯಾ. ವಿದ್ಯುತ್ ತರಿಸಿಕೊಳ್ಳುವುದಕ್ಕಾಗಿ 250 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದರಿಂದ ಇನ್ನು ನೂರು ವರ್ಷಗಳ ಕಾಲ ರೈತರಿಗೆ ಕರೆಂಟಿನ ಸಮಸ್ಯೆಯಾಗುವುದಿಲ್ಲ. ಇಲ್ಲಿಂದ ಗೆದ್ದು ಹೋಗಿ ಮಂತ್ರಿಯಾಗಿದ್ದವರು ಇಲ್ಲಿಯವರೆಗೂ ಕ್ಷೇತ್ರವನ್ನು ಏಕೆ ಅಭಿವೃದ್ದಿ ಮಾಡಲಿಲ್ಲ. ಚುನಾವಣೆ ಸಮಯದಲ್ಲಿ ಗ್ಯಾರೆಂಟಿ ಕಾರ್ಡ್ ಕೊಡಲು ಬಂದರೆ ಜನ ಮರುಳಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆ ಇಲ್ಲದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದೇನೆ. ಯಾರ ಮೇಲೂ ಜಾತಿ ನಿಂದನೆ ಕೇಸುಗಳ ದಾಖಲಾಗಲು ಬಿಟ್ಟಿಲ್ಲ. ಎಲ್ಲಾ ಜನಾಂಗದವರನ್ನು ನನ್ನ ಜಾತಿಯವರೆಂದು ತಿಳಿದು ಸಾರ್ವಜನಿಕರ ಬದುಕು ಅರ್ಥ ಮಾಡಿಕೊಂಡು ಯಾರು ಕೇಳಲಿ ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಗಳಿವೆ ಎನ್ನುವುದನ್ನು ಹುಡುಕಿ ಕೆಲಸ ಮಾಡಿದ್ದೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರ. ಈ ಬಾರಿ ಇನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೀರೆಂಬ ನಂಬಿಕೆಯಿದೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೇರವಾಗಿ ನೀರು ತಂದು ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಐದು ನೂರ ಹತ್ತು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಘಟ್ಟಿಹೊಸಹಳ್ಳಿ ಬಳಿ ಗುಡ್ಡದ ಮೇಲೆ ಎಪ್ಪತ್ತು ಕೋಟಿ ರೂ.ಗಳ ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನರ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡುವ ರಾಜಕಾರಣಿ ನಾನು. ಚುನಾವಣೆಯಲ್ಲಿ ಮತದಾನ ಮಾಡುವುದು ಒಂದು ನಿಮಿಷದ ಕೆಲಸ. ಯಾರು ನಿಮ್ಮ ಸಮಸ್ಯೆ ಕಷ್ಠ-ಸುಖಗಳಿಗೆ ಸ್ಪಂದಿಸುತ್ತಾರೆಂಬುದನ್ನು ಚಿಂತಿಸಿ ಯೋಗ್ಯರಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ ಎಂದು ನೆರೆದಿದ್ದ ಜನತೆಯಲ್ಲಿ ವಿನಂತಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪನವರು ಎಲ್ಲಾ ಇಲಾಖೆಗಳಿಂದ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ಹೊಳಲ್ಕೆರೆ ಪಟ್ಟಣವನ್ನು ಅಭಿವೃದ್ದಿಪಡಿಸಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಶದ ಪ್ರಧಾನಿ ಮೋದಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್‍ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಯೋಜನೆಗಳನ್ನು ತಿಳಿಸಿ ಎಂ.ಚಂದ್ರಪ್ಪನವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತೇವೆಂದು ತಿಳಿಸಿದರು.
ಡೊಳ್ಳು, ವೀರಗಾಸೆ, ತಮಟೆ, ಬೊಂಬೆ ಕುಣಿತ, ಚಂಡೆ ಮೃದಂಗ ಇನ್ನು ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿದ್ದವು.
ಜಿಲ್ಲಾಧ್ಯಕ್ಷ ಎ.ಮುರಳಿ, ಯುವ ಮುಖಂಡರುಗಳಾದ ಜಿ.ಎಸ್.ಅನಿತ್‍ಕುಮಾರ್, ರಘುಚಂದನ್, ಮಂಡಲ ಅಧ್ಯಕ್ಷರಾದ ಸಿದ್ದೇಶ್, ಶೈಲೇಶ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆಶಿವಪ್ರಕಾಶ್, ರೂಪ ಸುರೇಶ್, ಪ್ರವೀಣ, ಇಂದ್ರಪ್ಪ, ಡಿ.ಸಿ.ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಡಿ.ವಿ.ಶರಣಪ್ಪ, ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಚಿತ್ರಹಳ್ಳಿ ದೇವರಾಜ್, ಮಂಜಣ್ಣ ಕೋಗುಂಡೆ, ನ್ಯಾಯವಾದಿ ಶಿವಕುಮಾರ್ ಜಿ.ಹೆಚ್. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours