ವಿಕಲಚೇತನರ ಬೈಕ್ ರ್ಯಾಲಿಗೆ ಸಿಇಒ ಎಸ್.ಜೆ.ಸೋಮಶೇಖರ್ ಚಾಲನೆ, ಗಮನ ಸೆಳೆದ ವಿಕಲಚೇತನರ ಬೈಕ್ ರ್ಯಾಲಿ

 

ಮತದಾನ ಜಾಗೃತಿ ಸಂಬಂಧ ವಿಕಲಚೇತನರ ಬೈಕ್ ರ್ಯಾಲಿಗೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಚಾಲನೆ
ಗಮನ ಸೆಳೆದ ವಿಕಲಚೇತನರ ಬೈಕ್ ರ್ಯಾಲಿ
************
ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.06:
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮತದಾನದ ಬಗ್ಗೆ ಅರಿವು ಮೂಡಿಸಲು  ಗ್ರಾಮೀಣ, ನಗರ ಹಾಗೂ ತಾಲ್ಲೂಕು ವಿವಿದ್ಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ವಿಕಲಚೇತನರಿಂದ ಏರ್ಪಡಿಸಿದ್ದ ವಿಕಲಚೇತನರ ಬೈಕ್ ರ್ಯಾಲಿ ಗಮನ ಸೆಳೆಯಿತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಓನಕೆ ಓಬವ್ವ ವೃತ್ತದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಅಂಗವಾಗಿ ಮತದಾನ ಜಾಗೃತಿ ಸಂಬಂಧ ಹಮ್ಮಿಕೊಂಡಿದ್ದ ವಿಕಲಚೇತನರ ಬೈಕ್ ರ್ಯಾಲಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ವಿಕಲಚೇತನರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಕಡಿಮೆ ಮತದಾನವಾಗಿರುವ ಪ್ರದೇಶಗಳಲ್ಲಿ ಹಾಗೂ ಅರ್ಹ ಮತದಾರರು ಯಾರೂ ಕೂಡ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂಬ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಂಗವಿಕಲ ಮತದಾರರು, ಯುವ ಮತದಾರರು, ಮಹಿಳಾ ಮತದಾರರು ಸೇರಿದಂತೆ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದ್ದು, ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು.
ಇದೇ ಏಪ್ರಿಲ್ 26ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಿ ಪ್ರಜಾಪ್ರಭುತ್ವ ಸದೃಢಗೊಳಿಸಬೇಕು ಎಂದರು.
ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಿಂದ ಆರಂಭವಾದ ವಿಕಲಚೇತನರ ಬೈಕ್ ರ್ಯಾಲಿಯು, ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಎಸ್‍ಬಿಎಂ ವೃತ್ತ, ಗಾಂಧಿ ವೃತ್ತದ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದವರೆಗೂ ಬೈಕ್ ರ್ಯಾಲಿ ಜಾಥಾ ಸಂಚರಿಸಿ, ನಂತರ ಪುನಃ ಒನಕೆ ವೃತ್ತ ತಲುಪಿತು. ನಂತರ ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಗೊಳಿಸಿ, ಕಾಡು ರಕ್ಷಣೆಗೆ ಬದ್ಧರಾಗೋಣ ಮತ ಹಾಕಲು ಸಿದ್ದರಾಗೋಣ, ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ. ಮತದಾನ ದೇಶವನ್ನು ರೂಪಿಸುತ್ತದೆ. ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿರಲಿ, ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ನನ್ನ ದೇಶ ನನ್ನ ಹಕ್ಕು, ನನ್ನ ಮತ ನನ್ನ ಹಕ್ಕು, ಮತದಾನಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೇ, ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ನಮ್ಮ ಮತ ಅಮೂಲ್ಯವಾದದ್ದು ಬನ್ನಿ ಮತದಾನ ಕೇಂದ್ರಕ್ಕೆ, ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ, ಯೋಚಿಸಿ ಮತ ಹಾಕೋಣ ಅದರಲ್ಲೇ ದೇಶದ ಹಿತ ಕಾಯೋಣ, ಇದೇ ಏಪ್ರಿಲ್ 26ರಂದು ಶುಕ್ರವಾರ ತಪ್ಪದೇ ಎಲ್ಲರೂ ಮತದಾನ ಮಾಡಬೇಕು ಎಂದು ಸಂದೇಶ ಸಾರುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಂ.ವಿ.ವೀಣಾ, ತಾಲ್ಲೂಕು ಪಂಚಾಯಿತಿ ಇಒ ಅನಂತ ರಾಜು, ಸಹಾಯಕ ನಿರ್ದೇಶಕ ಯರ್ರಿಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ಜಿಲ್ಲಾ ಸ್ವೀಪ್ ಸಮಿತಿ ಸಂಯೋಜಕಿ ಸುಷ್ಮಾರಾಣಿ, ಎಂ.ಆರ್.ಡಬ್ಯೂ ಎನ್.ಮೈಲಾರಪ್ಪ ಸೇರಿದಂತೆ ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ವಿಕಲಚೇತನರು ಇದ್ದರು.
ಫೋಟೋ ವಿವರ: ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾನದ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ವಿಕಲಚೇತನರ ಬೈಕ್ ರ್ಯಾಲಿಗೆ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
========

[t4b-ticker]

You May Also Like

More From Author

+ There are no comments

Add yours