ಹೊಳಲ್ಕೆರೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು: ಶಾಸಕ ಎಂ.ಚಂದ್ರಪ್ಪ.

 

ಭರಮಸಾಗರದ ದೊಡ್ಡಕೆರೆ, ಸಣ್ಣಕೆರೆ ಹಾಗೂ ಎಮ್ಮೆಹಟ್ಟಿ ಕೆರೆಗಳ ಹೂಳುತೆಗೆಸಿ ಅಭಿವೃದ್ದಿಪಡಿಸಿ ಸುತ್ತಮುತ್ತಲಿನ ನಲವತ್ತು ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಭರಮಸಾಗರದ ದೊಡ್ಡೆಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಸ್ವಾಮಿಗಳಿಗೆ ರೈತರ ಬಗ್ಗೆಯಿರುವ ಕಳಕಳಿ ಹಾಗೂ ನಮ್ಮ ಒತ್ತಡಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ೫೬೫ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಒಂದು ತಿಂಗಳಲ್ಲಿ ಟೆಂಡರ್ ಕರೆದು ಈಗಾಗಲೇ ಕೆಲಸ ಆರಂಭಗೊಂಡಿದೆ. ಎಸ್.ಎನ್.ಸಿ.ಕಂಪನಿ ಚುರುಕಿನಿಂದ ಕೆಲಸ ಮಾಡುತ್ತಿದೆ. ಇನ್ನೂರು ವರ್ಷಗಳಿಂದ ದೊಡ್ಡಕೆರೆಯಲ್ಲಿ ಹೂಳು ತುಂಬಿದೆ. ಹಾಗಾಗಿ ಅಂರ್ತಜಲ ಹೆಚ್ಚಿಸಲು ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಮನಗಂಡು ೭೨ ಹಳ್ಳಿಗಳಲ್ಲಿರುವ ರೈತರ ಬದುಕನ್ನು ಗಮನದಲ್ಲಿಟ್ಟುಕೊಂಡು ಕೆರೆಗಳ ಹೂಳೆತ್ತಿಸಿ ಇನ್ನು ಹತ್ತು ವರ್ಷಗಳ ಕಾಲ ಮಳೆ ಬರದಿದ್ದರು ನೀರು ಸಂಗ್ರಹಿಸಲಾಗುವುದು. ರೈತರು ಇದರ ಸದುಪಯೋಗಪಡೆದುಕೊಳ್ಳುವಂತೆ ವಿನಂತಿಸಿದರು.
ತುಂಗಭದ್ರಾದಿಂದ ೫೨ ಕಿ.ಮೀ.ದೂರದಿಂದ ಪೈಪ್‌ಲೈನ್ ಮೂಲಕ ದೊಡ್ಡಕೆರೆಗೆ ನೀರು ಹರಿಸಲಾಗುವುದು. ಈಗಾಗಲೆ ೪೮ ಕಿ.ಮೀ.ನಷ್ಟು ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಇನ್ನು ನಾಲ್ಕು ಕಿ.ಮೀ.ಮಾತ್ರ ಪೈಪ್‌ಲೈನ್ ಅಳವಡಿಕೆಯಾಗಬೇಕಿದೆ. ಈ ಕೆರೆಗೆ ನೀರು ಹರಿಸುವುದರಿಂದ ಸುತ್ತಮುತ್ತ ೨೦ ಕಿ.ಮೀ.ವರೆಗೆ ಬೋರ್‌ಗಳಲ್ಲಿ ನೀರಿನ ಮಟ್ಟ ವೃದ್ದಿಯಾಗಲಿದೆ. ಕಳೆದ ವರ್ಷ ೧೨೯ ಟಿ.ಎಂ.ಸಿ.ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗಿದೆ. ಈ ವರ್ಷ ೧೫೦ ಟಿ.ಎಂ.ಸಿ.ನೀರು ಸಮುದ್ರದ ಪಾಲಾಗಿದೆ. ನಮಗೆ ಬೇಕಿರುವುದು ಕೇವಲ ಒಂದು ಟಿ.ಎಂ.ಸಿ. ಮಾತ್ರ. ಇದರಿಂದ ಮೂವತ್ತು ಸಾವಿರ ಎಕರೆಯಲ್ಲಿ ಭತ್ತ ಬೆಳೆಯಬಹುದು. ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಈ ಕೆರೆಗೆ ಸುತ್ತ ಬಂಡೆ ಹಾಕಿಸಿದ್ದೇನೆ. ತಳದವರೆಗೂ ಹೂಳು ತೆಗೆಸಬೇಕಿದೆ. ಅನವಶ್ಯಕವಾಗಿ ಯಾರು ಹಣ ಅಪಹರಿಸುವಂತಿಲ್ಲ. ರಾಜ್ಯ ಸರ್ಕಾರದಲ್ಲಿ ಹೋರಾಟ ಮಾಡಿ ತಂದಿರುವ ಹಣ ನೇರವಾಗಿ ರೈತರಿಗೆ ತಲುಪಬೇಕು. ರೈತರು ಇಲ್ಲಿನ ಮಣ್ಣು ತುಂಬಿಕೊಂಡು ಹೋಗಲು ಅವಕಾಶ ಕೊಡಿ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹದಿನೈದು ಕೋಟಿ ರೂ.ಗಳನ್ನು ಈ ಕೆರೆಗೆ ಹಾಕಿತ್ತು. ಆದರೆ ಯಾವುದೇ ಅಭಿವೃದ್ದಿಯಾಗಲಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಹೆಚ್.ಆಂಜನೇಯ ಹಾಗೂ ಆತನ ಬೆಂಬಲಿಗರು ವಾಟ್ಸ್‌ಪ್‌ಲ್ಲಿ ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ನನ್ನ ಕ್ಷೇತ್ರದ ಮತದಾರರು ಯಾರು ಇದಕ್ಕೆ ಸೊಪ್ಪು ಹಾಕುವುದಿಲ್ಲ. ಅದಕ್ಕಾಗಿ ಬೇರೆ ಪಕ್ಷದವರು ಇಲ್ಲಿ ದೊಡ್ಡಸ್ಥಿಕೆ ಮಾಡಿದರೆ ಸಹಿಸುವುದಿಲ್ಲ ಎಂದು ಶಾಸಕ ಎಂ.ಚಂದ್ರಪ್ಪ ಎಚ್ಚರಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು. ಕುಡಿಯುವ ನೀರಿಗೂ ೩೨೯ ಕೋಟಿ ರೂ.ಗಳನ್ನು ನೀಡಿದ್ದೇನೆ. ಕಾಕಬಾಳು ಸಮೀಪ ಕೆ.ಪಿ.ಟಿ.ಸಿ.ಎಲ್.ಗೆ ಹತ್ತು ಎಕರೆ ಜಮೀನು ನೀಡಿದ್ದು, ೨೨೦ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದಕ್ಕಾಗಿ ೨೫೦ ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ಚಿಕ್ಕಜಾಜೂರು ಬಳಿಯೂ ೨೨೦ ಮೆ.ವ್ಯಾ.ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ರೈತರಿಗೆ ಕರೆಂಟ್ ಮತ್ತು ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ನನ್ನ ಕ್ಷೇತ್ರದಲ್ಲಿ ೩೫೦೦ ಮನೆಗಳನ್ನು ಬಡವರಿಗೆ ಮಂಜೂರು ಮಾಡಿಸಿದ್ದೇನೆ. ಎರಡುವರೆ ವರ್ಷದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರದಿಂದ ತಂದಿದ್ದೇನೆ. ಡಿಸೆಂಬರ್ ಒಳಗೆ ಕೆರೆಗಳಿಗೆ ನೀರು ಹರಿಯಲಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ರೈತರಿಗೆ ಅನುಕೂಲ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಕೋಗುಂಡೆ ಮಂಜಣ್ಣ ಮಾತನಾಡಿ ತುಂಗಭದ್ರಾದಿಂದ ಬರುವ ನೀರಿನಲ್ಲಿ ಶೇ.೪೦ ರಷ್ಟು ನೀರನ್ನು ದೊಡ್ಡಕೆರೆಯಲ್ಲಿ ಉಳಿಸಿಕೊಂಡು ಉಳಿದ ನೀರನ್ನು ಬೇರೆ ಕೆರೆಗಳಿಗೆ ಹರಿಸಬೇಕಾಗಿದೆ. ರೈತರು ಫಲವತ್ತಾದ ಈ ಮಣ್ಣನ್ನು ತಮ್ಮ ತಮ್ಮ ಹೊಲಗಳಿಗೆ ಹಾಕಿಸಿಕೊಳ್ಳಬಹುದು. ೫೨ ಕಿ.ಮೀ.ನಲ್ಲಿ ಈಗಾಗಲೆ ೪೮ ಕಿ.ಮೀ.ನಷ್ಟು ಪೈಪ್‌ಲೈನ್ ಕಾರ್ಯ ಪೂರ್ಣಗೊಂಡಿದ್ದು, ಇನ್ನು ನಾಲ್ಕು ಕಿ.ಮೀ.ನಷ್ಟು ಬಾಕಿಯಿದೆ. ಗುತ್ತಿಗೆದಾರರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು ಸೂಚಿಸಿದರು.
ಬಿಜೆಪಿ.ಮಂಡಲ ಅಧ್ಯಕ್ಷ ಶೈಲೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ.ಶರಣಪ್ಪ, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಕಲ್ಲೇಶ್, ಬಿಜೆಪಿ.ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೀರೇಶ್, ನಾಗೇಂದ್ರಪ್ಪ, ಶೇಖರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours