ಉದ್ಯೋಗ ಭದ್ರತೆ ಸಂಪೂರ್ಣ ವಿಫಲ: ಎಚ್.ಆಂಜನೇಯ ಆರೋಪ

 

ಹೊಳಲ್ಕೆರೆ: ಮೇ.2*

ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಭ್ರಷ್ಟಾಚಾರ, ನಿರುದ್ಯೋಗ, ಮತ್ತು ಬೆಲೆ ಏರಿಕೆ ಡಬಲ್ ಮಾಡಿದ್ದೆ ದೊಡ್ಡ ಸಾಧನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ದೂರಿದರು.

ಭರಮಸಾಗರ ಹೋಬಳಿ ಬ್ಯಾಲಹಾಳ್ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮತಪ್ರಚಾರದಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ನೀಡಿದ ಉದ್ಯೋಗ ಭದ್ರತೆಯ ಭರವಸೆ ಸಂಪೂರ್ಣವಾಗಿ ವಿಫಲವಾಗಿದ್ದು, ನಿರುದ್ಯೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗತೊಡಗಿದೆ. ಹೀಗಾಗಿ ಯುವ ಸಮೂಹ ಎಚ್ಚೆತ್ತುಕೊಂಡು ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಲು ಪಣ ತೊಡಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷ ಸದಾ ಬಡವರು ಮತ್ತು ನಿರುದ್ಯೋಗಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರ ಇವರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ, ಬರೀ ಬಂಡವಾಳಶಾಯಿಗಳಿಗೆ ಮಣೆಹಾಕಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೆ ಡಬಲ್ ಇಂಜಿನ್ ಸರ್ಕಾರದ ಸಾಧನೆಯಾಗಿದೆ. ರಾಜ್ಯದಲ್ಲಿ ಮತ್ತೆ ಉದ್ಯೋಗ ಸೃಷ್ಟಿ, ಬಡತನ ನಿವಾರಣೆ ಆಗಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದರು.

ಸಿದ್ಧರಾಮಯ್ಯ ಅಧಿಕಾರದ ಅವಧಿಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿ ಜನಪರ ಆಡಳಿತ ನೀಡಲಾಗಿತ್ತು. ಅದರಂತೆಯೇ ಮುಂದಿನ ದಿನಗಳಲ್ಲಿ ರಾಜ್ಯವನ್ನು ಸುಭಿಕ್ಷವಾಗಿಡಲು ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿ ಉಚಿತ ಪಡಿತರ, 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ರು.3000 ಭತ್ಯೆ, ಮನೆ ಒಡತಿಗೆ ರು.2000, ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣಿಸುವುದು ಸೇರಿದಂತೆ ಹಲವು ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

ನನ್ನ ಅಧಿಕಾರದ ಅವಧಿಯಲ್ಲಿ ಪ್ರತಿ ಮಕ್ಕಳು ಸುಶಿಕ್ಷಿತರಾಗಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿ ವಸತಿ ಕಟ್ಟಡಗಳು, ಹೈಟೆಕ್ ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಯಿತು. ಆದರೆ, ಈಗಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ. ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ಆಧಾರದ ಮೇಲೆ ಮತಯಾಚಿಸದೇ ಬರೀ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತಕೇಳುತ್ತಿದೆ. ಇದರಿಂದ ಬಿಜೆಪಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದರು.
ಹೊಳಲ್ಕೆರೆ ಕ್ಷೇತ್ರದ ಜನತೆ ಶಾಸಕ ಎಂ.ಚಂದ್ರಪ್ಪನ ಸುಳ್ಳು ಭರವಸೆ, ದುರ್ವವರ್ತನೆ, ಭ್ರಷ್ಟಾಚಾರದ ವಿರುದ್ದ ಜನರು ತಿರುಗಿ ಬಿದ್ದಿದ್ದು ಈ ಬಾರಿ ಎಚ್.ಆಂಜನೇಯ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಕಾಶ್,  ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷೆ ಲಕ್ಷಿದೇವಿ ಬೈಯಪ್ಪ, ಉಪಾಧ್ಯಕ್ಷೆ ದ್ಯಾಮಮ್ಮ ದೇವೆಂದ್ರಪ್ಪ, ಸದಸ್ಯರಾದ ಸುಶೀಲಮ್ಮ, ಕೃಷ್ಣಮೂರ್ತಿ,ಮೋಹನ್, ಜಯಣ್ಣ, ಮಂಜಪ್ಪ, ರೈತ ಮುಖಂಡ ಮಂಜಣ್ಣ, ಮುಖಂಡರಾದ ಓಬಜ್ಜ, ಬ್ಯಾಲಹಾಳ್ ಜಯಪ್ಪ, ತಿಪ್ಪಜ್ಜರ ರುದ್ರಪ್ಪ, ಸಿದ್ದರ ಜಯಣ್ಣ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours