ಮೇಣದ ಬತ್ತಿ ಹಿಡಿದು ಮತದಾನ ಜಾಗೃತಿ ಅಭಿಯಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಏಪ್ರಿಲ್06:
ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮೇ.10 ರಂದು ಮತದಾನ ಜರುಗಲಿದೆ. ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಸಧೃಡಗೊಳಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಕರೆ ನೀಡಿದರು.
ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಪ್ರಯುಕ್ತ ಜಿಲ್ಲಾ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹೆಚ್ಚಳಕ್ಕೆ, ಜಾಗೃತಿ ಮೂಡಿಸಲು ಗುರುವಾರ ನಗರದ ಮದಕರಿ ನಾಯಕ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸುವುದರ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಜಾಥಾದಲ್ಲಿ ಪಾಲ್ಗೊಂಡು ನಂತರ ಗಾಂಧಿ ವೃತ್ತದಲ್ಲಿ ಅವರು ಮಾತನಾಡಿದರು.
ಇದೇ ಏಪ್ರಿಲ್ 11 ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತ ಚಲಾಯಿಸಬೇಕು. ಮತದಾನ ಜಾಗೃತಿಗೆ ಇಂದು ಚಾಲನೆ ನೀಡಿದ್ದು, ಜಿಲ್ಲೆಯಾದ್ಯಂತ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಗುವುದು ಎಂದರು.
ನಗರದ ಮದಕರಿ ನಾಯಕ ವೃತ್ತದಿಂದ ಆರಂಭವಾದ ಮತದಾರರ ಜಾಗೃತಿ ಜಾಥಾವು, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಎಸ್.ಬಿ.ಎಂ ವೃತ್ತದ ಮೂಲಕ ಗಾಂಧಿ ವೃತ್ತ ತಲುಪಿತು. ಜಾಥಾದಲ್ಲಿ ವಿದ್ಯಾರ್ಥಿಗಳು ನಮ್ಮ ಮತ ನಮ್ಮ ಹಕ್ಕು, ನಿಮ್ಮ ಮತ ನಿಮ್ಮ ಧ್ವನಿ, ನಮ್ಮ ಮತ ದೇಶಕ್ಕೆ ಹಿತ, ನಿಜವಾದ ಪ್ರಜೆಯಾಗಿ ಮತ ಚಲಾಯಿಸಿ, ಮತದಾನ ಮಾಡುವುದು ನಿಮ್ಮ ಜವಾಬ್ದಾರಿ ಮತ್ತು ಹಕ್ಕು, ನಿಮ್ಮ ಮತವು ಮುಂದಿನ ದೊಡ್ಡ ಬದಲಾವಣೆ ಆಗಬಹುದು. ನೇತ್ರದಾನ ಮಹಾದಾನ, ಮತದಾನ ಶ್ರೇಷ್ಠದಾನ, ಒಂದು ಅನ್ನದ ಕಣ, ಇನ್ನೊಂದು ಮತದಾನದ ಕಣ್ಣು, ಮತದಾರರ ಬಂಧುಗಳೇ ಮತದಾನ ನಿಮ್ಮ ಹಕ್ಕು, ನೂರು ಮಾತುಗಳಿಗಿಂತ ಒಂದು ಓಟು ಮೇಲು ಎಂಬ ಘೋಷಣೆ ಕೂಗುತ್ತಾ, ಮೇ 10 ರಂದು ಬುಧವಾರ ತಪ್ಪದೇ ಎಲ್ಲರೂ ಮತದಾನ ಮಾಡಬೇಕು ಎಂಬ ಸಂದೇಶ ಸಾರಿದರು.
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಮತದಾನದ ಜಾಗೃತಿ ಮೂಡಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಡಿಹೆಚ್‍ಓ ಡಾ.ರಂಗನಾಥ, ಡಿಡಿಪಿಐ ರವಿಶಂಕರ್ ರೆಡ್ಡಿ, ಡಿಡಿಪಿಯು ಎನ್.ರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ.ವೈಶಾಲಿ, ಸಿಡಿಪಿಓ ಸುಧಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ  ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ನರ್ಸಿಂಗ್, ಪ್ಯಾರಮೆಡಿಕಲ್ ಸೇರಿದಂತೆ ವಿವಿಧ ಹಾಸ್ಟೆಲ್‍ಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
[t4b-ticker]

You May Also Like

More From Author

+ There are no comments

Add yours