ಆರ್ಥಿಕವಾಗಿ ಮಹಿಳೆ ಸಬಲವಾದರೆ ಕೌಟುಂಬಿಕ ಹಿಂಸೆ ಪ್ರಮಾಣ ಕಡಿಮೆಯಾಗಲಿದೆ :ಜಿಲ್ಲಾ ನ್ಯಾಯಾಧೀಶೆ ಕೆ.ಬಿ.ಗೀತಾ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜ.18:
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಬಲ ಇದ್ದರೂ, ಮಹಿಳೆಯ ಮೇಲಿನ ಹಿಂಸೆ ಪ್ರಕರಣಗಳು ಕಡಿಮೆಯಾಗಿಲ್ಲ. ಹಿಂಸೆ ಅನುಭವಿಸಿದರೂ ಮಹಿಳೆಯರು ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಿಲ್ಲ. ಆರ್ಥಿಕವಾಗಿ ಮಹಿಳೆಯರು ಸಬಲವಾದಂತೆ ಅವರ ಮೇಲಿನ ಹಿಂಸೆಯ ಪ್ರಮಾಣವೂ ಸಹ ಕಡಿಮೆಯಾಗುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ” ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ಬಗ್ಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆ ಐಪಿಸಿ ಕಾಯ್ದೆಯಡಿ ದೂರು ದಾಖಲಿಸಿದರೆ ಅವರನ್ನು ಕುಟುಂಬದಿಂದ ಹೊರ ಇರುವಂತೆ ತಿಳಿಸಲಾಗುತ್ತಿತ್ತು. ಆದರೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣಾ ಕಾಯ್ದೆಯಲ್ಲಿ ದೂರುದಾರ ಮಹಿಳೆ ಅದೇ ಕುಟುಂಬದೊಂದಿಗೆ ವಾಸವಿದ್ದು ರಕ್ಷಣೆ ಕೋರಬಹುದು. ಮನೆಯ ಇತರೆ ಸದಸ್ಯರು ಮಹಿಳೆಗೆ ಹಿಂಸೆ ನೀಡದಂತೆ ಕಾಯ್ದೆಯ ಅನುಸಾರ ನಿಯಂತ್ರಿಸಲು ಅವಕಾಶವಿದೆ ಎಂದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಂರಕ್ಷಣಾಧಿಕಾರಿಗಳು ಕೌಟುಂಬಿಕ ಹಿಂಸೆಯ ಪ್ರಕರಣಗಳನ್ನು ಹತ್ತಿರದಿಂದ ನೋಡಿರುತ್ತಿರಿ. ಇಂತಹ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾಗಿ ಪ್ರಕರಣಗಳನ್ನು ನಿರ್ವಹಿಸಬೇಕು. ಅಂತಃಕರಣದಿಂದ ಕಾರ್ಯನಿರ್ವಹಿಸಿ ನೊಂದವರಿಗೆ ಸಹಾಯ ಮಾಡಬೇಕು.  ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಬೇಕು. ಇದರ ಆಧಾರದಲ್ಲಿ ನ್ಯಾಯಾಲಯಗಳು ನೊಂದವರಿಗೆ ರಕ್ಷಣೆ ನೀಡಿ ಪರಿಹಾರ ಒದಗಿಸುತ್ತವೆ. ಬೇರೆಲ್ಲಾ ಕಾನೂನುಗಳಲ್ಲಿ ಇರುವ ಅಧಿಕಾರವನ್ನು ಮಹಿಳೆಯರ ಸಂರಕ್ಷಣಾ ಕಾಯ್ದೆಯಲ್ಲಿ ಒಗ್ಗೂಡಿಸಿ ನ್ಯಾಯಾಧೀಶರಿಗೆ ನೀಡಲಾಗಿದೆ. ಇದರಿಂದಾಗಿ ನ್ಯಾಯಾಧೀಶರು ಯುಕ್ತವಾಗಿ ನೊಂದವರಿಗೆ ನ್ಯಾಯ ನೀಡಬಹುದು ಎಂದರು.
ಮಹಿಳೆಯರ ಮೇಲಿನ ದೈಹಿಕ ಹಲ್ಲೆ, ನಿಂದನೆ, ಮಾನಸಿಕ, ಭಾವನಾತ್ಮಕ ಹಾಗೂ ಲೈಂಗಿಕ ಹಿಂಸೆಗಳು ಕೌಟುಂಬಿಕ ಹಿಂಸೆಗಳ ಪರಿಧಿಗೆ ಬರುತ್ತವೆ. ಇದರೊಂದಿಗೆ ವರದಕ್ಷಿಣೆ ಕಿರುಕುಳವು ಭಾರತದಲ್ಲಿ ಕೌಟುಂಬಿಕೆ ಹಿಂಸೆಗೆ ಪ್ರಮುಖ ಕಾರಣ. ವರದಕ್ಷಿಣೆ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿದೆ. ಇದನ್ನು ಬುಡ ಸಮೇತ ಕಿತ್ತು ಹಾಕಬೇಕು. ಮಹಿಳೆ ಹಾಗೂ ಚಿಕ್ಕ ಮಕ್ಕಳಿಗೆ ಯಾವುದೇ ರೀತಿಯ ಕಿರುಕುಳ ನೀಡಿದರೆ ಅದು ಕೌಟುಂಬಿಕ ಹಿಂಸೆ ಅನಿಸಿಕೊಳ್ಳುತ್ತದೆ.  ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ರಲ್ಲಿ ರೂಪಗೊಂಡು, 2007 ರಿಂದ ಅನುಷ್ಠಾನಕ್ಕೆ ಬಂದಿದೆ. ಕಾಯ್ದೆ ಜಾರಿಯಾಗಿ 18 ವರ್ಷ ತುಂಬಿದೆ. ಆದರೂ ಈಗಲೂ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲು ಕಾರ್ಯಗಾರವನ್ನು ಆಯೋಜಿಸಲಾಗುತ್ತಿದೆ. ಇಂದಿಗೂ ಜನ ಸಾಮಾನ್ಯರಲ್ಲಿ ಈ ಕಾಯ್ದೆಯ ಬಗ್ಗೆ ಜಾಗೃತಿ ಇಲ್ಲದೇ ಇರುವುದು ವಿಷಾದನೀಯ ಎಂದು ತಿಳಿಸಿದ ಅವರು, ಈ ವೇಳೆಗಾಗಲೇ ಜನರಲ್ಲಿ ಕಾಯ್ದೆ ಬಗ್ಗೆ ಸಾಕಷ್ಟು ಜ್ಞಾನ ಇರಬೇಕಾಗಿತ್ತು. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರೆ, ಈ ರೀತಿ ಕಾರ್ಯಾಗಾರ ಆಯೋಜಿಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷೆ ಉಜ್ವಲ ವೀರಣ್ಣ ಸಿದ್ದಣ್ಣನವರ್ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಅನುಷ್ಠಾನದಲ್ಲಿ ಸಂರಕ್ಷಣಾಧಿಕಾರಿಗಳು ನೊಂದ ಮಹಿಳೆಯರನ್ನು ಅನುಕಂಪದಿಂದ ನೋಡಬೇಕು. ಪ್ರತಿಯೊಂದು ಪ್ರಕರಣದಲ್ಲೂ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕು. ಕೌಟುಂಬಿಕ ಹಿಂಸೆ ಹೆಚ್ಚಾಗಲು ಸಮಾಜದ ಮನಸ್ಥಿತಿಯೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಕೌಟುಂಬಿಕ ಹಿಂಸೆಯ ಕುರಿತು ಸಂರಕ್ಷಣಾಧಿಕಾರಿಗಳು ವರದಿ ನೀಡುವಾಗ ಬಹಳ ಎಚ್ಚರಿಕೆಯಿಂದ ವರದಿ ನೀಡಬೇಕು. ಕೌಟುಂಬಿಕ ಹಿಂಸೆ ಆಗಿದೆಯೋ ಇಲ್ಲವೋ ಎಂಬುದನ್ನು ನಿಖರವಾಗಿ ದಾಖಲಿಸಬೇಕು. ಇದರಿಂದ ಪ್ರಕರಣದ ವಿಶ್ಲೇಷಣೆ ಮಾಡಲು ನ್ಯಾಯಾಲಯಕ್ಕೆ ಸುಲಭವಾಗಲಿದೆ. ಇದರ ಜೊತೆಗೆ ಪ್ರಕರಣದ ಕುರಿತು ನಿರ್ಧಾರ ಕೈಗೊಳ್ಳಲು ಹಾಗೂ ನೋಂದ ಮಹಿಳೆಯರಿಗೆ ಪರಿಹಾರ ಕೊಡಿಸಲು ಸಹಾಯಕವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಮಾತನಾಡಿ, ಯಾವ ಮನೆಯಲ್ಲಿ ಹೆಣ್ಣಿಗೆ ಗೌರವ ಇರುತ್ತದೆಯೋ ಆ ಮನೆ ನಂದಗೋಕುಲವಾಗಿರುತ್ತದೆ. ಸಮಸ್ಯೆಗಳು ಕೂಡ ಕಡಿಮೆ ಇರುತ್ತವೆ. ಯಾವ ಮನೆಯಲ್ಲಿ ಹೆಣ್ಣಿಗೆ ಗೌರವ ಇರುವುದಿಲ್ಲಯೋ ಆ ಮನೆ ನರಕವಾಗಿರುತ್ತದೆ. ಸಮಸ್ಯೆಗಳೂ ಹೆಚ್ಚಾಗಿರುತ್ತವೆ. ಸುಶಿಕ್ಷಿತ ಸಮಾಜದಲ್ಲಿ ಕೌಟುಂಬಿಕ ಹಿಂಸೆಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ ಎಂದರು.
ಕಳೆದ ಮೂರು ವರ್ಷದಲ್ಲಿ ಸ್ವ ಸಹಾಯ ಸಂಘದ ಸದಸ್ಯರಿಗೆ ಜಿಲ್ಲೆಯಲ್ಲಿ ರೂ.60 ಕೋಟಿ  ಅನುದಾನವನ್ನು ಸಮುದಾಯ ಬಂಡವಾಳ ನಿಧಿಯಾಗಿ ನೀಡಲಾಗಿದೆ. ಈ ಸಮುದಾಯ ಬಂಡವಾಳ ನಿಧಿಯು 132 ಕೋಟಿ ವಹಿವಾಟು ಆಗಿದೆ. ನಮ್ಮ ಸಂಘದ ಸದಸ್ಯರು ಗಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಅನೇಕ ಉತ್ಪನ್ನಗಳನ್ನು ತಯಾರು ಮಾಡಿ, ಹೆಚ್ಚಿನ ಮನ್ನಣೆ ಗಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಸುಧಾದೇವಿ ಅವರು, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಸ್ವರೂಪ, ಕಾಯ್ದೆಯ ಅನುಷ್ಠಾನಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳು, ಲಿಂಗತಾರತಮ್ಯ, ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರಿಗೆ ಸಮಾಲೋಚನೆ ಮತ್ತು ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಬಾಲನ್ಯಾಯ ಮಂಡಳಿ ಸದಸ್ಯೆ ಸುಮನ ಎಸ್.ಅಂಗಡಿ ಅವರು ಭಾರತ ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಪರಿಚಯ, ಮಹಿಳೆಯರ ವಿರುದ್ಧ, ದೌರ್ಜನ್ಯ ತಡೆಗಟ್ಟಲು ಜಾರಿಯಲ್ಲಿರುವ ಕಾಯ್ದೆ ಮತ್ತು ನಿಯಮದ ಬಗ್ಗೆ ಅರಿವು ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ಎಸ್.ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಕೀಲರು ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours