ಸಿಹಿ ಸುದ್ದಿ.ಮಹಿಳೆಯರ ಸ್ವಾವಲಂಬಿ ಬದುಕಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ:2020-21ನೇ ಸಾಲಿಗೆ ಉದ್ಯೋಗಿನಿ ಯೋಜನೆಯ ಅನುಷ್ಠಾನಕ್ಕಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಸಾಲಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
 ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಉದ್ಯೋಗಿನಿ ಯೋಜನೆಯಡಿ ಚಿತ್ರದುರ್ಗ-14, ಚಳ್ಳಕೆರೆ-09, ಹೊಳಲ್ಕೆರೆ-08, ಹೊಸದುರ್ಗ-09, ಹಿರಿಯೂರು-08 ಹಾಗೂ ಮೊಳಕಾಲ್ಮುರು-09 ಜಿಲ್ಲೆಗೆ ಒಟ್ಟು ಭೌತಿಕ 57 ಗುರಿಯನ್ನು ನಿಗದಿಪಡಿಸಲಾಗಿದೆ.
 ವ್ಯಾಪಾರ, ಸೇವಾ ಹಾಗೂ ಗುಡಿ ಕೈಗಾರಿಕೆ ಚಟುವಟಿಕೆಗಳನ್ನು ಕೈಗೊಂಡು ಮಹಿಳೆಯರು ಸ್ವ-ಉದ್ಯೋಗಿಗಳಾಗಲು ಬ್ಯಾಂಕ್‍ಗಳಿಂದ ಕನಿಷ್ಠ 1 ರಿಂದ 3 ಲಕ್ಷ ಸಾಲ ಹಾಗೂ ನಿಗಮದಿಂದ ಸಹಾಯಧನ ಪಡೆಯಬಹುದಾಗಿದೆ.
ನಿಬಂಧನೆಗಳು: 18ರಿಂದ 55 ವರ್ಷದ ಒಳಗೆ ಇರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರ ಕುಟುಂಬದ ಆದಾಯ ರೂ.2,00,000/-ಗಳಿಗೆ ಮೀರಿರಬಾರದು. ಇತರೆ ವರ್ಗದ ಅರ್ಜಿದಾರರ ಕುಟುಂಬದ ಆದಾಯ ರೂ.1,50,000/-ಗಳಿಗೆ ಮೀರಿರಬಾರದು. ಈ ಯೋಜನೆಯಡಿ ಸೌಲಭ್ಯ ಪಡೆಯುಲಿಚ್ಚಿಸುವವರು ಈ ಹಿಂದೆ ಬೇರೆ ಇಲಾಖೆಗಳಲ್ಲಿ ಯಾವುದೇ ಯೋಜನೆಗಳಡಿಯಲ್ಲೂ ಸಾಲಸೌಲಭ್ಯ ಪಡೆದಿರಬಾರದು. ಇಡಿಸಿ ತರಬೇತಿಯು ಕಡ್ಡಾಯವಾಗಿದ್ದು, ಸಾಲ ಮಂಜೂರಾದ ಫಲಾನುಭವಿಗಳಿಗೆ ಇಡಿಪಿ ತರಬೇತಿ ಪಡೆದ ನಂತರವೇ ಸಹಾಯಧನ ಬಿಡುಗಡೆ ಮಾಡಲಾಗುವುದು.
ಸಾಲಭ್ಯ ಪಡೆಯಲು ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲಾತಿಗಳ ವಿವರ ಇಂತಿವೆ. ನಿಗದಿತ ಅರ್ಜಿ ನಮೂನೆ, ಜಾತಿ ಪ್ರಮಾಣ ಪತ್ರ ಮತ್ತು ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ, ಫಲಾನುಭವಿಯ ಆಧಾರ ಕಾರ್ಡ್, ಕೈಗೊಳ್ಳುವ ಚಟುವಟಿಕೆಯ ಯೋಜನೆ ವರದಿ, ತರಬೇತಿ ಅಥವಾ ಅನುಭವದ ಪತ್ರ, ಮತದಾನದ ಗುರುತಿನ ಚೀಟಿ ಸಲ್ಲಿಸಬೇಕು. ನಿಗದಿತ ದಾಖಲಾತಿಗಳೊಂದಿಗೆ ಪಡೆದ ಅರ್ಜಿಯನ್ನು ಪ್ರಾಥಮಿಕ ಪರಿಶೀಲನೆ ಮಾಡಿ ಅರ್ಹ ಅರ್ಜಿಗಳನ್ನು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ ಆಯ್ಕೆಯಾದ ಅರ್ಜಿಗಳನ್ನು ಅರ್ಜಿದಾರರ ಸೇವಾ ವಲಯದಲ್ಲಿ ಬರುವ ಬ್ಯಾಂಕಿನ ಶಾಖೆಗಳಿಗೆ ಸಾಲ ಮಂಜೂರಾತಿಗಾಗಿ ಶಿಫಾರಸ್ಸು ಮಾಡಲಾಗುವುದು. ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿದಲ್ಲಿ ಇಡಿಪಿ ತರಬೇತಿ ಏರ್ಪಡಿಸಿ ಸಹಾಯಧನ ಬಿಡುಗಡೆ ಮಾಡಲಾಗುವುದು.
ಈ ನಿಬಂಧನೆಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸುವವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳು ಲಭ್ಯವಿದ್ದು, ಅವರಿಂದ ಮುದ್ರಿತ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅರ್ಹ ದಾಖಲೆಗಳೊಂದಿಗೆ ಸೆಪ್ಟೆಂಬರ್ 25ರ ಸಂಜೆ 5.30ರೊಳಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಆವರಣ, ಚಿತ್ರದುರ್ಗ ಈ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours