ಎಂಎಲ್ಸಿ ಕೆ.ಎಸ್.ನವೀನ್ ಸಾರಥ್ಯಯದಲ್ಲಿ ಉಚಿತವಾಗಿ ಮನೆ ಮನೆಗೆ ರಾಷ್ಟ್ರ ಧ್ವಜ ವಿತರಣೆ

 

ಚಿತ್ರದುರ್ಗ: ದೇಶದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೃತ ಮಹೋತ್ಸವ ಹೆಸರಿನಲ್ಲಿ ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವವನ್ನು ಪ್ರತಿಯೊಬ್ಬರು ಹಬ್ಬದಂತೆ ಆಚರಣೆ ಮಾಡಬೇಕೆಂಬ ಉದ್ದೇಶದೊಂದಿಗೆ ಆ.13ರಿಂದ 15ರವರೆಗೆ ಪ್ರತಿ ಮನೆ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಜಿಲ್ಲಾ ಬಿಜೆಪಿ ವತಿಯಿಂದ ಹಾಗೂ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ನೇತೃತ್ವದಲ್ಲಿ ಚಿತ್ರದುರ್ಗ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ರಾಷ್ಟ್ರ ಧ್ವಜಗಳನ್ನು ಮನೆ ಮನೆಗೆ ಹಸ್ತಾಂತರಿಸಿದರು.
ಶುಕ್ರವಾರ ಬೆಳಿಗ್ಗೆಯಿಂದಲೇ ಕೆ.ಎಸ್.ನವೀನ್ ಅವರ ತಂಡ ಸಾವಿರಾರು ಧ್ವಜಗಳನ್ನು ಮನೆ ಮನೆಗಳಿಗೆ ಹಸ್ತಾಂತರಿಸಿದರು.

ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನವೀನ್, ಜಿಲ್ಲಾ ಬಿಜೆಪಿ ವತಿಯಿಂದ ಮತ್ತು ವೈಯಕ್ತಿಕವಾಗಿಯೂ ತಾಲೂಕಿನಾದ್ಯಂತ 50 ಸಾವಿರ ಧ್ವಜಗಳನ್ನು ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಗಳ ಮೇಲೆ 3 ದಿನ ಧ್ವಜಾರೋಹಣ ಮಾಡುವ ಮೂಲಕ ಅಮೃತ ಸ್ವಾತಂತ್ರ್ಯ ಮಹೋತ್ಸವ ಸಂಭ್ರಮಿಸಬೇಕು, ಈ ಮೂಲಕ ದೇಶ ಪ್ರೇಮ ಮೆರೆಯಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

75ನೇ ಅಮೃತ ಮಹೋತ್ಸವ ನಿಮಿತ್ತ ಆ.12 ರಂದು ಸಾವಿರಾರು ಬೈಕ್ ಗಳ ಮೂಲಕ ಇಡೀ ನಗರದಲ್ಲಿ ರ್ಯಾಲಿ ಮಾಡಿ ಜನ ಜಾಗೃತಿ ಮೂಡಿಸಲಾಗಿತ್ತು. ಅಂತಹ ಅಭಿಯಾನದಲ್ಲಿ ಕೇವಲ ಬಿಜೆಪಿ ಪಕ್ಷ ಅಷ್ಟೇ ಅಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಸೇರಿಕೊಂಡು ಹಬ್ಬದ ರೀತಿ ಆಚರಣೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷದ ಭಾವುಟ ಹಿಡಿಯದೇ ಪಕ್ಷಾತೀತವಾಗಿ ಬೈಕ್ ರ್ಯಾಲಿ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ನವೀನ್ ತಿಳಿಸಿದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ ಸುರೇಶ್ ಸಿದ್ದಾಪುರ ಮಾತನಾಡಿ ಅಭಿಮಾನವಿದ್ದರೆ ದೇಶ ಅಭಿವೃದ್ಧಿ ಆಗಲಿದೆ. ನಗರದಲ್ಲಿ 30-35 ಸಾವಿರ ಮನೆಗಳಿವೆ. 50 ಸಾವಿರಕ್ಕಿಂತ ಹೆಚ್ಚಿನ ಧ್ವಜಗಳನ್ನು ವಿತರಿಸುತ್ತಿದ್ದೇವೆ. ಆ.13ರಿಂದ 15ರ ವರೆಗೆ ಮನೆ ಮನೆಯಲ್ಲೂ ಧ್ವಜಾರೋಹಣ ನೆರವೇರಿಸಬೇಕು. ದೇಶದ ಬಗ್ಗೆ ಪ್ರೀತಿ ಅಭಿಮಾನ, ಗೌರವ, ಪ್ರತಿಯೊಬ್ಬರಲ್ಲಿಯೂ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ಆ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಪ್ರತಿಯೊಬ್ಬರೂ ತಮ್ಮ ಮನೆ, ಮನೆಗಳ ಮೇಲೆ 13ರಂದು ಧ್ವಜಾರೋಹಣ ನೆರವೇರಿಸಿ 15ರಂದು ಸಾಯಾಂಕಾಲ ಕೆಳಗೆ ಇಳಿಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರಧ್ವಜವನ್ನು ಮನೆ ಮನೆಗೆ ಹಸ್ತಾಂತರಿಸುವ ಕಾರ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜಿಲ್ಲಾ ಉಪಾಧ್ಯಕ್ಷ ಸಂಪತ್ ಕುಮಾರ್, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಸಂತೋಷ್, ನಗರ ಕಾರ್ಯದರ್ಶಿ ಯಶವಂತ್ ಕುಮಾರ್, ಕೆಎಚ್ ಬಿ ಕಾಲೋನಿ ನಿವಾಸಿ ಎನ್.ಕೆ.ಅನಿತಾ ಹೆಂಜಾರಪ್ಪ ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours