Thursday, May 9 2024

ಆಪರೇಷನ್ ಕಮಲ ತಡೆಗಟ್ಟಲು ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಬೇಕು: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ.

 

ಮೈಸೂರು, ಜೂ. 24 -ಭ್ರಷ್ಟಾಚಾರದಿಂದ ಗಳಿಸಿರುವ ಹಣ ಬಳಕೆ ಮಾಡಿಕೊಂಡು ಬಿಜೆಪಿ ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಲು ಮುಂದಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಬಿಜೆಪಿಯ ಚಾಳಿ ಇಡೀ ದೇಶಕ್ಕೆ ಹಬ್ಬಿದೆ ಎಂದು ಅವರು ಕಿಡಿಕಾರಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಆಪರೇಷನ್ ಕಮಲ ತಡೆಗಟ್ಟಲು ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಒಂದು ಪಕ್ಷದಿಂದ ಆಯ್ಕೆಯಾದವರು ಬೇರೆ ಪಕ್ಷಕ್ಕೆ ಹೋಗದಂತೆ ತಡೆಯಬೇಕು. ಒಂದು ವೇಳೆ ಬೇರೆ ಪಕ್ಷಕ್ಕೆ ಹೋದರೆ ೧೦ ವರ್ಷ ಆತ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ಮಾಡಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ಉಳಿವಿಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ಆಪರೇಷನ್ ಕಮಲದ ಪಿತಾಮಹಾ ಬಿಜೆಪಿಯವರು. ೨೦೦೮ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೊದಲು ಆಪರೇಷನ್ ಕಮಲ ಮಾಡಿದರು. ಎಲ್ಲೂ ಅವರಿಗೆ ಬಹುಮತ ಬಂದಿಲ್ಲ. ಹಣಕೊಟ್ಟು ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದರು ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಡಬಲ್ ಇಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿ ಸಾಧ್ಯ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಅಭಿವೃದ್ಧಿಯ ಪಟ್ಟಿ ಕೊಡಿ. ಮೋದಿ ಅವರು ಸುಳ್ಳು ಹೇಳಿ ಹೋಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯಸರ್ಕಾರ ಬೇಡಿಕೆಗಳ ಕುರಿತ ಮನವಿಯನ್ನು ಪ್ರಧಾನಿಯವರಿಗೆ ಕೊಟ್ಟಿಲ್ಲ. ಏಕೆಂದರೆ ಮೋದಿ ಏನೂ ಮಾಡುವುದಿಲ್ಲ ಎಂಬುದು ರಾಜ್ಯ ನಾಯಕರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಮನವಿ ನೀಡಿಲ್ಲ. ಮೋದಿ ಭೇಟಿಯಿಂದಾಗಿ ೨೫ ಕೋಟಿ ರೂ. ಖರ್ಚಾಗಿದೆ. ಆದರೆ, ರಸ್ತೆ ನಿರ್ಮಿಸಿರುವುದನ್ನು ಬಿಟ್ಟರೆ ಜನರಿಗೆ ಲಾಭವಿಲ್ಲ ಎಂದು ಟೀಕಿಸಿದರು.
ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಮೈತ್ರಿಕೂಟ ಬುಡಕಟ್ಟು ಮಹಿಳೆ ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯವಲ್ಲ, ಇದರಲ್ಲಿ ವಿಶೇಷವೂ ಇಲ್ಲ. ಹಾಗೊಂದು ವೇಳೆ ಸಾಮಾಜಿಕ ನ್ಯಾಯ ನೀಡಬೇಕು ಎಂಬುದಾದರೆ ಆರ್‌ಎಸ್‌ಎಸ್‌ನ ಮುಖ್ಯ ಸಂಚಾಲಕರಾಗಿ ಇಂತಹ ಮಹಿಳೆಯನ್ನು ನೇಮಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

[t4b-ticker]

You May Also Like

More From Author

+ There are no comments

Add yours

ಜೂನ್ 26ರಂದು ವಿದ್ಯುತ್ ವ್ಯತ್ಯಯ

ಆರ್ಥಿಕವಾಗಿ ಸಾಮಾಜಿಕವಾಗಿ ನೊಂದತ ಮಹಿಳೆಯರ ಪರವಾಗಿ ದಿನದ 24 ಗಂಟೆಗಳ ಕಾಲ ಕಾರ್ಯ: ಆರ್. ಪ್ರಮೀಳಾ ನಾಯ್ಡು

[t4b-ticker]