ಕೋವಿಡ್ ಜೆಎನ್-1 ಸೋಂಕು ಆತಂಕ ಬೇಡ, ಮುಂಜಾಗ್ರತೆ ಇರಲಿ:ಡಾ.ಎಸ್.ಪಿ.ರವೀಂದ್ರ

 

ಚಿತ್ರದುರ್ಗ.ಜ.03:(chitradurga)
ಕೋವಿಡ್ ಜೆಎನ್-1 ಸೋಂಕು ಆತಂಕ ಬೇಡ, ಮುಂಜಾಗ್ರತೆ ಇರಲಿ. ಅರ್ಹರು ಮುಂಜಾಗ್ರತಾ ಲಸಿಕೆ ಪಡೆಯಿರಿ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಇಲ್ಲಿನ ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ-23ರ ಲಸಿಕಾ ವಿಭಾಗದಲ್ಲಿ ಬುಧವಾರ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಕಾರ್ಬಿವ್ಯಾಕ್ಸ್ ಲಸಿಕಾ ಅಧಿವೇಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ-23ರಲ್ಲಿ   ಕಾರ್ಬಿವ್ಯಾಕ್ಸ್ ಲಸಿಕಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಅರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಆರೋಗ್ಯ ಇಲಾಖೆಯ ಸೇವಾ ನೌಕರರಿಗೆ, ಸಹವರ್ತಿ ಕಾಯಿಲೆಗಳನ್ನು ಹೊಂದಿರುವವರಿಗೆ ಈಗಾಗಲೇ ಬೂಸ್ಟರ್ ಡೋಸ್ ಪಡೆದು 26 ವಾರಗಳನ್ನು ಸಂಪೂರ್ಣಗೊಳಿಸಿದವರಿಗೆ ಮುನ್ನೆಚ್ಚರಿಕಾ ಡೋಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯ ವಾರ್ಡ್ ಸಂಖ್ಯೆ 23ರಲ್ಲಿ ಲಸಿಕಾ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲಾತಿಗಳನ್ನು ತಂದು ಈ ಹಿಂದೆ  ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಯಾವುದೇ ಲಸಿಕೆ ಪಡೆದಿದ್ದರೂ ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯಬಹುದಾಗಿದೆ. ಯಾವುದೇ ತೊಂದರೆ ಆಗೋದಿಲ್ಲ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣಾ ನಡಾವಳಿಕೆಗಳ ಅಭ್ಯಾಸ ಮಾಡಿ ಕೋವಿಡ್ ಜೆ.ಎನ್-1ನೇ ಅಲೆಯನ್ನು ತಡೆಗಟ್ಟೋಣ ಎಂದು ತಿಳಿಸಿದ ಅವರು, ತಪ್ಪದೇ ಮಾಸ್ಕ್ ಧರಿಸುವುದು, ಸ್ಯಾನಿಟೇಜರ್ ಬಳಸಿ ಕೈಗಳ ಶುಚಿತ್ವ ಕಾಪಾಡಿಕೊಳ್ಳುವುದು, ಜಾತ್ರೆ, ಹಬ್ಬ, ಜನಸಂದಣಿ ಸ್ಥಳಗಳಿಂದ ದೂರವಿರುವುದು, ಶೀತ, ಕೆಮ್ಮು, ಜ್ವರ, ನೆಗಡಿ ಬಂದಾಗ ತಪ್ಪದೇ ಕೋವಿಡ್ ಪರೀಕ್ಷೆ ತಪಾಸಣೆ ಮಾಡಿಸಿಕೊಳ್ಳುವುದು. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ, ಸೀನುವಾಗ ಮುಂಜಾಗ್ರತೆ ವಹಿಸುವುದು ಪ್ರಮುಖವಾಗಿದೆ ಎಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಾರ್ವಜನಿಕರು ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಲಸಿಕಾ ವ್ಯವಸ್ಥಾಪಕ ವೀರೇಶ್, ಚಿತ್ರದುರ್ಗ ತಾಲ್ಲೂಕು ವ್ಯವಸ್ಥಾಪಕ ಮೊಹಮ್ಮದ್ ಅಲಿ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಭಾಗ್ಯಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ, ಹಿರಿಯ ನಾಗರಿಕರು ಇದ್ದರು.
=========
[t4b-ticker]

You May Also Like

More From Author

+ There are no comments

Add yours