ಹೊಳಲ್ಕೆರೆ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ

 

ಹೊಳಲ್ಕೆರೆ : ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ ಬೆಳೆ ನಷ್ಟ ಪರಿಹಾರ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಟ್ಟು ರೈತರನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಡಾ.ಎಂ.ಚಂದ್ರಪ್ಪ ಇಪ್ಪತ್ತು ವರ್ಷಗಳಿಂದ ಹಿಂದೆಂದೂ ಕಾಣದಂತ ಬರಗಾಲ ತಾಲ್ಲೂಕಿನಲ್ಲಿ ಎದುರಾಗಿದೆ. ರೈತರು ಹೊಲ ಹದಗೊಳಿಸಿ ಬಿತ್ತಿ ಗೊಬ್ಬರ ಹಾಕಿ, ಕಳೆ ತೆಗೆದು, ಎಡೆಕುಂಟೆ ಹೊಡೆಸಿ ಮಳೆರಾಯನ ಕೃಪೆಗಾಗಿ ಕಾಯುತ್ತಿದ್ದಾರೆ. ಮಳೆ ಬಾರದೆ ಎಲ್ಲಾ ಫಸಲುಗಳು ಒಣಗುತ್ತಿವೆ. ರೈತರಿಗೆ ಇಷ್ಟೊಂದು ಅನ್ಯಾಯವಾಗಿರುವುದನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಮಳೆ ಬರದೆ ಬೆಳೆಗಳು ಒಣಗುತ್ತಿದ್ದರೆ ಇನ್ನೊಂದೆಡೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ತೋಟಗಳು ಬಾಡುತ್ತಿವೆ. ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳನ್ನು ಜನ ಕೆಟ್ಟದಾಗಿ ಬೈದಾಡುತ್ತಿದ್ದಾರೆಂದು ಹೇಳಿದರು.
ದಿನಕ್ಕೆ ಐದು ಗಂಟೆಗಳಾದರೂ ರೈತರಿಗೆ ವಿದ್ಯುತ್ ಕೊಡಿ. ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ಬರಗಾಲವಿತ್ತು. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಈಗಲೂ ಬರಗಾಲ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಖಾಯಂ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಪ್ರತಿಯೊಬ್ಬ ರೈತನು ಸಂಕಷ್ಠದಲ್ಲಿದ್ದಾನೆ. ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಶಾಸಕ ಡಾ.ಎಂ.ಚಂದ್ರಪ್ಪ ಕಳೆದ ಐದು ವರ್ಷದ ಅವಧಿಯಲ್ಲಿ ನಮ್ಮ ಸರ್ಕಾರವಿದ್ದಾಗ ಬೇರೆ ಬೇರೆ ಕಡೆಯಿಂದ ವಿದ್ಯುತ್ ತಂದು ರೈತರಿಗೆ ದಿನಕ್ಕೆ ಏಳು ಗಂಟೆಗಳ ಕಾಲ ಪೂರೈಸಿದ್ದೇನೆ. ಎರಡು ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಅಸಹ್ಯವಾಗಿ ಮಾತನಾಡುತ್ತಿದ್ದಾರೆ. ವ್ಯತಿರಿಕ್ತ ಪರಿಣಾಮಕ್ಕೆ ಅವಕಾಶ ನೀಡದೆ ರೈತರ ನೆರವಿಗೆ ಧಾವಿಸಲಿ ಎಂದು ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours