ಚಿತ್ರದುರ್ಗ:ಭದ್ರೆಗಾಗಿ ಬಂದ್ ಗೆ ಅಭೂತಪೂರ್ವ ಜನಬೆಂಬಲ 

 

ಚಿತ್ರದುರ್ಗ: ಭದ್ರಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಚಿತ್ರದುರ್ಗ ಬಂದ್ ಗೆ  ಕರೆ ನೀಡಿರುವ ಹಿನ್ನಲೆ ಚಿತ್ರದುರ್ಗ ಬಂದ್ ಗೆ ವ್ಯಾಪಕ ಬೆಂಬಲ ಸಿಕಿದೆ.
ನಗರದ ಗಾಂಧಿ ವೃತ್ತದ ಬಳಿ ಬೆಳ್ಳಂ ಬೆಳಗಿಂದಲೇ ಅನೇಕ ಸಂಘಟನೆಗಳು ಭಾಗಿಯಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

ನಗರದ  ಬಿಡಿ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲೀಕರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಕಾರ್ಯನಿರತ   ಪತ್ರಕರ್ತರ ಸಂಘ ಜಿಲ್ಲಾ ಘಟಕ ಚಿತ್ರದುರ್ಗ,

ಖಾಸಗಿ ಬಸ್ ಮಾಲೀಕರ ಸಂಘ,ಕರ್ನಾಟಕ ಕಾರ್ಯನಿರತ ದಿನಪತ್ರಿಕೆ ಗಳ ಹಂಚಿಕೆದಾರರು ಮತ್ತು ವಿತರಕರ ಸಂಘ,ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ,ಬೀದಿಬದಿ ವ್ಯಾಪಾರಿಗಳ ಸಂಘ, ವಿದ್ಯಾರ್ಥಿಗಳ ಸಂಘಟನೆ, ಮಹಿಳಾ ಸಂಘಟನೆ, ವಕೀಲರು ಸಂಘ, ದಲಿತ ಸಂಘಟನೆಗಳು, ಹೂ ಬೆಳೆಗಾರರು ಸಂಘ, ತರಕಾರಿ ಮತ್ತು ಹಣ್ಣು ಮಾರಾಟಗಾರರ ಸಂಘ, ವಿಜಯ ಸೇನೆ ಸಂಘಟನೆ,ಕರ್ನಾಟಕ ರಕ್ಷಣಾ ವೇದಿಕೆ, ಕಟ್ಟಡ ಹಾಗೂ ಇತರೆ ನಿರ್ಮಾಣ ಸಂಘಟನೆ, ಕಾರ್ಮಿಕರ ಸಂಘಟನೆ,ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಘಟನೆ ಇತರೆ ಸಂಘಟನೆಗಳು ಸೇರಿಕೊಂಡು ಎಂದು ಚಿತ್ರದುರ್ಗ ನಗರವನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಚಿತ್ರದುರ್ಗ ಬಂದ್ ಗೆ ಬೆಂಬಲಿಸಿದ್ದಾರೆ.
ರೈತ ಮುಖಂಡರು  ರಾಜ್ಯ ಮತ್ತು ಕೇಂದ್ರ  ಸರ್ಕಾರದ ವಿರುದ್ಧ  ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿರ್ಲಕ್ಷದಿಂದಾಗಿ ಕುಂಠಿತವಾಗಿದೆ 25 ವರ್ಷಗಳಾಗುತ್ತಾ ಬಂದಿದ್ದರು ಸಹ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ,
ಕಳೆದ ಎಂಟು ವರ್ಷಗಳಿಂದ ಒಂದೂವರೆ ಕಿಲೋಮೀಟರ್ ಭೂ ಸ್ವಧೀನಾ ಮಾಡಿಕೊಳ್ಳಲು ಸಾಧ್ಯವೇ ಆಗದಂತಹ ಪರಿಸ್ಥಿತಿ ಸರ್ಕಾರಕ್ಕೆ ಬಂದೊಡ್ಡಿದೆ.
ಎತ್ತಿನಹೊಳೆ ಯೋಜನೆಗೆ ದುಡ್ಡು ಸುರಿಯುತ್ತಿರುವ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನ ತೋರುತ್ತಿದೆ. ನೀರು ಹರಿಸುವ ಯೋಜನೆಗಳನ್ನು ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತರು ಗುಡುಗಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿಗಳ ಅನುದಾನ ಒದಗಿಸುವುದಾಗಿ ಪ್ರಮಾಣ ಮಾಡಿದ್ದರು. ಇದುವರೆಗೂ ಅದು ಈಡೇರಿಲ್ಲ ದೇಶದ ಪ್ರಜಾಪ್ರಭುತ್ವ ವಾರಸುದಾರಿಕೆ ಹೊಂದಿರುವ ಪ್ರಧಾನಿಯವರೇ ಮಾತು ತಪ್ಪಿದರೆ ಹೇಗೆ ಎಂಬುದು ಪ್ರಶ್ನೆಯಾಗಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೀಸಲಿಡಿರುವ ಅನುದಾನದಲ್ಲಿ ಮೇಲ್ದಂಡೆಗೆ ವಿನಿಯೋಗ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬೆಳಗಿನಿಂದಲೇ ನಡೆದ ಚಿತ್ರದುರ್ಗ ಬಂದ್ ಬೆಂಬಲಕ್ಕೆ ವಿವಿಧ ಸಂಘಟನೆಗಳು ಕೂಡ ಬೆಂಬಲ ನೀಡಿದ್ದರು, ಈ ಒಂದು ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿತ್ರದುರ್ಗದ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದೆ.
ಬಾಕ್ಸ್:

*ಚಿತ್ರದುರ್ಗ ಬಂದ್ ಗೆ ವಿಶೇಷ ಚೇತನ ಸಾಥ್*

ಚಿತ್ರದುರ್ಗದಲ್ಲಿ ವಿಶೇಷ ಚೇತನನೊಬ್ಬ ಭದ್ರಾ ನೀರಿಗಾಗಿ ರಸ್ತೆಗಿಳಿದು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಗಾಂಧಿ ವೃತ್ತದ ಬಳಿಜಿಲ್ಲಾ ನೀರಾವರಿ ಹೋರಾಟ ಸಮಿತಿಯ ವತಿಯಿಂದ ಭದ್ರಾ ಮೇಲ್ದಂಡೆ ಶೀಘ್ರ ಕಾರ್ಯಾನುಷ್ಟಾನಕ್ಕೆ ಆಗ್ರಹಿಸಿ  ಸ್ವಯಂ ಪ್ರೇರಿತ ಚಿತ್ರದುರ್ಗ ಬಂದ್ ಗೆ ಕರೆ ನೀಡಿದ್ದು , ಈ ಒಂದು ಪ್ರತಿಭಟನೆಯಲ್ಲಿ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಎಂ.ಶಿವಣ್ಣ ಎಂಬ ವಿಶೇಷ ಚೇತನ ಪ್ರತಿಭಟನೆಗೆ ಬಂದು ಸಾಥ್ ಕೊಟ್ಟಿದ್ದು ಭದ್ರಾ ನೀರಿಗಾಗಿ ತನ್ನ ಬೆಂಬಲ ಸೂಚಿಸಿದ್ದಾರೆ.
ಬೆಳಗ್ಗೆಯಿಂದಲೇ ಬಿಸಿಲಿನಲ್ಲಿ ಕೂತ ಎಂ. ಶಿವಣ್ಣ ಖುದ್ದು ರೈತ ಕೂಡ ಆಗಿದ್ದು ಬಿಸಿಲನ್ನು ಸಹ ಲೆಕ್ಕಿಸದೆ ಕಾಲಿಲ್ಲದಿದ್ದರು ಸಹಾ ರಸ್ತೆಯಲ್ಲಿ ಕೂತು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ  ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಅಧ್ಯಕ್ಷ  ಲಿಂಗಾರೆಡ್ಡಿ, ನೀರಾವರಿ ಅನುಷ್ಠಾನ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ,  ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ,ಸ್ವರಾಜ್ ಇಂಡಿಯಾ ಪಕ್ಷದ ಜೆ.ಯಾದವ್ ರೆಡ್ಡಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‌ ಗೌಡಗೆರೆ,
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ,ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ವೈ.ಕುಮಾರ್, ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು,ಎಐಟಿಯುಸಿ ರಾಜಪ್ಪ, ಸತ್ಯಕೀರ್ತಿ, ಜನಶಕ್ತಿ ಸಂಘಟನೆಯ ಪುರೋಷೋತ್ತಮ, ಕರವೇ ಸಂಘಟನೆಯ ಜಿಲ್ಲಾಧ್ಯಕ್ಷರುಗಳಾದ ರಮೇಶ್, ಎಸ್.ಕೆ.ಮಹಂತೇಶ್,ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್, ಲಕ್ಷ್ಮಿಕಾಂತ, ಲಿಂಗಾವರಟ್ಟಿ  ಇ.ಎನ್.ಲಕ್ಷ್ಮಿಕಾಂತ, ಗುರುಮೂರ್ತಿ,  ಕೋನಸಾಗರ ಮಂಜುನಾಥ್, ರೈತ ಸಂಘದ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಿಕಾರ್ಜುನ, ಲಕ್ಷ್ಮಿಸಾಗರ ಚೌಡಪ್ಪ,ಅನಂತರಾಜ್, ಮಹೇಂದ್ರಕುಮಾರ್, ಸುಧಿ ಡಿ.ಎಸ್ ಹಳ್ಳಿ, ಸಮೀವುಲ್ಲ, ಎಸ್.ಕೆ.ಕುಮಾರಸ್ವಾಮಿ, ಬ್ಯಾಡರಹಳ್ಳಿ ನಿತ್ಯಶ್ರೀ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ ಷರೀಫ್, ಜಿ.ಆರ್ ಪಾಪಯ್ಯ, ಕೋಗುಂಡೆ ರವಿಕುಮಾರ್, ಹಂಪಯ್ಯನಮಾಳಿಗೆ ರೇವಣ್ಣ, ಕೃಷ್ಣಪ್ಪ, ಜಿಲ್ಲಾ ಕಾರ್ಯನಿರತ ಪತ್ರಿಕೆ ಹಂಚಿಕೆದಾರರ ಮತ್ತು ವಿತರಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕುಬೇಂದ್ರಪ್ಪ, ನಾಗರಾಜ್‌ ಶೆಟ್ರು, ಪ್ರಶಾಂತ್‌ ಇತರರಿದ್ದರು.

ಸಿಎಂ ಬರೆದ ಪತ್ರದಲ್ಲಿ ಏನಿದೆ.

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ  ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದಾಸೀನ ಮನೋಭಾವದಿಂದಾಗಿ ನೆನೆಗುದಿಗೆ ಬಿದ್ದಿದ್ದು  ಅನ್ನದಾತರು ತೀವ್ರ ಆಕ್ರೋಶಗೊಂಡಿದ್ದಾರೆ. ಕಾಮಗಾರಿ ಆರಂಭವಾಗಿ 23 ವರ್ಷ ಕಳೆದಿದ್ದರೂ ಯೋಜನೆ ನಿಧಾನಗತಿಯಲ್ಲಿ ಸಾಗಿರುವುದು ರೈತಾಪಿ ಸಮುದಾಯದಲ್ಲಿ ಕಳವಳ ಮೂಡಿಸಿದೆ.  ಅಂದುಕೊಂಡಂತೆ ಕಾಮಗಾರಿ ಕಾಲಮಿತಿಯೊಳಗೆ ಮುಗಿದಿದ್ದರೆ  ಇಷ್ಟೊತ್ತಿಗೆ ಈ ನೆಲ ಹಸಿರಾಗಿ ಕಂಗೊಳಿಸುತ್ತಿತ್ತು. ಜಿಲ್ಲೆಗೆ ಇಂತಹ ದುರ್ಗತಿ  ಬರುತ್ತಿರಲಿಲ್ಲ. ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆ ಖಂಡನೀಯ. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯ ಅಪಾರ ಪ್ರಮಾಣದಲ್ಲಿದೆ.  ಪರಿಶಿಷ್ಟ ಸಮುದಾಯಕ್ಕೆ ಎರಡು ಮೀಸಲು ಕ್ಷೇತ್ರ, ಪರಿಶಿಷ್ಟ ಪಂಗಡಕ್ಕೆ ಮೂರು ಮೀಸಲು ಹಾಗೂ ಒಂದು ಲೋಕಸಭೆ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಶೋಷಿತರ ಭದ್ರ ನೆಲೆಯಾಗಿರುವ ಪ್ರದೇಶಕ್ಕೆ ನೀರಾವರಿ ಜಾರಿ ವಿಚಾರದಲ್ಲಿ ಸರ್ಕಾರಗಳು ತಳೆದಿರುವ ನಿಲುವುಗಳು ನಿಜಕ್ಕೂ ಆಘಾತಕಾರಿ.
    ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ಕೆರೆ ತುಂಬಿಸುವ ಹಾಗೂ ಹನಿ ನೀರಾವರಿಯೋಜನೆಗೆ ಆರಂಭದಲ್ಲಿ ಆರು ಸಾವಿರ ಕೋಟಿ ರುಪಾಯಿ ವೆಚ್ಚ ಅಂದಾಜಿಸಲಾಗಿತ್ತು. ಸರ್ಕಾರದ ಇಚ್ಚಾಶಕ್ತಿ ಕೊರತೆ ಹಾಗೂ ವಿಳಂಬ ಧೋರಣೆಯಿಂದಾಗಿ ಅದೀಗ 22 ಸಾವಿರ  ಕೋಟಿ ರುಪಾಯಿ ಪರಿಷ್ಕೃತ ಮೊತ್ತಕ್ಕೆ ಸೀಮಿತವಾಗಿದೆ.  ತರಿಕೆರೆ ತಾಲೂಕಿನ ಅಬ್ಬಿನಹೊಳಲು ಬಳಿ ಕೇವಲ 1.6 ಕಿಮೀ ಉದ್ದದ ಕಾಲುವೆ ನಿರ್ಮಾಣಕ್ಕೆ ಅಲ್ಲಿನ ಕೆಲ ರೈತರು ಅಡ್ಡಿ ಪಡಿಸುತ್ತಿದ್ದಾರೆ. ಕಳೆದ  ಎಂಟು ವರ್ಷಗಳಿಂದ ಇದು ಸಮಸ್ಯೆಯಾಗಿ ಉಳಿದಿದೆ. ಓರ್ವ ಜನಪ್ರತಿನಿಧಿಯ  ಹಠದ ಮುಂದೆ  ಇಡೀ ಸರ್ಕಾರವೇ ಮಂಡಿಯೂರಿದೆ. ಇದೊಂದು ಸಮಸ್ಯೆಯಿಂದಾಗಿ ಯೋಜನಾ ವೆಚ್ಚ ಹೆಚ್ಚಳವಾಗುತ್ತಲೇ ಹೋಗುತ್ತಿದ್ದು ಸರ್ಕಾರಕ್ಕೆ ಈ ಸಂಗತಿ ಅರಿವಾಗದೇ ಇರುವುದು ಶೋಚನೀಯ.
              ಭದ್ರಾ ಮೇಲ್ದಂಡೆ ಹಳೇ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಸರಿ ಸುಮಾರು ಮೂರು ಸಾವಿರ ಕೋಟಿ ರುಪಾಯಿಷ್ಟು ಬಾಕಿ ಕೊಡಬೇಕಾಗಿದೆ. ಈ ಮೊತ್ತ ಪಾವತಿಸದ ಹೊರತು ಗುತ್ತಿಗೆದಾರರು ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವುದು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಭದ್ರಾ ಮೇಲ್ದಂಡೆಗೆ 2700 ಕೋಟಿ ರುಪಾಯಿ ಅನುದಾನವ  ಈ ವರ್ಷ ಒದಗಿಸುವುದಾಗಿ ಹೇಳಿ ಕೇವಲ 1200 ಕೋಟಿ ನೀಡಿದ್ದಾರೆ. ಇನ್ನೂ 1500 ಕೋಟಿ ರು ಪ್ರಸ್ತಾಪವಿಲ್ಲ. ಮತ್ತೊಂದು ಬಜೆಟ್ ಎದುರಾಗಿದೆ.
     ಭದ್ರಾ ಮೇಲ್ದಂಡೆಯ  ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರದಿಂದ ಅನುದಾನ ಪಡೆಯುವ ಪ್ರಸ್ತಾಪಗಳು ಕಳೆದ ಹತ್ತು ವರ್ಷಗಳಿಂದಲೂ ಭಾರತ ಸರ್ಕಾರದ ಮುಂದಿದೆ. ಈ ಹಿಂದೆ ಯಡಿಯೂರಪ್ಪಅವರ ಸರ್ಕಾರ ಇದ್ದಾಗಲೇ ರಾಷ್ಟ್ರೀಯ ಯೋಜನೆ ಕಡತಗಳು ರಾಜ್ಯದಿಂದ ಕೇಂದ್ರ ಜಲಶಕ್ತಿ ಕಚೇರಿಗೆ ಮಂಡನೆಯಾಗಿದ್ದವು.  ಕಳೆದ ವಿಧಾನಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರುಪಾಯಿ ಅನುದಾನ ಒದಗಿಸುವುದಾಗಿ  ಹೇಳಿದ್ದರು.
      ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್  ಅಧ್ಯಕ್ಷತೆಯಲ್ಲಿ 12-10-2022 ರಂದು ನಡೆದ  ಸಾರ್ವಜನಿಕ ಹೂಡಿಕೆದಾರರ ಮಂಡಳಿ( public investment Board)ಸಭೆಯಲ್ಲಿ ಭದ್ರಾ್ ಮೇಲ್ಡಂಡೆಯನ್ನು  ರಾಷ್ಟ್ರೀಯ ಯೋಜನೆ ಎಂದು ಶಿಫಾರಸು ಮಾಡಿ  ಸುಮಾರು 5300 ಕೋಟಿ ರುಪಾಯಿ ಅನುದಾನವ ಕಳೆದ ಬಜೆಟ್ ನಲ್ಲಿ ಮೀಸಲಿರಿಸಿದ್ದು ಇದುವರೆಗೂ ಬಿಡುಗಡೆ ಮಾಡಿಲ್ಲ.ನಂತರ ನಡೆದ ವಿದ್ಯಮಾನಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಬದಲಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರ ಪರಿಗಣಿಸುತ್ತದೆ ಎಂಬ ಜಲಶಕ್ತಿ ಸಚಿವಾಲಯದ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಿದೆ. ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ ಆಗ್ಜಿಲರೇಟೆಡ್  ಇರಿಗೇಷನ್ ಬೆನಿಪಿಟ್  ಪ್ರೋಗ್ರಾಮ್ (PMKSY-AIBP) ಅಡಿ ಅನುದಾನ ಒದಗಿಸುವ ಪ್ರಸ್ತಾವನೆಯನ್ನು ಕೇಂದ್ರದ ಮುಂದೆ ಮಂಡಿಸಲಾಗಿದೆ. ಆರು ತಿಂಗಳಾದರೂ ಕೇಂದ್ರ ಮನ್ನಣೆ ನೀಡಿ ಅನುದಾನ ನೀಡುತ್ತಿಲ್ಲ. ಕೇಂದ್ರದ ಮೇಲೆ ರಾಜ್ಯ ಹಾಗೂ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಆರೋಪಿಸುತ್ತ ಕಾಲ ಹರಣ ಮಾಡುತ್ತಿದೆ. ಇವರಿಬ್ಬರ ನಡುವೆ ಭದ್ರಾ ಮೇಲ್ದಂಡೆ ಸೊರಗಿದೆ. ಜನಕಲ್ಯಾಣ ಮರೆತು ವರ್ತಿಸು್ತ್ತಿರುವ  ಸರ್ಕಾರಗಳ ಈ  ನಡೆಯನ್ನು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಉಗ್ರವಾಗಿ ಖಂಡಿಸುತ್ತದೆ.
      5300 ಕೋಟಿ ರುಪಾಯಿ ಅನುದಾನ ಪಡೆಯುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರದ ಮುಂದೆ 2025 ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಲಿಖಿತವಾಗಿ ಹೇಳಿಕೆ ನೀಡಿದೆ. 2025 ರ ವೇಳೆಗೆ ಕಾಮಗಾರಿ ಮುಗಿಸುವ ಭರವಸೆಯ ರಾಜ್ಯ ಸರ್ಕಾರ ನೀಡಿದೆಯಾದರೂ  ಅನುದಾನ ಬಿಡುಗಡೆ, ಬಾಕಿ ಉಳಿದಿರುವ ಕಾಮಗಾರಿ ಪ್ರಮಾಣ ನೋಡಿದರೆ ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿಯುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಕೇಂದ್ರ ಸರ್ಕಾರ ಈ ಅಂಶ ಮುಂದಿಟ್ಟುಕೊಂಡು ಅನುದಾನ ಬಿಡುಗಡೆಗೆ ಮತ್ತಷ್ಟು ವಿಳಂಬ ಮಾಡುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತಿಸಬೇಕು. ಕೇಂದ್ರದ  ಅನುದಾನ  ಕಾಯದೆ ರಾಜ್ಯ ಸರ್ಕಾರ ಅನುದಾನ ಕಾಯ್ದರಿಸಿಕೊಂಡು ಕಾಮಗಾರಿಗೆ ಚುರುಕಿನ ವೇಗ ನೀಡಬೇಕು. ಕೇಂದ್ರ ಎತ್ತಿರುವ ತಾಂತ್ರಿಕ ಸಮಸ್ಯೆಗಳ ತಕರಾರುಗಳ ರಾಜ್ಯ ಸರ್ಕಾರ ಸರಪಡಿಸಿಕೊಳ್ಳಲಿ.
   ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಮುಖ್ಯ ಕಾಲುವೆ ಕಾಮಗಾರಿ ಶೇ.80 ರಷ್ಟು ಮುಗಿದಿದ್ದು  ಬರಪೀಡಿತ ತಾಲೂಕುಗಳಾದ ಚಳ್ಳಕೆರೆ, ಹಿರಿಯೂರು ಮತ್ತು ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ 69 ಸಾವಿರ ಹೆಕ್ಟೇರು ಪ್ರದೇಶದ ಹನಿ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿಯೂ ವಿಳಂಭ ನೀತಿ ಅನುಸರಿಸಲಾಗುತ್ತಿದೆ. ತರಿಕೆರೆ ಭಾಗದಲ್ಲಿ ಈಗಾಗಲೇ ಹನಿ ನೀರಾವರಿ ಅಳವಡಿಕೆ ಕಾರ್ಯ ಪ್ರಾರಂಭಿಸಲಾಗಿದೆ. ಇದೇ ಮಾದರಿ ಈ ಮೂರು ತಾಲೂಕುಗಳಲ್ಲಿ ಕೈಗೆತ್ತಿಕೊಳ್ಳಬೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸುತ್ತದೆ.

 ಮುಖ್ಯಮಂತ್ರಿ ಪತ್ರದಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ  ಪ್ರಮುಖ ಬೇಡಿಕೆಗಳು

1 ಭದ್ರಾ ಮೇಲ್ದಂಡೆ ಕಾಮಗಾರಿಗೆ ತೊಡಕಾಗಿರುವ  ಭೂ ಸ್ವಾಧೀನ ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.
2 ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ಪ್ರದೇಶದ ಕಾಮಗಾರಿಗಳ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು
3 ಹೊಳಲ್ಕೆರೆ ತಾಲೂಕಿನ ಕೆರೆಗಳ ತುಂಬಿಸಲು ಮುಂಬರುವ ಮಳೆಗಾಲದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಬೇಕು.
4 ಟೆಂಡರ್ ಕರೆದು ಹನಿ ನೀರಾವರಿ ಕಾಮಗಾರಿಗಳ ಆರಂಭಿಸಬೇಕು.
5 ಮುಂದಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ನಿಗಧಿಗೊಳಿಸಲಾದ ಅನುದಾನದಲ್ಲಿ ಸಿಂಹಪಾಲು  ಭದ್ರಾ ಮೇಲ್ದಂಡೆಗೆ ವಿನಿಯೋಗಿಸಬೇಕು.
[t4b-ticker]

You May Also Like

More From Author

+ There are no comments

Add yours