ಸಾಲ ಮಂಜೂರಾತಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸಬೇಡಿ:ಎ.ನಾರಾಯಣಸ್ವಾಮಿ

 

ಹೈಲೆಟ್ಸ್

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆ :
*****************
ಸರ್ಕಾರಿ ಯೋಜನೆಗಳಡಿ ಸಾಲ ಮಂಜೂರಾತಿಗೆ ಸಿಬಿಲ್ ಸ್ಕೋರ್ ಪರಿಗಣಿಸಬೇಡಿ
***************
ಹಸು, ಕುರಿ ಸಾಗಣಿಕೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ
******************

ಚಿತ್ರದುರ್ಗ.16:
ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರಾತಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು. ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಹಸು ಸಾಕಾಣಿಕೆಗೆ, ಸಣ್ಣ ಘಟಕಗಳ ಆಧಾರದಲ್ಲಿ ಪಾರಂಪರಿಕವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬಂದ ಸಮುದಾಯಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಒದಗಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ (minister) ಎ.ನಾರಾಯಣಸ್ವಾಮಿ ಹೇಳಿದರು.

ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಡಿ ಕಾರ್ಯನಿರ್ವಹಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಫಾಯಿ ಕರ್ಮಚಾರಿ ಹಾಗೂ ದಿವ್ಯಾಂಗರ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮಗಳ ಅನುದಾನದಡಿ, ನೀಡುವ ಸಾಲ ಸೌಲಭ್ಯ ಯೋಜನೆಗಳ ಅನುಷ್ಠಾನದ ಕುರಿತು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಸಾಮಾಜಿಕವಾಗಿ ಹಿಂದುಳಿದವರು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರ ಹಲವು ನಿಗಮಗಳನ್ನು ಸ್ಥಾಪಿಸಿ, ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಜಾರಿಗೊಳಿಸಿದೆ. ಆದರೆ ಬ್ಯಾಂಕ್‍ಗಳು ಈ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಮರ್ಪಕವಾಗಿ ನೀಡುತ್ತಿಲ್ಲ.  ನಿಗಮಗಳು ಬ್ಯಾಂಕ್‍ಗಳಲ್ಲಿ ಠೇವಣಿ ಇರಿಸಿದ ಹಣದ ಬಳಕೆಯೇ ಆಗಿಲ್ಲ. ಸಿಬಿಲ್ ಸ್ಕೋರ್, ಸಾಲ ಮರುಪಾವತಿ ಅರ್ಹತೆ ಮುಂತಾದ ನೆಪಗಳನ್ನು ಹೇಳಿ ಸಾಲ ಸೌಲಭ್ಯಕ್ಕೆ ಸಲ್ಲಿದ ಅರ್ಜಿಯನ್ನು ಬ್ಯಾಂಕುಗಳಿಂದ ತಿರಸ್ಕರಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂಬುದಾಗಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದರು.
ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿಗಳು, ಬಡವರು ಸ್ವಂತ ಉದ್ಯೊಗ ಕೈಗೊಂಡು ಅಭಿವೃದ್ಧಿ ಹೊಂದಲು ಸಾಲ ಸೌಲಭ್ಯ ನೀಡುವಾಗ, ಇದಕ್ಕೆ ಸಿಬಿಲ್ ಸ್ಕೋರ್ ಹಾಗೂ ಆಸ್ತಿ ಭದ್ರತೆಯನ್ನು ಬ್ಯಾಂಕುಗಳು ಬಯಸುವುದು ಎಷ್ಟು ಸರಿ. ಇದು ಸರ್ಕಾರ ಜಾರಿ ಮಾಡಿರುವ ಯೋಜನೆಗಳ ಆಶಯಕ್ಕೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಐದು ನಿಗಮಗಳ ಯೋಜನೆಯಡಿ ಬ್ಯಾಂಕುಗಳು ಇದವರೆಗೆ ಎಷ್ಟು ಜನರಿಗೆ ಸಾಲ ಸೌಲಭ್ಯ ನೀಡಿವೆ ಹೇಳಿ ಎಂದು ಸಚಿವ ಎ.ನಾರಾಯಣ ಸ್ವಾಮಿ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಪ್ರತಿ ವರ್ಷವೂ ಸಾಲ ಸೌಲಭ್ಯ ಯೋಜನೆಗೆ ಅನುದಾನವನ್ನು ಮೀಸಲಿಡುತ್ತದೆ. ಆದರೆ ಕಳೆದ ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಸರ್ಕಾರದಿಂದ ಇರಿಸಿದ ಠೇವಣಿ ಹಣವೇ ಬಳಕೆಯಾಗಿಲ್ಲ. ಇದು ವಿರ್ಪಯಾಸದ ಸಂಗತಿಯಾಗಿದೆ. ಬ್ಯಾಂಕುಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿವೆ. ಇದು ಸಲ್ಲದು, ಯೋಜನೆಗಳನ್ನು ಬ್ಯಾಂಕುಗಳು ಜನರಿಗೆ ತಲುಪಿಸದಿದ್ದರೆ, ನಿಗಮಗಳಿಂದ ಇರಿಸಿದ ಠೇವಣಿ ಹಣವನ್ನು ಹಿಂಪಡೆದು ಬೇರೆ ಮಾರ್ಗವಾಗಿ ಜನರಿಗೆ ತಲುಪಿಸುವ ಬಗ್ಗೆ ಚಿಂತಿಸಬೇಕಾಗುವುದು ಎಂದರು.
ಹಸು, ಕುರಿ ಸಾಕಾಣಿಕೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ:
*********** ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೈನುಗಾರಿಕೆ ಮುಖ್ಯ ವೃತ್ತಿಯಾಗಿದೆ. ಈ ಭಾಗದಲ್ಲಿನ ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಸು ಸಾಕಾಣಿಕೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಮಂಜೂರು ಮಾಡಬೇಕು.
ನಾಯಕರು, ಬೋವಿ, ಗೊಲ್ಲರು ಹಾಗೂ ಕುರುಬ ಸಮುದಾಯಗಳಿಗೆ ಸೇರಿದಂತೆ ಹಲವು ಸಮುದಾಯಗಳು ಸಾಂಪ್ರದಾಯಕವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದಾರೆ. ಹೊಸದಾಗಿ ಕುರಿ ಮೇಕೆ ಸಾಕಾಣಿಕೆ ಮಾಡಲು ಇಚ್ಛಿಸುವವರಿಗೆ 25 ಅಥವಾ 50 ಕುರಿಗಳ ಘಟಕಕ್ಕೆ ಕುರಿ, ಮೇಕೆ ಸಾಕಾಣಿಕೆ ಸಾಲವನ್ನು ಮಂಜೂರು ಮಾಡಬೇಕು.
ಈ ಸಾಲಗಳನ್ನು ಮಂಜೂರು ಮಾಡುವಾಗ ಅಗತ್ಯ ದಾಖಲೆಗಳನ್ನು ಹೊರುತುಪಡಿಸಿ, ಅನಗತ್ಯವಾಗಿ ಹೆಚ್ಚಿನ ದಾಖಲೆಗಳನ್ನು ಕೇಳಬಾರದು. ಪ್ರತಿ ಬ್ಯಾಂಕ್ ಶಾಖೆಗಳಿಗೂ ಗುರಿ ನಿಗದಿಪಡಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಪಿ.ಎಂ. ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ:
*********** ಬ್ಯಾಂಕುಗಳಲ್ಲಿ ಪಿ.ಎಂ.ಸ್ವನಿಧಿಯ 2ನೇ ಹಾಗೂ 3ನೇ ಹಂತದ ಸಾಲ ಸೌಲಭ್ಯ ಮಂಜೂರು ಮಾಡುವಲ್ಲಿ ತೊಡಕು ಉಂಟಾಗುತ್ತಿದೆ. ಸಾಲ ಹಿಂದಿರುಗಿಸಿದರೂ ಬ್ಯಾಂಕುಗಳು ಇಲ್ಲ ಸಲ್ಲದ ನೆಪ ಹೇಳಿ ಸಾಲ ಮಂಜೂರು ಮಾಡುತ್ತಿಲ್ಲ ಎಂದು ಸಾರ್ವಜನಕರು ದೂರು ಸಲ್ಲಿಸುತ್ತಿದ್ದಾರೆ. ಈ ಕುರಿತು ಬ್ಯಾಂಕುಗಳು ಗಮನ ಹರಿಸಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿ.ಎ.ವಿಶ್ವಕರ್ಮ ಯೋಜನೆಯಡಿ ಹೆಚ್ಚು ಜನರ ನೊಂದಣಿ ಮಾಡಿಸಿ, ಕುಶಲಕರ್ಮಿಗಳಿಗೆ ತರಬೇತಿ ಹಾಗೂ ಸಾಲ ಸೌಲಭ್ಯ ನೀಡಬೇಕು ಎಂದರು.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 2543 ಹಾಗೂ ತುಮಕೂರು ಜಿಲ್ಲೆಯಲ್ಲಿ 4500ಕ್ಕೂ ಹೆಚ್ಚು ನೊಂದಣಿಯಾಗಿವೆ. ಆಂದೋಲನದ ರೀತಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೊಂದಣಿ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಫಾಯಿ ಕರ್ಮಚಾರಿ ಹಾಗೂ ದಿವ್ಯಾಂಗರ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮಗಳ ಯೋಜನೆಗಳ ಅನುಷ್ಠಾನಕ್ಕೆ ನೋಡಲ್ ಬ್ಯಾಂಕ್‍ಗಳನ್ನು ಗುರುತಿಸಿ ಒಪ್ಪಂದ ಮಾಡಿಕೊಳ್ಳಲಾಯಿತು.
ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ, ತುಮಕೂರು ಜಿ.ಪಂ. ಸಿಇಓ ಪ್ರಭು.ಜಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಪರಿಶಿಷ್ಟ ಜಾತಿ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮದ ರಂಜನೀಶ್ ಕುಮಾರ್ ಜೆನ್ವಾ, ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಿ.ಆರ್.ದಿಲ್ ಬಾಬು, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕುಗಳು ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours