ಸಚಿವ ಸ್ಥಾನ ವಂಚಿತರಿಗೆ ಬೇರೆ ಹುದ್ದೆ ನೀಡಲಾಗುತ್ತದೆ: ಸಚಿವ ಸತೀಶ್ ಜಾರಕಿಹೊಳಿ

 

ಬೆಳಗಾವಿ: ‘ಸಚಿವ ಸ್ಥಾನ ಸಿಗದವರು ಆರೋಪ ಮಾಡುತ್ತಿರುವುದು ಸ್ವಾಭಾವಿಕ ಮತ್ತು ಸಹಜ. ಅಂತಹವರನ್ನು ವರಿಷ್ಠರು ಕರೆಯಿಸಿ ಮಾತನಾಡುತ್ತಾರೆ. ಅವರಿಗೆ ಬೇರೆ ಬೇರೆ ಹುದ್ದೆ ಕೊಡುತ್ತೇವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಹಲವು ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ, ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಈ ಬಾರಿ ಗೆದ್ದ ಶಾಸಕರಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಗೆದ್ದವರೇ ಹೆಚ್ಚಿನವರಿದ್ದಾರೆ. ಹಾಗಾಗಿ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಎಲ್ಲೆಡೆ ಕೇಳಿಬರುತ್ತಿದೆ. ಸಚಿವ ಸ್ಥಾನ ಕೈತಪ್ಪಿದವರರೊಂದಿಗೆ ವರಿಷ್ಠರು ಮಾತನಾಡುತ್ತಾರೆ’ ಎಂದರು.

ಬಿಜೆಪಿ ಸರ್ಕಾರದ ಯೋಜನೆಗಳನ್ನು ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ, ‘ಜನಪರವಾಗಿದ್ದರೆ ಮುಂದುವರಿಸುತ್ತೇವೆ. ಅನವಶ್ಯಕವಾಗಿದ್ದರೆ ಸ್ಥಗಿತಗೊಳಿಸುತ್ತೇವೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ನಾವು ಅಧಿಕಾರಕ್ಕೆ ಬರುವ ಮುನ್ನವೇ ಜಾರಿಯಾಗಿದೆ. ಈಗ ಮತ್ತೆ ಅದನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ’ ಎಂದು ಪ್ರಶ್ನೆಯೊ‌ಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಹಂತದಲ್ಲಿ ಯಾವ ರೀತಿ ಮಾತುಕತೆಯಾಗಿದೆ ಗೊತ್ತಿಲ್ಲ. ಯಾರೇ ಆದರೂ ಕಾಂಗ್ರೆಸ್ ನವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದರು.

‘ಸಚಿವರಿಗೆ ಖಾತೆ ಹಂಚಿಕೆ ಅಂತಿಮವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪಟ್ಟಿಗೆ ರಾಜ್ಯಪಾಲರಿಂದ ಅಂಕಿತ ಬೀಳಬೇಕಿದೆ. ವಿರೋಧ ಪಕ್ಷದವರು ಸರ್ಕಾರ ಟೇಕಫ್ ಆಗಿಲ್ಲ ಎನ್ನುತ್ತಾರೆ. ಹಾಗಾಗಿ ಸಂಪುಟ ವಿಸ್ತರಿಸಿ ಒಂದೇ ಬಾರಿ ಟೇಕಫ್ ಮಾಡಲಾಗಿದೆ’ ಎಂದು ಹೇಳಿದರು.

‘ನಾವು ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ನಮಗೆ ಅವಕಾಶ ಕೊಡಬೇಕು’ ಎಂದರು.

[t4b-ticker]

You May Also Like

More From Author

+ There are no comments

Add yours