ಹೊಳಲ್ಕೆರೆಯಲ್ಲಿ ಎತ್ತಿನ ಗಾಡಿ ನಡೆ ಮತಗಟ್ಟೆ ಕಡೆ

 

ಹೊಳಲ್ಕೆರೆ:  ಪಟ್ಟಣದಲ್ಲಿ ಇಂದು ಹಳ್ಳಿಯ ಸೊಗಡು ಮೈದಳೆದು ನಿಂತಿತ್ತು. ಬಣ್ಣದ ಕುಚ್ಚು, ಗೆಜ್ಜೆಗಳಿಂದ ಸಿಂಗಾರಗೊಂಡಿದ್ದ ಜೋಡೆತ್ತುಗಳು, ಬಾಳೆಕಂದು, ಮಾವಿನ, ಹೂವಿನ ತಳಿರು ತೋರಣಗಳಿಂದ ಹಸಿರು ಮೈತುಂಬಿಕೊಂಡಿದ್ದ ಎತ್ತಿನ ಗಾಡಿಗಳು, ಬಿಳಿಯ ಪಂಚೆ, ಅಂಗಿ ಧರಿಸಿ, ತಲೆಗೆ ಪೇಟ ಸುತ್ತಿಕೊಂಡ ಪುರುಷರು, ಬಗೆ ಬಗೆ ಬಣ್ಣದ ಸೀರೆ ಧರಿಸಿ ಕಂಗೊಳಿಸುತ್ತಿದ್ದ ಮಹಿಳೆಯರು ಈ ಎತ್ತಿನ ಗಾಡಿಗಳಲ್ಲಿ ಸಾಲು ದಿಬ್ಬಣ ಹೊರಟಿದ್ದರು. ಘಲ್ಲು ಘಲ್ಲು ಗೆಜ್ಜೆ ಸದ್ದಿನೊಂದಿಗೆ ಸಾಗುತ್ತಿದ್ದ ಈ ದಿಬ್ಬಣ ನೋಡಿದ ಜನತೆ ಯಾವುದೋ ಜಾತ್ರೆ ದಿಬ್ಬಣವಿರಬೇಕು ಎಂದುಕೊಂಡಿದ್ದರು. ಆದರೆ ಅವರ ಊಹೆ ತಪ್ಪಾಗಿತ್ತು. ಈ ಎತ್ತಿನಗಾಡಿಯ ನಡೆ ಜಾತ್ರೆಯ ಕಡೆ ಅಲ್ಲ ಮತಗಟ್ಟೆಯ ಕಡೆ ಆಗಿತ್ತು.

ಹೌದು ಇಂತಹದ್ದೊಂದು ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಹೊರಡಿಸಲು ಮುಂದಾಗಿದ್ದು ಮುಖ್ಯಾಧಿಕಾರಿ ಎ ವಾಸಿಂ ನೇತೃತ್ವದ ಹೊಳಲ್ಕೆರೆ ಪುರಸಭೆಯ ತಂಡ. ಹೊಳಲ್ಕೆರೆ ಕ್ಷೇತ್ರದ ಚುನಾವಣಾಧಿಕಾರಿ ಪಿ ವಿವೇಕಾನಂದ, ತಹಶೀಲ್ದಾರ್ ನಾಗರಾಜ್ ಮತದಾನದ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. *“ನಮ್ಮ ನಡೆ ಮತಗಟ್ಟೆಯ ಕಡೆ”* ಎಂಬ ಘೋಷವಾಕ್ಯಗಳನ್ನು ಕೂಗುತ್ತಾ ಮತದಾನ ಜಾಗೃತಿಯ ಸಂದೇಶವಿರವ ಫಲಕಗಳನ್ನು ಗಾಡಿಯಲ್ಲಿ ಸಿಕ್ಕಿಸಿಕೊಂಡು *ಎತ್ತಿನ ಗಾಡಿಯ ಜಾಥಾ* ಹೊಳಲ್ಕೆರೆ ಪಟ್ಟಣದೆಲ್ಲೆಡೆ ಸಾಗಿತ್ತು. ಈ ಸುಂದರ ದೃಶ್ಯವನ್ನು ನೋಡಲು ಮನೆಯೊಳಗಿದ್ದ ಜನತೆ ಕುತೂಹಲದಿಂದ ಹೊರಬಂದು ನೋಡುತ್ತಾ ನಿಂತರು. ಈ ಸುಂದರ ಗ್ರಾಮೀಣ ದೃಶ್ಯವೈಭವ ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ ಎತ್ತಿನ ಕೃಷಿಯ ಆ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.
ಮುಖ್ಯಾಧಿಕಾರಿ ಎ ವಾಸಿಂ ಮಾತನಾಡಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸು ಸಲುವಾಗಿ ಚುನಾವಣಾ ಆಯೋಗವು ಅನೇಕ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಮ್ಮ ಈ ಕಾರ್ಯಕ್ರಮಗಳ ಉದ್ದೇಶ ಮತದಾನದ ಅಗತ್ಯತೆಯನ್ನು ನಾಗರಿಕರಿಗೆ ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಡುವುದಾಗಿದೆ. ಯಾವೊಬ್ಬ ಮತದಾರರೂ ಮತದಾನದಿಂದ ವಂಚಿತರಾಗಬಾರದು ಎಂಬುದು ಚಿತ್ರದುರ್ಗ ಜಿಲ್ಲಾಡಳಿತದ, ಚುನಾವಣಾಧಿಕಾರಿಗಳ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಯಾರೊಬ್ಬರೂ ಸಹ ಮತದಾನ ಮಾಡುವುದರಿಂದ ಹಿಂಜರಿಯದೆ ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿಕೊಂಡರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪಿ ವಿವೇಕಾನಂದ ಮಾತನಾಡಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ವಿವೇಚನಾತ್ಮಕವಾಗಿ ಸ್ವಂತ ನಿರ್ಧಾರ ತೆಗೆದುಕೊಂಡು ಸ್ವಯಂಪ್ರೇರಣೆಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಕರೆ ನೀಡಿದರು. ಹೊಳಲ್ಕೆರೆ ಪುರಸಭೆಯ ಕಛೇರಿ ಸಿಬ್ಬಂದಿ, ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ, ವಾಹನ ಚಾಲಕರು, ಬೀದಿ ದೀಪ ನಿರ್ವಾಹಕರು ತಾಲ್ಲೂಕು ಕಛೇರಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಆರಕ್ಷಕ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ತಾಲ್ಲೂಕು ಸ್ವೀಪ್ ಸಮಿತಿಯ ತಂಡದವರು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಈ ಎತ್ತಿನ ಗಾಡಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours