ಸಾರ್ವಜನಿಕ ಜೀವನದಲ್ಲಿ ದುಷ್ಟಶಕ್ತಿಗಳ ಕೈವಾಡ

 

 

*ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದಾಗ (1976) ನಮ್ಮ ಗುರುವರ್ಯರು ತುಂಬಾ ಸಂತೋಷಪಟ್ಟರು.”ಜಗದ್ಗುರು’ ವಾಗುವವನು ಜಗತ್ತನ್ನು ಸುತ್ತಿ ಬರಬೇಕು ಎಂದು ಹೇಳಿ ಪಾಶ್ಚಾತ್ಯ ದೇಶಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಲು ಪ್ರೋತ್ಸಾಹಿಸಿದರು. ಆದರೆ ಮಠ ಮತ್ತು ಶಿಷ್ಯರಿಂದ ಹಣವನ್ನು ಪಡೆದು ಪರದೇಶದಲ್ಲಿ ಓದಲು ನಮಗೆ ಸುತರಾಂ ಇಷ್ಟವಿರಲಿಲ್ಲ. Phd ಮಾಡಲು UGC ಯಿಂದ ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌ ದೊರೆತಂತೆ ಏನಾದರೂ ಸ್ಕಾಲರಷಿಪ್‌ ಸಿಕ್ಕರೆ ಮಾತ್ರ ಹೋಗುವುದಾಗಿ ಅರಿಕೆ ಮಾಡಿಕೊಂಡೆವು. ಆಗ ಜತ್ತಿಯವರು ಉಪರಾಷ್ಟ್ರಪತಿಗಳಾಗಿದ್ದರು. ಭಾರತ ಸರಕಾರದಿಂದ ಫೆಲೋಷಿಪ್‌ ಕೊಡಿಸುವಂತೆ ಪೂಜ್ಯ ಗುರುಗಳು ಬಹಳವಾಗಿ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಸಂಸ್ಕೃತಕ್ಕೆ ಎರಡನೆಯ ತವರೂರಾದ ಜರ್ಮನಿಯಲ್ಲಿ ಓದಲು DAAD ಸಂಸ್ಥೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಪ್ರಯತ್ನ ಮುಂದುವರಿಸಿದೆವು. ನಮ್ಮ ಸುದೈವಕ್ಕೆ ಎರಡು ವರ್ಷಗಳ ಕಾಲ (1977-78) ಆಸ್ಟಿಯಾ ದೇಶದ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಮಾಡಲುಸಆಫ್ರೋ ಏಷಿಯನ್‌ ಸಂಸ್ಥೆಯಿಂದ (AAI) ಫೆಲೋಷಿಪ್‌ ಮುಂಜೂರಾಗಿ ಬಂತು. ಇದಕ್ಕೆ ಕಾರಣ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರೊಫೆಸರ್‌ ಆಗಿದ್ದ ಡಾ||ಗೆರ್‌ಹಾರ್ಡ್‌ ಓಬರ್‌ಹಾಮರ್‌ರವರು. ನಮ್ಮ Phd ಮಹಾಪ್ರಬಂಧದ ಬಾಹ್ಯಪರೀಕ್ಷಕರಾಗಿ (External Examner) ಓದಿ ಮೆಚ್ಚಿಕೊಂಡಿದ್ದರೆಂಬ ಸಂಗತಿ ವಿಯೆನ್ನಾಕ್ಕೆ ಹೋದಮೇಲೆ ತಿಳಿಯಿತು.*

*ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿರುವ ಸಂಸ್ಕೃತ ಪೀಠ (ಈಗ ಸ್ಥಗಿತಗೊಂಡಿದೆ) ಮೊಟ್ಟಮೊದಲಿಗೆ ಸ್ಥಾಪಿತವಾಗಿದ್ದು 1908 ರಲ್ಲಿ. ಅದನ್ನು ಸ್ಥಾಪಿಸಿದ ಮೊದಲ ಪ್ರೊಫೆಸರ್‌ ಜಾರ್ಜ್‌ ಬ್ಯೂಲರ್‌ (George Buehler) ಕನ್ನಡ ನಾಡಿನ ಮೈಸೂರು ಮತ್ತು ಕೊಡಗು ಪ್ರದೇಶಗಳ ಶಾಸನಗಳನ್ನು ಆಳವಾಗಿ ಅಧ್ಯಯನ ಮಾಡಿದ ಪಾಶ್ಚಾತ್ಯ ವಿದ್ವಾಂಸ. ಹೀಗಾಗಿ ವಿಯೆನ್ನಾಕ್ಕೆ ಹೋದ ಕೆಲವೇ ದಿನಗಳಲ್ಲಿ ನಾವು ಓದುತ್ತಿದ್ದ Indolological Institute ನಮಗೆ ಭಾವನಾತಕ್ರವಾಗಿ ತೀರಾ ಹತ್ತಿರವೆನಿಸಿತು. ಕಾಲೇಜಿಗೆ ಹೋಗುವಾಗ ಎಲ್ಲರಂತೆ ಠಾಕುಠೀಕಾಗಿ ಕೋಟು ಪ್ಯಾಂಟ್‌ ಟೈ ಧರಿಸಿ ಹೋಗುತ್ತಿದ್ದೆವು. ಆತ್ಮೀಯ ಸ್ನೇಹಿತರು ನಮನ್ನು ಸ್ನೇಹ ವಿಶ್ವಾಸದಲ್ಲಿ “Ein alter Mann in einem junger Korper” (An old man in an yung body) ಎಂದು ಗೇಲಿ ಮಾಡುತ್ತಿದ್ದರು. ನಮ್ಮ ಬಾಯಲ್ಲಿನ ಪರಿಶುಭ್ರವಾದ ಧವಳ ದಂತಪಕ್ತಿಯನ್ನು ನೋಡಿ ಅಲ್ಲಿನ ಪಾಶ್ಚಿಮಾತ್ಯ ಗೆಳೆಯರು “ಇವು ನಿಮ್ಮ ನಿಜವಾದ ಹಲ್ಲುಗಳೇ?” ಎಂದು ಆಶ್ಚರ್ಯದಿಂದ ಕೇಳುತ್ತಿದ್ದರು. ಏಕೆಂದರೆ ಯೂರೋಪಿಯನ್ನರ ಹಲ್ಲುಗಳು ಭಾರತೀಯರ ಹಲ್ಲುಗಳಂತೆ ಬಿಳಿಯಾಗಿರುವುದಿಲ್ಲ. ಗಟ್ಟಿಮುಟ್ಟಾಗಿಯೂ ಇರುವುದಿಲ್ಲ. ಬದಲಾಗಿ ಪೇಲವವಾಗಿರುತ್ತವೆ. ಅವರದು ಕಂದು ಬಣ್ಣದ ದುರ್ಬಲ ದಂತಪಂಕ್ತಿ! ಬಹಳ ಜನ ಎಳವೆಯಲ್ಲಿಯೇ ಹಲ್ಲು ಕಟ್ಟಿಸಿಕೊಂಡಿರುತ್ತಾರೆ! “ನೀವು ಹೀಗೆ ನಮ್ಮನ್ನು ಕೇಳಿದಂತೆ ನಮ್ಮ ದೇಶದಲ್ಲಿ ಯಾರನ್ನಾದರೂ ಕೇಳಿದರೆ ಹಲ್ಲು ಮುರಿಸಿಕೊಳುತ್ತೀರಿ?” ಎಂದು ಹಾಸ್ಯ ಮಾಡುತ್ತಿದ್ದೆವು! ನಮ್ಮ ತಲೆಗೂದಲೂ ಹಲವು ಗೆಳೆಯರ ‘ಅಸೂಯೆ’ಗೆ ಕಾರಣವಾಗಿತ್ತು. ನಮ್ಮ ತಲೆಯ ಮೇಲಿರುವ ಈ ಗುಂಗುರುಗೂದಲು ನಮ್ಮ ದೇಶಕ್ಕೆ ವಾಪಾಸು ಹೋಗುವವರೆಗೆ ಮಾತ್ರ! ಸ್ವಾಮಿಗಳಾಗುವ ಪೂರ್ವದಲ್ಲಿ ಕೇಶಮುಂಡನ ಮಾಡಿಸಿಕೊಳಬೇಕಾಗುತ್ತದೆ ಎಂದು ಅವರಿಗೆ ತಿಳಿಸಿದಾಗ ಕನಿಕರ ವ್ಯಕ್ತಪಡಿಸಿದರು! ವಿಯೆನ್ನಾದಿಂದ ವಾಪಾಸು ಹೊರಡುವಾಗ ಶುಭ ಹಾರೈಸುತ್ತಾ ಕೇಶ ಮುಂಡನದ ನಂತರ “ನಿಮ್ಮ ಈ ಸುಂದರ ಗುಂಗುರು ತಲೆಗೂದಲನ್ನು ನಮಗೆ ಪಾರ್ಸೆಲ್‌ ಮಾಡಿರಿ” ಎಂದು ಕೆಲವರು ಸಲುಗೆಯಲ್ಲಿ ಉದ್ಗರಿಸಿದರು!*

*ಭಾರತಕ್ಕೆ ಹಿಂದಿರುಗಿದ ನಂತರ ಪಟ್ಟಾಭಿಷೇಕ ಜರುಗಿತು. ನವವಧು ಮದುವೆಯಾದ ಹೊಸತರಲ್ಲಿ ಗಂಡನ ಮನೆಗೆ ಹೋದಾಗಿನ ಅನುಭವ! ಅಲ್ಲಿಯವರೆಗೆ ವಿಶ್ವವಿದ್ಯಾನಿಲಯಗಳಲ್ಲಿ ಗಂಭೀರವಾಗಿ ಅಧ್ಯಯನ ಮಾಡಿಕೊಂಡಿದ್ದ ನಮಗೆ ಎಲ್ಲವೂ ಹೊಸತು. ಸ್ನಾತಕೋತ್ತರ ಪದವಿಯಿಂದ ಡಾಕ್ಟರೇಟ್‌ವರೆಗೆ ರಾಜ್ಯದ ಹೊರಗೆ ದೂರದ ಸ್ಥಳಗಳಲ್ಲಿ ಓದಿದ್ದರಿಂದ ಸಮಾಜದ ಒಡನಾಟವಾಗಲೀ, ಶಿಷ್ಯರ ಒಡನಾಟವಾಗಲೀ ಬಂಧುಗಳ ಒಡನಾಟವಾಗಲೀ ಅಷ್ಟಾಗಿ ಇರಲಿಲ್ಲ.ವಿಶ್ವವಿದ್ಯಾನಿಲಯಗಳಲ್ಲಿ ಬೆಳೆದು ಬಂದ ಪರಿಸರವೇ ಬೇರೆ, ಇಲ್ಲಿನ ಪರಿಸರವೇ ಬೇರೆ. ನಮ್ಮ ಹಿರಿಯ ಗುರುವರ್ಯರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳನ್ನು ಮತ್ತು ಮಠದ ವ್ಯವಹಾರವನ್ನು ಇವರು ಹೇಗೆ ಮುನ್ನಡೆಸುತ್ತಾರೋ ಏನೋ ಎಂಬ ಅನುಮಾನ ಕೆಲವರಿಗೆ. ಇದಕ್ಕೆ ಗುರುವರ್ಯರ ಉತ್ತರ “ಏಯ್‌! ಯಾರಾದರೂ ನಾಯಿಮರಿಗೆ ಈಜು ಕಲಿಸುತ್ತಾರೇನೋ? ನೀರಿಗೆ ಎಸೆದರೆ ಅದು ತನಗೆ ತಾನೇ ಈಜಿ ದಡ ಸೇರುತ್ತದೆ!” ಹೀಗೆ ಹಿರಿಯ ಗುರುಗಳು ನಮ್ಮ ಮೇಲೆಟ್ಟಿದ್ದ ಅಪಾರ ಶಿಷ್ಯವಾತ್ಸಲ್ಯ ಹಾಗೆಯೇ ಮಠದ ಮೇಲೆ ಅಪಾರ ಶ್ರದ್ಧಾ ಭಕ್ತಿಯುಳ ಸಾಮಾನ್ಯ ಶಿಷ್ಯರ ಸದ್ಭಾವನೆಗಳು ನಮನ್ನು ಮುನ್ನಡೆಸಿದವು. ಕೆಲವರು ಮಾತ್ರ “ಫಾರಿನ್‌ ರಿಟರ್ನ್‌ಡ್‌ ಸ್ವಾಮೀಜಿ!” ಎಂದು ಮರೆಯಲ್ಲಿ ಗೇಲಿ ಮಾಡುತ್ತಿದ್ದರು. ನಂತರ “ಹೈಟೆಕ್‌ ಸ್ವಾಮೀಜಿ” ಎಂದೂ ಕೊಂಕು ಮಾತನಾಡತೊಡಗಿದರು.*

*ನಮ್ಮ ಮಠದ ಶಾಲಾ ಕಾಲೇಜುಗಳಲ್ಲಿ ಕೆಲವರು ಅಸಂತುಷ್ಟ ಪ್ರಾಧ್ಯಾಪಕರೂ ಇದ್ದರು. ನಾವು ಬರುವ ಹೊತ್ತಿಗೆ ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜಿನ ಪ್ರಾಧ್ಯಾಪಕರ ಮೇಲೆ ಹಿರಿಯ ಗುರುವರ್ಯರು ಶಿಸ್ತಿನ ಕ್ರಮ ಕೈಗೊಂಡಿದ್ದರು. ಈ ಅಸಂತುಷ್ಟ ಪ್ರಾಧ್ಯಾಪಕರು ನಮ್ಮ ಪಟ್ಟಾಭಿಷೇಕವನ್ನು “Head Shaving” ಎಂದು ಅಪಹಾಸ್ಯ ಮಾಡಿ ನಮಗೆ ಅನಾಮಧೇಯ ಪತ್ರ ಬರೆದಿದ್ದರು. ಕೋಮಲವಾಗಿದ್ದ ನಮ್ಮ ಮನಸ್ಸು ಆ ಪತ್ರವನ್ನು ಓದಿ ವಿಹ್ವಲಗೊಂಡಿತ್ತು. ಬೃಹತ್‌ ಸಮಾರಂಭವೊಂದರಲ್ಲಿ ಅವರ ಅನಾಮಧೇಯ ಪತ್ರದ ವಿಚಾರವನ್ನು ತಿಳಿಸಿ ನಮ್ಮ ಮನದ ನೋವನ್ನು ಬಹಿರಂಗವಾಗಿ ಹಂಚಿಕೊಂಡೆವು. ಪಕ್ಕದಲ್ಲಿಯೇ ಆಸೀನರಾಗಿದ್ದ ನಮ್ಮ ಗುರುವರ್ಯರು ಸಮಾರಂಭ ಮುಗಿದು ಬಿಡಾರಕ್ಕೆ ವಾಪಾಸು ಬಂದ ಮೇಲೆ ನಮನ್ನು ಹತ್ತಿರಕ್ಕೆ ಕರೆದು ಒಂದು ಕಿವಿಮಾತು ಹೇಳಿದರು: “ನೋಡಿ, ನೀವು ಈ ದಿನ ಮಾಡಿದ ತಪ್ಪನ್ನು ಮುಂದೆಂದೂ ಮಾಡಬೇಡಿ. ಅನಾಮಧೇಯ ಪತ್ರವನ್ನು ಬರೆದವನ ಅಪೇಕ್ಷೆಯನ್ನು ನೀವು ಸುಲಭವಾಗಿ ಈಡೇರಿಸಿದಿರಿ. ಅವನ ಕುಹಕದ ಮಾತುಗಳುಳ್ಳ, ಪತ್ರ ನಿಮಗೆ ಮತ್ತು ಅವನಿಗೆ ಮಾತ್ರ ತಿಳಿದಿದ್ದವು. ನೀವು ಈ ದಿನದ ಸಭೆಯಲ್ಲಿ ಎಲ್ಲರಿಗೂ ತಿಳಿಯುವಂತೆ ಮಾಡಿದಿರಿ. ಅವನ ಉದ್ದೇಶ ಈಡೇರಿತು. ಸಾರ್ವಜನಿಕ ಜೀವನದಲ್ಲಿ ಇವೆಲ್ಲಾ ಅನಿವಾರ್ಯ. ಮನಸ್ಸಿಗೆ ನೋವು ಮಾಡಿಕೊಳಬೇಡಿ. ಇಂತಹ ಪತ್ರಗಳು ಮುಂದೆಯೂ ಬರುತ್ತವೆ; ತಲೆಗೆ ಹಚ್ಚಿಕೊಳದೆ ನಿರ್ಲಕ್ಷಿಸಿರಿ! ಸಾರ್ವಜನಿಕ ಜೀವನದಲ್ಲಿ ಎಲ್ಲವೂ ಸುಗಮವಾಗಿರುವುದಿಲ್ಲ. ದುಷ್ಟಶಕ್ತಿಗಳ ಹಿಂಸೆ ಇದ್ದೇ ಇರುತ್ತದೆ. ಅದಕ್ಕಾಗಿ ಅಂಜಿದರೆ ಅಳುಕಿದರೆ ವೈಫಲ್ಯವನ್ನು ಕಾಣಬೇಕಾಗುತ್ತದೆ. ಮಠವನ್ನು ಆಶ್ರಯಿಸಿ ಬದುಕಬೇಕೆಂಬ ಜನ ಬಹಳ. ಅವರ ಬಗ್ಗೆ ಎಚ್ಚರವಿರಬೇಕು. ನಮನ್ನು ಇಂದ್ರ, ಚಂದ್ರ ಎಂದು ಹೊಗಳಿಯೇ ಕೈಕೊಡುತ್ತಾರೆ!” ಸ್ವಾರ್ಥಿಗಳ ಕೆಲಸ ಈಡೇರದಿದ್ದಾಗ ಇಂದು ನಮನ್ನು ನಿಂದಿಸಿದಂತೆ ಅಂದೂ ಸಹ ಹಿರಿಯ ಗುರುಗಳನ್ನು ನಮಗಿಂತ ಹೆಚ್ಚಾಗಿ ನಿಂದಿಸುತ್ತಿದ್ದರು. ಎಂಬುದಕ್ಕೆ ಈ ಮಾತುಗಳೇ ಸಾಕ್ಷಿ. ಅಂದು ದೊಡ್ಡ ಗುರುಗಳನ್ನು ‘ಗೂಂಡಾ ಸ್ವಾಮಿಗಳು’ ಎಂದು ನಿಂದಿಸುತ್ತಿದ್ದವರ “ಶನಿಸಂತಾನ’ವೇ ಇಂದು ನಮ್ಮ ಕಣುಂದೆ ಕಾಣಿಸುತ್ತಿರುವುದು. ಈ ಕೆಟ್ಟ ಸಂತತಿ ಮುಂದೆಯೂ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.*

*”ಅಪದ್ದಿಗೆ ಉದಾಸೀನವೇ ಮದ್ದು’ ಎಂಬ ನಮ್ಮ ಗುರುವರ್ಯರ ಹಿತೋಪದೇಶವನ್ನು ಜಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದೇವೆ. ಅನಾಮಧೇಯ ಪತ್ರಗಳಲ್ಲಿರುವ ಅಂಶಗಳು ಸ್ವೀಕಾರಾರ್ಹವಾಗಿದ್ದರೆ ಪರಿಶೀಲನೆ ಮಾಡಿ ಕ್ರಮ ಜರುಗಿಸುತ್ತೇವೆ. ತೇಜೋವಧೆ ಮಾಡುವ ಉದ್ದೇಶದ ಪತ್ರಗಳಾಗಿದ್ದರೆ ಸಿಟ್ಟಿನಿಂದ ಹರಿದು ಹಾಕಲು ಹೋಗುವುದಿಲ್ಲ! ಬದಲಾಗಿ ಅಂತಹವುಗಳನ್ನೆಲ್ಲಾ ಅಚ್ಚುಕಟ್ಟಾಗಿ ಫೈಲ್‌ ಮಾಡಿ ಇಡುತ್ತಾ ಬಂದಿದ್ದೇವೆ; ಹೊಸ ಹೊಸವನ್ನು ಸೇರಿಸುತ್ತಾ ಹೋಗುತ್ತೇವೆ. ಇದರಿಂದ ಮುಂದೊಂದು ದಿನ ಅವರು ಯಾರೆಂಬ ಸುಳಿವು ಸಿಗುತ್ತದೆ.*

*ನಮ್ಮ ಗುರುವರ್ಯರು ಏಕಕಾಲದಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಭದ್ರಕರಣ (ಕ್ಷೌರ) ಮಾಡಿಸಿಕೊಳಲು ಕುಳಿತಿದ್ದಾಗಲೂ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿರಲಿಲ್ಲ. ಕ್ಷೌರಿಕರು ಭದ್ರಕರಣ ಮಾಡುತ್ತಿರುವಾಗಲೇ ಅಂಚೆಯವನು ಪತ್ರಗಳನ್ನು ತಂದು ವಿತರಿಸಿದರೆ. ಬೇರೆಯವರಿಂದ ಓದಿಸಿ ಉತ್ತರ ಬರೆಸುತ್ತಿದ್ದರು. ಪರದೇಶಕ್ಕೆ ಹೋಗುವ ಮುನ್ನ ಒಮ್ಮೆ ನಮಗೆ ಆ ಸೇವಾಕಾರ್ಯ ಮಾಡುವ ಪ್ರಸಂಗ ಒದಗಿ ಬಂದಿತ್ತು. ಆಗ ಗುರುಗಳಿಗೆ ಒಂದು ಅನಾಮಧೇಯ ಪತ್ರ ಬಂದಿದ್ದು ಅದರ ಒಕ್ಕಣಿಕೆ ಹೀಗಿತ್ತು “ನಿನ್ನಂತಹ ಸ್ವಾಮಿ ನಮ್ಮ ಮಠದಲ್ಲಿ ಇದ್ದಿದ್ದರೆ ನಿನ್ನನ್ನು ಒಂದು ಕೈ ನೋಡಿಕೊಳುತ್ತಿದ್ದೆ!” ಅದನ್ನು ಪ್ರಸನ್ನಚಿತ್ತದಿಂದ ಕೇಳಿಸಿಕೊಂಡ ಗುರುಗಳು ನಮ್ಮ ಕಡೆಗೆ ತಿರುಗಿ ಮುಗುಳ್ನಗುತ್ತಾ ಹೇಳಿದರು “ನೋಡಪ್ಪಾ! ನಾವು ಪಿಎಚ್‌.ಡಿ ಡಿಗ್ರಿ ಮಾಡಿಲ್ಲ. ಇಂಥ ಅನಾಮಧೇಯ ಪತ್ರಗಳೇ ನಮ್ಮ ಡಿಗ್ರಿ ಸರ್ಟಿಫಿಕೇಟುಗಳು!” ಎಂದು ಮುಗುಳ್ನಗುತ್ತಾ ಹೇಳಿದ್ದು ಈಗಲೂ ನಮ್ಮ ಮನಸ್ಸಿನಲ್ಲಿ ಅಚ್ಚ ಹಸುರಾಗಿ ಉಳಿದಿದೆ!*

*ಮೊಬೈಲ್‌ ಇಲ್ಲದ ಕಾಲದಲ್ಲಿ ಅನಾಮಧೇಯ ಪತ್ರ ಬರೆದರೆ ಬರೆದವರು ಮತ್ತು ಓದಿದವರು ಈ ಇಬ್ಬರಿಗೆ ಮಾತ್ರ ಗೊತ್ತಾಗುತ್ತಿತ್ತು. ಈಗ WhatsApp, Facebook ಇತ್ಯಾದಿ ಸಾಮಾಜಿಕ ಜಾಲ ತಾಣಗಳಲ್ಲಿ ಅನಾಮಧೇಯ ಪತ್ರ ಬರೆದರೆ ಅದು ಪ್ರಪಂಚದಾದ್ಯಂತ ದಿನ ಬೆಳಗಾಗುವುದರೊಳಗೆ ವೈರಲ್‌ ಆಗಿರುತ್ತದೆ! ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಉಪಕಾರ ಪಡೆದವರು ದೂರದಲ್ಲಿದ್ದರೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.ಆದರೆ ಕೆಲವರು ಹತ್ತಿರದಲ್ಲಿದ್ದೂ ಹೆಚ್ಚಿನ ಉಪಕಾರ ಪಡೆದವರೇ ಹೆಚ್ಚಿನ ನಿಂದನೆ ಮತ್ತು ಅಪಪ್ರಚಾರ ಮಾಡುತ್ತಾರೆ. ಉಣ್ಣೆ ಕೆಚ್ಚಲಲ್ಲಿದ್ದರೂ ನೊರವಾಲನ್ನು ಕುಡಿಯುವುದಿಲ್ಲ, ಬದಲಾಗಿ ಅದು ನೆತ್ತರನ್ನೇ ಹೀರುತ್ತದೆ. ಸುಳು, ಮತ್ತು ಅಪಪ್ರಚಾರಗಳೇ ನಯವಂಚಕರ ಆಯುಧಗಳು. ತಮ್ಮ ಸ್ವಾರ್ಥಸಾಧನೆಗಾಗಿ ಹೊಗಳುತ್ತಾರೆ; ಈಡೇರದಿದ್ದಾಗ ಬೊಗಳುತ್ತಾರೆ. ಅವರ ಹೊಗಳಿಕೆಗೆ ಉಬ್ಬದೆ, ಬೊಗಳುವಿಕೆಗೆ ಕುಗ್ಗದೆ ಇರಬೇಕು. ಸುಳಿನ ಸರಮಾಲೆಯನ್ನು ಪೋಣಿಸಿ ಅಪಪ್ರಚಾರ ಮಾಡುವ ಅಂತಹ ದುಷ್ಟ ಜನರಿಗೆ ಅಂಜಬೇಕಾಗಿಲ್ಲ; ಅಳುಕಬೇಕಾಗಿಲ್ಲ.ಯಾರಿಗೆ ನಮ್ಮ ಮೇಲೆ ನಂಬುಗೆ ಇದೆಯೋ ಅವರಿಗೆ ವಿವರಣೆ ನೀಡಬೇಕಾಗಿಲ್ಲ. ಯಾರಿಗೆ ನಮ್ಮ ಮೇಲೆ ನಂಬುಗೆ ಇಲ್ಲವೋ ಅವರಿಗೆ ಎಷ್ಟು ವಿವರಣೆ ಕೊಟ್ಟರೂ ನಂಬುವುದಿಲ್ಲ. ಗುರುವಿಗೆ ಅಂಜಿ ಶಿಷ್ಯರೂ, ಶಿಷ್ಯರಿಗೆ ಅಂಜಿ ಗುರುವೂ ನಡೆದುಕೊಳಬೇಕೆಂಬುದು ನಮ್ಮ ಗುರುಗಳ ಆಣತಿ. ತನ್ನ ಹೆಂಡತಿ ಗರತಿಯೆಂದು ಗಂಡನಿಗೆ ಗೊತ್ತಿದ್ದರೆ ಸಾಕು.ಹೆಂಡತಿಯು ತಾನು ಗರತಿಯೆಂದು ಊರ ಬೀದಿಗಳಲ್ಲಿ ಡಂಗೂರ ಸಾರಿಸುವ ಅವಶ್ಯಕತೆ ಇಲ್ಲ.ದುಷ್ಟರು ತನ್ನ ಗಂಡನ ಕಿವಿಕಚ್ಚದಂತೆ ಮಾತ್ರ ನೋಡಿಕೊಳಬೇಕು. ಆಗ ಗಂಡನೇ ಅಂತಹ ದುಷ್ಟರನ್ನು ಸದೆಬಡಿಯುತ್ತಾನೆ! ಹಾವು ಶಿವನ ಕೊರಳಲ್ಲಿ ಇರುವವರೆಗೂ ಜನರು ಕೈಮುಗಿಯುತ್ತಾರೆ; ಕೆಳಗಿಳಿದು ಬಂದು ಕಚ್ಚಲು ಮುಂದಾದರೆ ಕೈಯಲ್ಲಿ ಬಡಿಗೆಯನ್ನು ತೆಗೆದುಕೊಳುತ್ತಾರೆ!*

– *ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ*

[t4b-ticker]

You May Also Like

More From Author

+ There are no comments

Add yours