ಮುಸುಕಿನ ಜೋಳಕ್ಕೆ ಸೈನಿಕನ ಕಾಟಕ್ಕೆ ಕೃಷಿ ಇಲಾಖೆ ಸಲಹೆ ನೋಡಿ.

 

ಸೈನಿಕ ಹುಳುವಿನ ಬಾಧೆ ಹತೋಟಿಗೆ ಕ್ರಮಗಳು: ಕೃಷಿ ಇಲಾಖೆಯಿಂದ ಸಲಹೆ
******
ಚಿತ್ರದುರ್ಗ,ಜೂನ್11:
ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಉತ್ತಮ ಪೂರ್ವ ಮುಂಗಾರು ಮಳೆಯ ಕಾರಣ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಮುಸುಕಿನ ಜೋಳ ಪ್ರಸ್ತುತ 8 ರಿಂದ 12 ದಿನ ಬೆಳೆಯಿದ್ದು, ಭರಮಸಾಗರ ಹೋಬಳಿಯಲ್ಲಿರುವ ಕೆಲವು ಗ್ರಾಮಗಳಲ್ಲಿ ಸೈನಿಕ ಹುಳು/ ಲದ್ದಿಹುಳುವಿನ ಬಾಧೆ ಕಂಡು ಬಂದಿದೆ.
ಭರಮಸಾಗರ ಹೋಬಳಿಯ ಕಾಕಬಾಳು, ಕಾಲ್ಗೆರೆ, ಚೌಳಹಳ್ಳಿ, ಭರಮಸಾಗರ ಗ್ರಾಮಗಳಲ್ಲಿ  ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಿತರ ಗ್ರಾಮಗಳಲ್ಲೂ ಕಂಡು ಬರುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳಲ್ಲಿಯೂ ಸಹ ಮುಂದಿನ ದಿನಗಳಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬರುವ ಸಾಧ್ಯತೆ ಇದೆ. ಪ್ರಯುಕ್ತ  ರೈತ ಬಾಂಧವರು ತಮ್ಮ ಹೊಲಗಳಲ್ಲಿ ಬಿತ್ತಿರುವ ಮುಸುಕಿನ ಜೋಳ ಬೆಳೆಗಳನ್ನು ಪ್ರತಿ ದಿನವೂ ಗಮನಿಸಿ, ಹುಳು ಭಾದೆಯನ್ನು ಹತೋಟಿಗೆ ತರಲು ನಿರ್ವಹಣೆ ಕ್ರಮಗಳನ್ನು ಕೈಗೊಳ್ಳಲು ಕೃಷಿ ಇಲಾಖೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಡಾ.ಪಿ.ರಮೇಶ್ ಕುಮಾರ್ ಅವರು  ರೈತರಲ್ಲಿ ಮನವಿ ಮಾಡಿದ್ದಾರೆ.
ಹುಳುವಿನ ಬಾಧೆ ಹಾಗೂ ಹತೋಟಿ  ಕ್ರಮಗಳು ವಿವರ ಇಂತಿವೆ.  ಸೈನಿಕ ಹುಳುವಿನ ಜೀವನ ಚಕ್ರ: 35 ರಿಂದ 60 ದಿನಗಳು, ಒಂದು ಹೆಣ್ಣು ಪತಂಗ ಸುಮಾರು 1000 ದಿಂದ 1500 ಮೊಟ್ಟೆಗಳು ಇಡುತ್ತದೆ, ಮರಿ ಹುಳುಗಳು-ಹಾನಿ ಮಾಡುವ ಹಂತ (14 ರಿಂದ 20 ದಿನಗಳ ಹುಳು). ಕೀಟ ಬಾಧೆಯ ಲಕ್ಷಣಗಳು: ಎಲೆಗಳ ಮಧ್ಯದ ದಂಟನ್ನು ಎಲ್ಲ ಭಾಗಗಳನ್ನು ತಿನ್ನುತ್ತವೆ. ಬೆಳೆಗಳ ಎಲ್ಲ ಹಂತಗಳಲ್ಲಿ ಈ ಕೀಟದ ಬಾಧೆಯು ಕಂಡುಬರುತ್ತದೆ. ಸೈನಿಕ ಹುಳು ಗುರುತಿಸುವಿಕೆ: ಹುಳುವಿನ ತಲೆಯ  ಭಾಗದಲ್ಲಿ ಚಿಹ್ನೆಯು ಇರುತ್ತದೆ. ಹುಳುವಿನ ಹಿಂಭಾಗದಲ್ಲಿ ನಾಲ್ಕು ಕಪ್ಪು ಚುಕ್ಕಿ  ಇರುತ್ತದೆ. ನಿರ್ವಹಣಾ ಕ್ರಮಗಳು: ಆಳವಾದ ಉಳುಮೆ ಮಾಡುವುದು (ಮಾಗಿ ಉಳುಮೆ), ಸಕಾಲದಲ್ಲಿ ಬಿತ್ತನೆ ಮಾಡುವುದು (ಜೂನ್  ಮಾಹೆಯ ಅಂತ್ಯದೊಳಗೆ), ಬೀಜೋಪಚಾರ-ಐದು ಕೆಜಿ  ಬಿತ್ತನೆ ಬೀಜಕ್ಕೆ 20 ಗ್ರಾಂ ಸಯಂಟ್ರನಿಲ್ಲಿಪೋಲ್ 19.8 ಮತ್ತು ಥಯೋಮೆಥಾಕ್ಸಾಮ್ 19.8 ರಾಸಾಯನಿಕದಿಂದ ಬೀಜೋಪಚಾರ ಮಾಡುವುದು, ಎಮಮೆಕ್ಟಿನ್ ಬೆಂಜೋಯೇಟ್ ಶೇ.5 ಎಸ್‍ಸಿ ಅಥವಾ 1 ಎಂ.ಎಲ್ ಲ್ಯಾಂಬ್ಡಸೈಹಲೋತ್ರಿನ್ ಶೇ.9.5 ಪ್ರತಿಲೀಟರ್ ನೀರಿಗೆ ಬೆರಸಿ, 200-250 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. ಎಕರೆಗೆ 4ರಂತೆ ಮೋಹಕ ಬಲೆಗಳನ್ನು ಬಳಸುವುದು. ವಿಷ  ಪಾಷಾಣ  ತಯಾರಿಕೆ: 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ 100 ಗ್ರಾಂ ಥಯೋಡಿಕಾರ್ಬ್ ಕೀಟನಾಶಕವನ್ನು 5 ಲೀಟರ್ ನೀರಿನಲ್ಲಿ ಬೆರೆಸಿ 24 ಗಂಟೆಗಳ ಕಾಲ ಗಾಳಿಯಾಡದಂತೆ ಚೀಲದಲ್ಲಿಕಟ್ಟಿ  ಇಡುವುದು, 24 ಗಂಟೆಗಳ ನಂತರ ಸಂಜೆ ಸಮಯದಲ್ಲಿ ಈ ವಿಷ ಪಾಷಾಣವನ್ನು ಬೆಳೆಯ ಸುಳಿಯಲ್ಲಿ ಉದುರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಡಾ.ಪಿ.ರಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours