*ಪ್ರಾಧ್ಯಾಪಕರ ಹುದ್ದೆಗೆ ಪಿ.ಎಚ್.ಡಿ ಕಡ್ಡಾಯ ಜಾರಿ ತಡೆಗೆ ತರಳಬಾಳು ಶ್ರೀ ಜಗದ್ಗುರುಗಳವರ ತೀವ್ರ ಪ್ರಯತ್ನ.

 

*ಪ್ರಾಧ್ಯಾಪಕರ ಹುದ್ದೆಗೆ ಪಿ.ಎಚ್.ಡಿ ಕಡ್ಡಾಯ ಜಾರಿ ತಡೆಗೆ ತರಳಬಾಳು ಶ್ರೀ ಜಗದ್ಗುರುಗಳವರ ಷತೀವ್ರ ಪ್ರಯತ್ನ.*

*ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯಬಹುದೇ। ರಾಜ್ಯದಲ್ಲಿ 900 ಹುದ್ದೆಗಳು ಖಾಲಿ। ಎರಡು ವರ್ಷ ನಿಯಮ ಮುಂದೂಡವಂತೆ ಸಿ.ಎಂ.ಜೊತೆ ಚರ್ಚೆ। ಪ್ರತಿಭಾವಂತರ ಪರ ನಿಂತ ಶ್ರೀ ಜಗದ್ಗುರುಗಳವರು.

*ಕಳೆದ ಮಾರ್ಚ್‌ ತಿಂಗಳು ಒಬ್ಬ ಅಪರಿಚಿತ ಯುವ ಮಹಿಳೆ ತಾನು ಚಿಕ್ಕಂದಿನಿಂದಲೂ ಕೂಡಿಟ್ಟಿದ್ದ ಹಣವನ್ನು ಸತ್ಕಾರ್ಯಕ್ಕೆ ಬಳಸುವಂತೆ ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಕಾಣಿಕೆಯನ್ನು ಕೊಟ್ಟು ಆಶೀರ್ವಾದ ಪಡೆಯಲು ಸಿರಿಗೆರೆ ತರಳಬಾಳು ಮಠಕ್ಕೆ ಬಂದಿದ್ದಳು. ಕೊರೊನಾ ಕಾರಣದಿಂದ ಮಂತ್ರಿ ಮಹೋದಯರಾದಿಯಾಗಿ ಯಾರಿಗೂ ಶ್ರೀ ಜಗದ್ಗುರುಗಳವರ ದರ್ಶನ ದೊರೆಯುತಿಲ್ಲವೆಂದು ಮಠದ ಸಿಬ್ಬಂದಿ ಹೇಳಿದ ಕಾರಣ ಆ ಮಹಿಳೆ ನಿರಾಶಳಾಗಿ ಹಿಂದಿರುಗಿದಳು. ಈ ವಿಷಯ ಶ್ರೀ ಜಗದ್ಗುರುಗಳವರ ಗಮನಕ್ಕೆ ಬಂದದ್ದು ಆ ಮಹಿಳೆ ಹಿಂದಿರುಗಿದ ಮೇಲೆ ಮೂರು ತಿಂಗಳ ನಂತರ ಬರೆದ ಸುದೀರ್ಫ ಪತ್ರದಿಂದ ತುಂಬಾ ಖಿನ್ನತೆ ಮತ್ತು ಮಾನಸಿಕ ತಳಮಳಕ್ಕೆ ಒಳಗಾಗಿ ತನ್ನ ಕಷ್ಟಗಳನ್ನು ಪೂಜ್ಯರ ಹತ್ತಿರ ನಿವೇದಿಸಿಕೊಂಡು ಪರಿಹಾರ ಕಂಡುಕೊಳ್ಳಲು ದೂರದ ಸ್ಥಳದಿಂದ ಬಂದಿದ್ದ ಆ ವಿದ್ಯಾವಂತ ಮಹಿಳೆ ಶ್ರೀ ಜಗದ್ಗುರುಗಳವರ ದರ್ಶನ ದೊರೆಯದೆ ಮತ್ತಷ್ಟೂ ಖಿನ್ನಳಾಗಿ ಹಿಂದಿರುಗಬೇಕಾಯಿತು. ಜೊತೆಯಲ್ಲಿ ಬಂದವರು ಹಸಿವನ್ನು ತಾಳಲಾರದೆ ಮಠದಲ್ಲಿ ಪ್ರಸಾದ ಮಾಡಿದರು. ಆದರೆ ಆ ಮಹಿಳೆಯ ಹಸಿವೇ ಬೇರೆಯಾಗಿತ್ತು . ಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆಯಬೇಕೆಂದು ಸಿರಿಗೆರೆಗೆ ಬಂದಿದ್ದ ಆ ಅಪರಿಚಿತ ವಿದ್ಯಾವಂತ ಮಹಿಳೆಯು ಪೂಜ್ಯರ ದರ್ಶನ ದೊರೆಯದೆ ನಿರಾಸೆಯಿಂದ ಹಿಂದಿರುಗಿದರೂ ಅವರ ಮೇಲಿನ ಗುರುಭಕ್ತಿಯನ್ನು ಕಳೆದುಕೊಳದೆ. ತನ್ನ ಬಾಲ್ಯದಿಂದ ಇಲ್ಲಿಯವರೆಗಿನಸ ಕೌಟುಂಬಿಕ ಜೀವನ ವೃತ್ತಾಂತ, ತಾನು ಎದುರಿಸಿದ ಸಂಕಷ್ಟಗಳು ಮತ್ತು ಏಳು ಬೀಳುಗಳ ಘಟನಾವಳಿಗಳನ್ನು ಮುಚ್ಚು ಮರೆಯಿಲ್ಲದೆ ನಿವೇದಿಸಿಕೊಂಡು ಮಾರ್ಗದರ್ಶನ ಬಯಸಿದ್ದಳು. ಕೈತುಂಬಾ ಸಂಬಳ ಬರುತ್ತಿದ್ದರೂ ಆಕೆಗೆ ಹಣದ ಮೇಲೆ ಯಾವ ಆಸೆಯೂ ಇರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರೂ ಕಷ್ಟಪಟ್ಟು ಓದಿದ್ದ ಆಕೆಗೆ ವಿಶ್ವವಿದ್ಯಾನಿಲಯದ,ಪ್ರಾಧ್ಯಾಪಕಿಯಾಗಬೇಕೆಂಬ;ಹಂಬಲ. ಆದರೆ ಅವಕಾಶವಂಚಿತಳಾಗಬಹುದೆಂಬ ಖಿನ್ನತೆ. ಆ ಮಹಿಳೆಯಿಂದ ಪತ್ರ ಬಂದ ಒಂದೆರಡು ದಿನಗಳಲ್ಲಿಯೇ ಅದೇ ಹಂಬಲ ಇಟ್ಟುಕೊಂಡಿರುವ ಸ್ನಾತಕೋತ್ತರ ಪದವೀಧರರಾದ ಸುಮಾರು 200ಕ್ಕೂ ಹೆಚ್ಚು ಯುವಕ/ಯುವತಿಯರು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಾಗಲು ಎಲ್ಲ ಅರ್ಹತೆಗಳನ್ನು ಪಡೆದಿದ್ದರೂ ಹೇಗೆ ಅವಕಾಶ ವಂಚಿತರಾಗುತ್ತಿದ್ದೇವೆಂದು ಅಲವತ್ತುಕೊಂಡ ಬರೆದುಕೊಂಡು ಪೂಜ್ಯರಿಗೆ ಈಮೇಲ್ ರವಾನಿಸಿದ್ದರು. ಅವರ ಮನವಿಯ ಸಾರಾಂಶ: ಅವರು JRF/NET/KSET/GATE ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿಶ್ವವಿದ್ಯಾನಿಲಯಗಳಲ್ಲಿ ನೇಮಕಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮುಗಿಸಿ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಹಲವು ವರ್ಷಗಳೇ ಕಳೆದಿವೆ. ವಯಸ್ಸು ಮೀರುತ್ತಿದೆ. ರಾಜ್ಯದ ಎಲ್ಲ ಎಶ್ವವಿದ್ಯಾನಿಲಯಗಳಲ್ಲಿ ಒಟ್ಟು ಸುಮಾರು 900 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಆಗುತ್ತಿಲ್ಲ. ಇದೇ ಜುಲೈ 1 ರೊಳಗೆ ನೇಮಕಾತಿ ಆಗದಿದ್ದರೆ ರಾಜ್ಯದ ಸಾವಿರಾರು ಯುವಕ ಯುವತಿಯರು ಅವಕಾಶ ವಂಚಿತರಾಗುತ್ತಾರೆ. ಏಕೆಂದರೆ ಇದೇ ವರ್ಷ ಜುಲೈ 1 ರಿಂದ ಈ ಖಾಲಿ ಹುದ್ದೆಗಳ ನೇಮಕಾತಿಗೆ ಯು.ಜಿ.ಸಿ ಯ ಹೊಸ ನಿಯಮಾವಳಿಯ ಪ್ರಕಾರ ಪಿ.ಎಚ್‌.ಡಿ. ಪದವಿ ಇರಲೇಬೇಕು. ಈ ಹೊಸ ನಿಯಮವನ್ನು ಜಾರಿಗೊಳಿಸಿದರೆ ಇದುವರೆಗೆ ಇದ್ದ ಅರ್ಹತೆಯನ್ನು ಕಳೆದುಕೊಂಡು ಅವಕಾಶವಂಚಿತರಾಗುತ್ತೇವೆ ಎಂಬ ಭಯ ಇವರನ್ನು ಆವರಿಸಿ ಖಿನ್ನರಾಗಿದ್ದಾರೆ. ಇದಕ್ಕೆ ಕಾರಣರು ಯಾರು? ಯು.ಜಿ.ಸಿ ಯು 2021 ರ ಜುಲೈ ತಿಂಗಳು. 1 ರಿಂದ ಈ ಹುದ್ದೆಗೆ ಪಿ.ಎಚ್‌.ಡಿ ಡಿಗ್ರಿಯನ್ನು ಕಡ್ಡಾಯಗೊಳಿಸುವುದಾಗಿ ಮೂರು ವರ್ಷಗಳ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ ಸರಕಾರವು ಕೋವಿಡ್‌ ಕಾರಣಕ್ಕಾಗಿ ಇದುವರೆಗಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಸಂಕಷ್ಟದ ಕಾರಣ ಅನುಮತಿ ನೀಡುತ್ತಿಲ್ಲ. ಹೀಗಾಗಿ ಕಳೆದ ಅನೇಕ ವರ್ಷಗಳಿಂದ ಇದ್ದ ಎಲ್ಲ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಕಾಯುತ್ತಾ ಕುಳಿತಿರುವ ಈ ಚಾತಕ ಪಕ್ಷಿಗಳನ್ನು ಬರುವ ಜುಲೈ 1 ರಿಂದ ಅನ್ವಯವಾಗುವ ಹೊಸ ನಿಯಮ ಒಂದೇ ಗುಂಡಿಗೆ ಉಡಾಯಿಸಿಬಿಡುತ್ತದೆ. ಈ ಪ್ರತಿಭಾನ್ವಿತ ಅಭ್ಯರ್ಥಿಗಳ ತಪ್ಪು ಏನು? ಇವರನ್ನು ರಕ್ಷಣೆ ಮಾಡುವವರು ಯಾರು?ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯಬಹುದೇ? ಬರೆ ಎಳೆಯುತ್ತಿರುವವರು ಯಾರು? ಸರಕಾರವೋ,ಯು.ಜಿ.ಸಿಯೋ? ಕೊರೊನಾನೋ? ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಯು.ಜಿ.ಸಿ ನಿಗದಿಪಡಿಸಿರುವ ಜುಲೈ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮಾವಳಿಯನ್ನು ಕೊರೊನಾ ಮುಗಿಯುವರೆಗೂ ಮುಂದಕ್ಕೆ ಹಾಕಿ ಈಗ ಹಾಲಿ ಇರುವ ಖಾಲಿ ಹುದ್ದೆಗಳನ್ನು ಇದುವರೆಗೆ ಜಾರಿಯಲ್ಲಿರುವ ನಿಯಮಾನುಸಾರ ಭರ್ತಿ ಮಾಡುವ ತೀರ್ಮಾನ ಕೈಗೊಂಡರೆ ಅನೇಕ ಹೊಂಗನಸುಗಳನ್ನು ಹೊತ್ತು ಜೀವನವೆಂಬ ವೃಕ್ಷದ ರೆಂಬೆ ಕೊಂಬೆಗಳ ಮೇಲೆ ಕಾದು ಕುಳಿತಿರುವ ಈ ಸುಂದರ ಪಕ್ಷಿಗಳು ಆಗಸದಲ್ಲಿ ಸಂತಸದಿಂದ ಹಾರಾಡುವಂತಾಗುತ್ತದೆ! ಇಲ್ಲದಿದ್ದರೆ ಮರದ ಮೇಲೆ ಹಾಯಾಗಿ ಕುಳಿತು ವಿಹರಿಸುತ್ತಿದ್ದ ಕ್ರೌಂಚ ಪಕ್ಷಿಯನ್ನು ತನ್ನ ಬಾಣದಿಂದ ಕೊಂದ ಬೇಡನನ್ನು ವಾಲ್ಮೀಕಿಯು ಶಪಿಸಿದಂತಾಗುತ್ತದೆ! ಎಂದು ಶ್ರೀ ಜಗದ್ಗುರುಗಳವರು ವಿಷಯ ಪೂರ್ಣವಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಪ್ರತಿಭಾವಂತ ಯವಕರ ಅಳಲನ್ನು ಚರ್ಚಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೊಂದಿಗೂ ಕಳೆದ ಮೂರು ದಿನಗಳಿಂದ ಸುದೀರ್ಘ ಚರ್ಚೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದು ಪ್ರಾಧ್ಯಾಪಕರ ಹುದ್ದೆಗಳಗೆ ಪಿಎಚ್‌ಡಿ ಪದವಿಯನ್ನು ಕಡ್ಡಾಯಗೊಳಿಸುವ ಆದೇಶವನ್ನು ಕೊನೆಪಕ್ಷ ಎರಡು ವರ್ಷಗಳ ಕಾಲ ಮುಂದೂಡುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಕಾರ್ಯದರ್ಶಿಗಳಿಗೆ ವಿವರವಾಗಿ ಪತ್ರ ಬರೆದು ಕೋವಿಡ್‌ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಯದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತಹ ಸ್ಥಿತಿಯಲ್ಲಿಲ್ಲ. ಇದರಿಂದ ಅರ್ಹರಾದ ಅಭ್ಯರ್ಥಿಗಳಿಗೆ ಅವರದಲ್ಲದ ಕಾರಣದಿಂದ ತೊಂದರೆಯಾಗಬಾರದು ಎಂಬುದನ್ನುಮನವರಿಕೆ ಮಾಡಿಕೊಂಡು ಯುಜಿಸಿಯು ತನ್ನ ಆದೇಶವನ್ನು ಮುಂದೂಡಬೇಕೆಂದು ತಿಳಿಸಿದ್ದಾರೆ. ನೇಮಕಾತಿಗೆ ಅರ್ಹತೆ ಹೊಂದಿರುವ ಯುವಕ-ಯುತಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತರಳಬಾಳು ಶ್ರೀ ಜಗದ್ಗುರುಗಳಿಗೆ ವಿಜ್ಞಾಪಿಸಿಕೊಂಡಿದ್ದಾರೆ. ಅಂದು ನಡೆದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯೊಂದರಲ್ಲಿ ಪೂಜ್ಯ ಶ್ರೀ ಜಗದ್ಗುರುಗಳವರ ಸಲಹೆಯಂತೆ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಸಕಾರಾತ್ಮಕ ನಿಲುವು ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.*

*ಯುಜಿಸಿ ಕಾರ್ಯದರ್ಶಿಗಳಿಗೆ ಪತ್ರ:*

*ಸ್ವಾತಂತ್ರ್ಯ ಪೂರ್ವದಿದಲೂ ರಾಜ್ಯದ 14 ಜಿಲ್ಲೆಗಳಲ್ಲಿ 270 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನವದೆಹಲಿಯಲ್ಲಿರುವ ಯುಜಿಸಿ ಕಾರ್ಯದರ್ಶಿಗಳಿಗೆ ಪಿಎಚ್‌ಡಿ, ಪದವಿಯನ್ನು ಜುಲೈ ಒಂದರಿಂದ ಜಾರಿಗೊಳಿಸುವುದರಿಂದ ಯುವಕರ ಮೇಲೆ ಆಗುವ ಪರಿಣಾಮಗಳನ್ನು ಕುರಿತು ಪತ್ರವನ್ನು ಸಹ,ಬರೆಯಲಿದ್ದಾರೆ. ಪರೀಕ್ಷೆಗಳಲ್ಲಿ ಅರ್ಹರಾಗಿ ಪ್ರಾಧ್ಯಾಪಕರ ಹುದ್ದೆಯ ಕನಸು ಕಾಣುತ್ತಿದ್ದ ಅಭ್ಯರ್ಥಿಗಳನ್ನು ತಲ್ಲಣಗೊಳಿಸಿದ್ದ ಆದೇಶವು ಪೂಜ್ಯ ಶ್ರೀ ಜಗದ್ಗುರುಗಳವರ ಪ್ರಯತ್ನದಿಂದ ಯಶಸ್ಸು ಕಾಣಲಿರುವ ಹಾದಿಯಲ್ಲಿರುವುದರಿಂದ ಅರ್ಜಿ ಸಲ್ಲಿಸಲು ತುದಿಗಾಲಲ್ಲಿ ನಿಂತಿರುವ ಸಾವಿರಾರು ಯುವ ಪ್ರತಿಭೆಗಳು ಧನ್ಯತಾ ಭಾವದ ಸಂತೋಷ ವ್ಯಕ್ತ ಪಡಿಸಿದ್ದಾರೆ.*

[t4b-ticker]

You May Also Like

More From Author

+ There are no comments

Add yours