ಪಂಚ ರಾಜ್ಯ ಚುನಾವಣೆ ಫಲಿತಾಂಶ ನಾಯಕತ್ವ ಬದಲಾವಣೆ ಮಾಡುತ್ತಾ, ಅಥವಾ ಭಿನ್ನಮತ ಎದುರಿಸುತ್ತಾ ಸಂಪೂರ್ಣ ವರದಿ.

 

ನವದೆಹಲಿ: ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ಹೀನಾಯ ಹಿನ್ನಡೆಯ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಬದಲಾವಣೆ ಮಾತು ಮತ್ತೆ ಕೇಳಿ ಬರಲಾರಂಭಿಸಿದೆ.

ಅಧಿಕಾರದಲ್ಲಿದ್ದ ಪಂಜಾಬ್ ರಾಜ್ಯವನ್ನು ಕಳೆದುಕೊಳ್ಳುವ ಜೊತೆಗೆ ಅಧಿಕಾರ ಹಿಡಿಯಬಹುದಾಗಿದ್ದ ಉತ್ತರಾಖಂಡ ರಾಜ್ಯವನ್ನೂ ಕಳೆದುಕೊಂಡಿರುವ ಕಾಂಗ್ರೆಸ್​​ಗೆ ನಾಯಕತ್ವ ಬದಲಾವಣೆ ಮಾತ್ರ ಪರಿಹಾರ ಎಂಬ ಮಾತು ಕೇಳಿ ಬರುತ್ತಿವೆ.

ಆದರೆ, ಈ ವಿಚಾರ ಹಿಂದೆ ಕೂಡ ಕೇಳಿ ಬಂದಿತ್ತು.

ಅಸಮಾಧಾನ ವ್ಯಕ್ತವಾಗಿ ವರ್ಷ: ಕಾಂಗ್ರೆಸ್​​ನ ಜಿ-23 ನಾಯಕರ ಅಸಮಾಧಾನ ಅದಾಗಲೇ ಹೊರಬಿದ್ದು, ವರ್ಷವಾಗಿದೆ. ಆದರೆ, ಹಲವು ರಾಜ್ಯ ಕಾಂಗ್ರೆಸ್ ನಾಯಕರು ಈಗಲೂ ನಾಯಕತ್ವ ಬದಲಾವಣೆಯನ್ನು ಒಪ್ಪುತ್ತಿಲ್ಲ. ಇದರಿಂದ ಬದಲಾವಣೆ ಪಟ್ಟು ಅಷ್ಟೇನು ತಾರ್ಕಿಕ ಹಂತ ತಲುಪಿಲ್ಲ. ಪ್ರತಿ ಬಾರಿ ಕಾಂಗ್ರೆಸ್​ಗೆ ಹಿನ್ನಡೆ ಆದಾಗಲೂ ನಾಯಕತ್ವ ಬದಲಾವಣೆ ಮಾತು ಕೇಳಿಬರುತ್ತಲೇ ಇದೆ.

ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆಗೆ ಬೇಸರಗೊಂಡು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಬೇಕೆಂಬ ಒತ್ತಡ ಕೇಳಿ ಬರುತ್ತಿರುವ ನಡುವೆಯೇ ಸೂಕ್ತ ಸಮಯಾವಕಾಶ ದೊರಕುತ್ತಿಲ್ಲ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯ ಹಿನ್ನೆಲೆ ಸಕ್ರಿಯವಾಗಿ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿಲ್ಲ. ಸಂಪೂರ್ಣ ದುರ್ಬಲವಾಗಿರುವ ಕಾಂಗ್ರೆಸ್ ಸದ್ಯ ರಾಜಸ್ತಾನ ಹಾಗೂ ಛತ್ತೀಸ್​ಗಢ ಹೊರತು ಪಡಿಸಿದರೆ ಉಳಿದ್ಯಾವ ರಾಜ್ಯದಲ್ಲಿಯೂ ಸ್ವತಂತ್ರ ಅಸ್ತಿತ್ವ ಹೊಂದಿಲ್ಲ. ಹೀಗಿರುವಾಗ ಪಕ್ಷದ ರಾಷ್ಟ್ರೀಯ ನಾಯಕತ್ವ ಬದಲಾವಣೆ ಕೂಗು ಕೇಳಿ ಬರಬೇಕಾಗಿರುವುದು ಸಹಜ.

ಪ್ರಿಯಾಂಕಾ ಪ್ರಯತ್ನ ಕಾಣದ ಫಲ: ಗಾಂಧಿ ಕುಟುಂಬದ ನಿರೀಕ್ಷೆಯ ನಾಯಕಿ ಪ್ರಿಯಂಕಾ ಗಾಂಧಿ ಕಳೆದ ಒಂದೂವರೆ ವರ್ಷದಿಂದ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವ ಯತ್ನ ನಡೆಸಿದ್ದರು. ಆದರೆ, ಪಕ್ಷದ ಪ್ರಾಬಲ್ಯ ಇನ್ನಷ್ಟು ಕುಸಿದಿದೆ. 403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಯಲ್ಲಿ ಕೇವಲ 2 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಏಳನೇ ಸ್ಥಾನ ತಲುಪಿದ್ದು, ದುರಂತ ಅಂದರೆ ಕಳೆದ ಸಾರಿ ಗೆದ್ದಿದ್ದಕ್ಕಿಂತ 5 ಸ್ಥಾನ ಕಡಿಮೆ ಗಳಿಸಿದೆ.

ಅಲ್ಲಿಗೆ ಬಹು ನಿರೀಕ್ಷೆ ಮೂಡಿಸಿದ್ದ ಪ್ರಿಯಂಕಾ ಗಾಂಧಿಯವರನ್ನೂ ಮುಂಚೂಣಿಯ ನಾಯಕಿಯನ್ನಾಗಿ ಪರಿಚಯಿಸುವ ಅವಕಾಶಕ್ಕೆ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷಗಾದಿಗೆ ಏರುವುದು ಅನುಮಾನವಾಗಿದ್ದು, ಒಟ್ಟಾರೆ ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾತ್ರ ಪರಿಹಾರ ಎನ್ನುವ ಮಾತು ಹಿರಿಯ ಕಾಂಗ್ರೆಸ್ ನಾಯಕರಿಂದ ವ್ಯಕ್ತವಾಗುತ್ತಿದೆ.

ರಾಷ್ಟ್ರೀಯ ಕಾರ್ಯಕಾರಿಣಿಗೆ ಹೆಚ್ಚಿದ ಒತ್ತಡ: ಗಾಂಧಿ ಕುಟುಂಬದ ಆಪ್ತರೆಂದೇ ಗುರುತಿಸಿಕೊಂಡಿದ್ದ ಗುಲಾಂ ನಬಿ ಆಜಾದ್ ಅವರೇ ಇದೀಗ ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ದನಿ ಎತ್ತಿದ್ದಾರೆ. ಪಂಚ ರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಇವರ ನಿವಾಸದಲ್ಲೇ ಜಿ-23 ನಾಯಕರ ಸಭೆ ನಡೆದಿದೆ. ಸಭೆಯಲ್ಲಿ ಸಂಸದ ಮನೀಶ್ ತಿವಾರಿ, ರಾಜ್ಯಸಭೆ ಕಾಂಗ್ರೆಸ್ ಪಕ್ಷದ ಉಪ ನಾಯಕ ಆನಂದ್ ಶರ್ಮಾ, ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಮತ್ತಿತರರು ಹಾಜರಿದ್ದರು. ಈಗಾಗಲೇ ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ದನಿ ಎತ್ತಿರುವ ಇವರು ಆದಷ್ಟು ಬೇಗ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸುವಂತೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.

ಎಲ್ಲರೂ ದುರ್ಬಲರಾಗಿರುವ ಸಂದರ್ಭದಲ್ಲಿ ಒತ್ತಡ ಹೇರಿ ಕಾಂಗ್ರೆಸ್​ಗೆ ಹಲವು ದಶಕಗಳ ಬಳಿಕ ಹೊಸ ನಾಯಕತ್ವ ನೀಡುವ ಆಶಯ ಹಲವರದ್ದಾಗಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ನಾಯಕರೂ ಸೇರಿದಂತೆ ಹಲವು ರಾಜ್ಯದ ನಾಯಕರು ಇದನ್ನು ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆ ರಾಷ್ಟ್ರೀಯ ನಾಯಕತ್ವ ಬದಲಾವಣೆ ಪಟ್ಟು ಎಷ್ಟು ಫಲ ಕೊಡಲಿದೆ ಎನ್ನುವುದು ಕಾದು ನೋಡಬೇಕಿದೆ.

ಹೊಸ ಪಕ್ಷಗಳೆದುರು ದುರ್ಬಲವಾದ ರಾಷ್ಟ್ರೀಯ ಪಕ್ಷ: ಒಂದೆಡೆ ಕಾಂಗ್ರೆಸ್ ಎದುರು ಬಿಜೆಪಿ, ಆಮ್ ಆದ್ಮಿ ಪಕ್ಷ, ಬಿಎಸ್​ಪಿ, ಎಸ್ಪಿ, ಸಿಪಿಐಎಂ ಪಕ್ಷಗಳು ಚಿಗುರಿಕೊಳ್ಳುತ್ತಿವೆ. ಹಲವು ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಸವಾಲು ಹಾಕಿ ಅಧಿಕಾರಕ್ಕೆ ಬರುವ ಮಟ್ಟಿಗೆ ಇವು ಪ್ರಬಲವಾಗುತ್ತಿವೆ. ಹೀಗಿರುವಾಗ ಒಂದು ರಾಷ್ಟ್ರೀಯ ಪಕ್ಷವಾಗಿ, ದೇಶದಲ್ಲಿ ಅತಿ ಹೆಚ್ಚು ವರ್ಷ ಆಡಳಿತ ನಡೆಸಿ, ಇಂದು ಅತ್ಯಂತ ದುಬರ್ಲವಾಗಿ ಗೋಚರಿಸಲು ಕಾರಣವೇನೆಂದು ಪಕ್ಷದ ನಾಯಕರು ಹುಡುಕಬೇಕಿದೆ. ಇದಕ್ಕೆ ನಾಯಕತ್ವ ಬದಲಾವಣೆಯೊಂದೇ ಪರಿಹಾರ ಎನ್ನುವ ಮಾತನ್ನು ಹಲವರು ಆಡುತ್ತಿದ್ದಾರೆ. ಇದಕ್ಕೆ ದೇಶದ ಕಾಂಗ್ರೆಸ್ ನಾಯಕರೆಲ್ಲರ ಅಭಿಪ್ರಾಯ ಏನು ಬರಲಿದೆ ಎನ್ನುವುದನ್ನು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours