ಕೋವಿಡ್ ನಂತರವೂ ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕದ ಮುನ್ನಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

 

 

ಬೆಂಗಳೂರು:

ದೇಶದ ಆರ್ಥಿಕತೆಗೆ ರಾಜ್ಯವು ಮಹತ್ತರ ಕೊಡುಗೆ ನೀಡುತ್ತಿದ್ದು, ಕೋವಿಡ್ ನಂತರವೂ ಮುಂಚೂಣಿಯನ್ನು ಕಾಯ್ದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ, ವಿವಿಧ ಅಂಶಗಳ ಕುರಿತು ರಾಜ್ಯದ ನಿಲುವನ್ನು ಮಂಡಿಸಿದರು.

ರಾಜ್ಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ನುಡಿಯ ಮುಖ್ಯಾಂಶಗಳು

1. ಕೋವಿಡ್ 19 ರ ನಂತರ ಹೂಡಿಕೆಗೆ ಉತ್ತೇಜನ ನೀಡುವ ಹಾಗೂ ಆರ್ಥಿಕತೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯಗಳನ್ನು ಪಡೆದಿದ್ದಾರೆ.

2. ಕೋವಿಡ್ 19ರ ನಂತರ ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಸಹಯೋಗದ ಕುರಿತು ಪ್ರಸ್ತಾಪಿಸಲಾಯಿತು.

3. ಕೋವಿಡ್ 19ರ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿರಮಿಸದೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೂಡಿಕೆ ಆಕರ್ಷಣೆಗೆ ಸಂಬಂಧಿಸಿದಂತೆ ನಿರಂತರವಾಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದಿದೆ ಎಂಬುದನ್ನು ಅವರ ಗಮನಕ್ಕೆ ತರಲಾಯಿತು.

4. ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲು ಕೈಗೊಳ್ಳಲಾದ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಅಫಿಡವಿಟ್ ಆಧಾರಿತ ಅನುಮೋದನೆಯ ಪ್ರಕ್ರಿಯೆ ಮೊದಲಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

5. ದೇಶದ ಆರ್ಥಿಕತೆಗೆ ರಾಜ್ಯ ಮಹತ್ತರ ಕೊಡುಗೆ ನೀಡುತ್ತಿದ್ದು, ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ವಲಯ ಹಾಗೂ ಪರಿಣತ ಮಾನವ ಸಂಪನ್ಮೂಲಗಳೂ ಸಹ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರಲು ಪ್ರಮುಖ ಕಾರಣಗಳಾಗಿವೆ.

6. ಇದನ್ನು ಇನ್ನಷ್ಟು ಹೆಚ್ಚಿಸಲು 2022ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.

7. ರಾಜ್ಯದಲ್ಲಿ ಬೀದರ್ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿದ್ದು, ಶಿವಮೊಗ್ಗ, ರಾಯಚೂರು, ವಿಜಯಪುರ, ಕಾರವಾರ ವಿಮಾನ ನಿಲ್ದಾಣಗಳು 2022ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

8. 9 ರೈಲ್ವೆ ಯೋಜನೆಗಳು ಹಾಗೂ ಸಾಗರಮಾಲಾ ಯೋಜನೆಯಡಿ 4 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.

9. ಭಾರತ ಸರ್ಕಾರದಿಂದ ಈ ಕೆಳಕಂಡ ವಿಷಯಗಳ ಕುರಿತು ಸಹಕಾರ ಕೋರಲಾಯಿತು:

a. ಹೂಡಿಕೆಗೆ ಆಸಕ್ತಿ ತೋರುವ ಕಂಪೆನಿಗಳ ಕುರಿತ ಮಾಹಿತಿಯ ಪಾರದರ್ಶಕ ಹಂಚಿಕೆ.

b. ವಿವಿಧ ಯೋಜನೆಗಳಿಗೆ ಪರಿಸರ ಮತ್ತು ಅರಣ್ಯ ಸಚಿವಾಲಯಗಳ ಅನುಮೋದನೆ ನೀಡುವ ಕುರಿತು ಒಂದು ಸ್ಪಷ್ಟ ನೀತಿಯ ಅಗತ್ಯವಿದೆ.

c. ವಿಶೇಷ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹಕಗಳನ್ನು ನೀಡುವ ಅಗತ್ಯವಿದೆ.

d. ವಿವಿಧ ವಿಶೇಷ ವಿತ್ತ ವಲಯಗಳನ್ನು ಟೌನ್ ಷಿಪ್ ಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಕಾಯ್ದೆಗಳಿಗೆ ತಿದ್ದುಪಡಿ ಅಗತ್ಯವಿದೆ.

e. ಹೊಸ ಉದ್ಯಮ ವಲಯಗಳಾದ ವಿದ್ಯುತ್ ವಾಹನಗಳು, ಮೆಡ್-ಟೆಕ್, ಎಲ್ ಓ ಟಿ ಮೊದಲಾದ ವಲಯಗಳಿಗೆ ಹಣಕಾಸು ನೆರವು ಒದಗಿಸಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕಾಗಿದೆ.

f. ನ್ಯಾಯಾಲಯದ ಹೊರಗೆ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ವಿವಾದ ಪರಿಹಾರ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

g. ಕರಾವಳಿ ನಿಯಂತ್ರಣ ವಲಯದ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡುವ ಮೂಲಕ ಕರಾವಳಿ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲು ಮನವಿ ಮಾಡಲಾಗಿದೆ.

h. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೂಡಿಕೆ ಆಕರ್ಷಿಸಲು ಹೆಚ್ಚುವರಿ ಪ್ರೋತ್ಸಾಹಕಗಳ ಅಗತ್ಯವಿದೆ.

i. ಜಿಲ್ಲಾ ಗಣಿಗಾರಿಕೆ ನಿಧಿಯ ಒಂದು ಭಾಗವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಅದಿರು ಸಾಗಾಣಿಕೆಯಿಂದ ಇತರ ಜಿಲ್ಲೆಗಳ ಮೂಲಸೌಕರ್ಯಕ್ಕೆ ಆಗಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗುವುದು.

[t4b-ticker]

You May Also Like

More From Author

+ There are no comments

Add yours