ಕೋಟೆ ನಾಡಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

 

ಚಿತ್ರದುರ್ಗ,ಡಿ.20: ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ನಗರದ ಹೊಳಲ್ಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಟನೆಯಲ್ಲಿ ಬಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಎಂಇಎಸ್  ಸಂಘಟನೆಯ ಪುಂಡರ ವಿರುದ್ದ ಘೋಷಣೆಗಳನ್ನು ಕೂಗಿದರು.ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಆದರೆ ಆ ಪ್ರದೇಶದಲ್ಲಿ ಎಂಇಎಸ್ ಸಂಘಟನೆ ಹೆಸರಲ್ಲಿ ಕೆಲ ಕಿಡಿಗೇಡಿಗಳು ಮಹಾರಾಷ್ಟ್ರ ಮತ್ತು ಕನ್ನಡ ನಾಡಿನ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ನಿರಂತರ ಮಾಡುತ್ತಿರುವುದು ಆತಂಕದ ವಿಷಯವಾಗಿದೆ. ಈಗಾಗಲೇ ನೂರಾರು ಬಾರಿ ಕನ್ನಡಿಗರ ಭಾವನೆಯನ್ನು ಕೆರಳಿಸುವ ಘಟನೆ ನಿರಂತರ ಜರುಗುತ್ತಿದೆ. ಆದರೂ ನಮ್ಮ ರಾಜ್ಯದ ಜನಪ್ರತಿನಿಧಿಗಳು ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಪ್ರಯತ್ನವನ್ನೇ ಮಾಡದಿರುವುದು ದುರಂತ. ಈ ಹಿನ್ನೆಲೆಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ, ದೇಶಭಕ್ತ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ದುರ್ಘಟನೆ ಜರುಗಿದೆ. ಆದ್ದರಿಂದ ಇಂತಹ ಘಟನೆಗೆ ಶಾಶ್ವತ ಕಡಿವಾಣ ಹಾಕಲೂ ಎರಡು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರ ಸಭೆಯನ್ನು ಪ್ರಧಾನಮಂತ್ರಿ ನೇತೃತ್ವದಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಗಡಿ ಪ್ರದೇಶದಲ್ಲಿ ಸರ್ಕಾರಿ, ಖಾಸಗಿ, ವ್ಯಾಪಾರಸ್ಥರು ಕಡ್ಡಾಯವಾಗಿ ಪ್ರಥಮ ಆದ್ಯತೆಯಲ್ಲಿ ಕನ್ನಡದಲ್ಲಿ ಫಲಕ ಹಾಕುವಂತೆ ಆದೇಶಿಸಿ, ಅನುಷ್ಠಾನಗೊಳಿಸಬೇಕು. ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಬೃಹತ್ ಪ್ರತಿಮೆ ಒಂದು ತಿಂಗಳ ಅವಧಿಯಲ್ಲಿ ಸ್ಥಾಪನೆ ಮಾಡಲು ಕ್ರಮಕೈಗೊಳ್ಳಬೇಕು. ಕನ್ನಡ ನಾಡು ಹಾಗೂ ದಕ್ಷಿಣ ಭಾರತದ ಮಹಾನ್ ದಾರ್ಶನಿಕರ ಕುರಿತು ದೇಶವನ್ನಾಳುವ ಉತ್ತರ ಭಾರತದವರಿಗೆ ಪರಿಚಯವೇ ಇರುವುದಿಲ್ಲ. ಕೇವಲ ಉತ್ತರ ಭಾರತದ, ಹಿಂದಿ ಭಾಷೆ ಬಲಾಢ್ಯದ ಪ್ರದೇಶಗಳ ದಾರ್ಶನಿಕರನ್ನು ವಿಜೃಂಭಿಸಲಾಗುತ್ತದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಮ್ಮ ನಾಡಿನಲ್ಲೂ ರಾಯಣ್ಣ, ಚೆನ್ನಮ್ಮ, ಒನಕೆ ಓಬವ್ವ, ಮದಕರಿ ನಾಯಕ ಹೀಗೆ ನೂರಾರು ಸಂಖ್ಯೆಯಲ್ಲಿ ದೇಶಭಕ್ತರು, ನಾಡಿಗೆ ಸೇವೆ ಸಲ್ಲಿಸಿದವರು ಇದ್ದಾರೆ. ಇಂತಹವರ ಕುರಿತು ದೇಶವನ್ನಾಳುವ ಪ್ರತಿನಿಧಿಗಳ ಗಮನಸೆಳೆಯಲು ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.ಬಹುಮುಖ್ಯವಾಗಿ ಲೋಕಸಭೆ ಬಳಿ ತಾಯಿ-ಮಗನಂತೆ ದೇಶ ರಕ್ಷಣೆಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕೆಚ್ಚೆದೆಯ ವೀರಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ತರಬೇಕು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಭಗ್ನಗೊಳಿಸುತ್ತಿದ್ದಂತೆ ಇತ್ತ ಕೆಲ ಕಿಡಿಗೇಡಿಗಳು ಶಿವಾಜಿ ಪ್ರತಿಮೆಗೆ ಮಸಿ ಬಳಿಯುವ ಮೂಲಕ ಇಬ್ಬರು ಮಹಾನ್ ನಾಯಕರ ಗೌರವಕ್ಕೆ ಚ್ಯುತಿ ತರುವ ಕೆಲಸ ಆಗಿದೆ. ಈ ರೀತಿ ಬಾಂಧವ್ಯಕ್ಕೆ ಧಕ್ಕೆ ತಂದು ದೇಶದಲ್ಲಿ ಶಾಂತಿಗೆ ಆಂತರಿಕ ಧಕ್ಕೆ ತರುವವರ ವಿರುದ್ಧ ಸರ್ಕಾರ ಗುಂಡಾ ಕಾಯ್ದೆ ಬಳಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು‌ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಗೊಳ್ಳಿ ರಾಯಣ್ಣ ವೇದಿಕೆಯ ಆನಂದ್, ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ್, ಜಯ ಕರ್ನಾಟಕ ವೇದಿಕೆಯ ರಾಜೇಂದ್ರ, ಅರುಣ್ ಕುಮಾರ್, ಸಂತೋಷ್, ಸುನೀಲ್ ಕುಮಾರ್, ಅಭಿಲಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours