ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡುತ್ತೇವೆ:ಮೀನಳ್ಳಿ ತಾಯಣ್ಣ

 

ಚಿತ್ರದುರ್ಗ: ಪಕ್ಷ ಸಂಘಟನೆಗೆ ನೀಯತ್ತಾಗಿ ಕೆಲಸ ಮಾಡಿದವರ ಹೆಸರುಗಳನ್ನು ಪಕ್ಷದ ವರಿಷ್ಠರ ಮುಂದಿಡುತ್ತೇನೆಂದು ಜೆಡಿಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಮೀನಳ್ಳಿ ತಾಯಣ್ಣ ಹೇಳಿದರು.

ವಿಧಾನಸಭೆ ಚುನಾವಣೆ ದೃಷ್ಠಿಯಿಂದ ಜೆಡಿಎಸ್. ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೀನಳ್ಳಿ ತಾಯಣ್ಣ ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆಯಿಟ್ಟು ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ. ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ರಾಜ್ಯದಲ್ಲಿ ಸಂಚರಿಸತ್ತಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಚಳ್ಳಕೆರೆ ಹಾಗೂ ಹೊಸದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಹಾಗಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಂಡರೆ ಪ್ರಯೋಜನವಿಲ್ಲ. ಮನೆ ಮನೆಗೆ ತಿರುಗಿ ಜೆಡಿಎಸ್.ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ತಿರುಗಾಡಲು ಸಿದ್ದನಿದ್ದು, ದಿನಾಂಕ ನಿಗಧಿಪಡಿಸಿ. ಜನ ಮತ ಹಾಕಲು ರೆಡಿಯಿದ್ದಾರೆ. ಅಭ್ಯರ್ಥಿಗಳು ಜನರ ಬಳಿ ಹೋಗುತ್ತಿಲ್ಲ ಎನ್ನುವ ವಿಚಾರವನ್ನು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಗಮನಕ್ಕೆ ತಂದಿದ್ದೇನೆಂದರು.
ತಾಲ್ಲೂಕು, ಬೂತ್, ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕವಾಗಿದೆ ಎಂದುಕೊಂಡಿದ್ದೇನೆ. ಎಲ್ಲೆಲ್ಲಿ ಆಗಿಲ್ಲವೋ ಅಲ್ಲಿ ಇನ್ನೊಂದು ವಾರದೊಳಗೆ ಪದಾಧಿಕಾರಿಗಳ ನೇಮಕ ಪೂರ್ಣಗೊಳಿಸುವಂತೆ ಸೂಚಿಸಿದರು.
ಜೆಡಿಎಸ್. ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡುತ್ತ ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುವುದರಿಂದ ಆರು ತಾಲ್ಲೂಕಿನ ಅಧ್ಯಕ್ಷರುಗಳು ಇನ್ನೆರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದರೆ ಜಿಲ್ಲೆಗೆ ಉಸ್ತುವಾರಿಯಾಗಿರುವ ಮೀನಳ್ಳಿ ತಾಯಣ್ಣರವರಿಗೆ ವರದಿ ನೀಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ವಿನಂತಿಸಿದರು.
ಜಿಲ್ಲೆಯಲ್ಲಿ ಪಕ್ಷ ಸಂಕಷ್ಠದಲ್ಲಿದೆ. ಪಕ್ಷದ ವರಿಷ್ಠರು ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಲಿ ಅವರ ಪರವಾಗಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಕೆಲಸ ಮಾಡಬೇಕು. ಚಳ್ಳಕೆರೆ ಕ್ಷೇತ್ರಕ್ಕೆ ರವೀಶ್ ಹಾಗೂ ಹೊಳಲ್ಕೆರೆಗೆ ತಿಪ್ಪೇಸ್ವಾಮಿ ಇವರುಗಳನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇನ್ನು ಉಳಿದಂತೆ ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮುರು, ಹೊಸದುರ್ಗಕ್ಕೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಜನತಾಪಕ್ಷದ ಹೆಬ್ಬಾಗಿಲಿನಂತಿರುವ ಹಿರಿಯೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸುವ ಸಂಬಂಧ ಕುಮಾರಣ್ಣನವರು ಆರು ಸಾರಿ ಸಭೆ ನಡೆಸಿದ್ದಾರೆ. ಇದೇ ತಿಂಗಳ 24 ಇಲ್ಲವೆ 25 ರೊಳಗೆ ಅಭ್ಯರ್ಥಿಗಳನ್ನು ಘೋಷಿಸುವಂತೆ ಕೇಳಿಕೊಂಡಿದ್ದೇನೆ. ಕಾಂಗ್ರೆಸ್‍ನಿಂದ ಯಾರು, ಬಿಜೆಪಿ.ಯಿಂದ ಯಾರು ಅಭ್ಯರ್ಥಿಗಳಾಗುತ್ತಾರೆಂದು ಕಾಯುತ್ತ ಕುಳಿತರ ಆಗಲ್ಲ. ನಲವತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ್ದೇನೆ. ರಾಷ್ಟ್ರೀಯ ಪಕ್ಷಗಳನ್ನು ಸೋಲಿಸುವ ತಂತ್ರಗಾರಿಕೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆಂಬ ನಂಬಿಕೆಯಿದೆ. ಇಂತಹವರಿಗೆ ಟಿಕೇಟ್ ಕೊಡಿ ಎಂದು ವರಿಷ್ಠರುಗಳಿಗೆ ಶಿಫಾರಸ್ಸು ಮಾಡುವ ಸಣ್ಣತನದ ರಾಜಕಾರಣಿ ನಾನಲ್ಲ ಎಂದು ಸಮಾಲೋಚನಾ ಸಭೆಯಲ್ಲಿ ಸ್ಪಷ್ಠಪಡಿಸಿದರು.
ಚುನಾವಣೆ ಸಂಬಂಧ ವರಿಷ್ಠರುಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಪಂಚರತ್ನ ರಥಯಾತ್ರೆ ಇನ್ನು ಜಿಲ್ಲೆಗೆ ಆಗಮಿಸಿಲ್ಲ. ವೈಮನಸ್ಸು, ದ್ವಂದ್ವ ನಿಲುವುಗಳು ಬೇಡ. ಮಡಿವಂತಿಕೆ ಬಿಟ್ಟು ಪಕ್ಷದ ಸೇನಾನಿಗಳಂತೆ ಕೆಲಸ ಮಾಡಬೇಕಿದೆ. ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ಸೂಕ್ಷ್ಮವಾಗಿ ನಿಮ್ಮ ಅಭಿಪ್ರಾಯಗಳನ್ನು ಉಸ್ತುವಾರಿ ಮೀನಳ್ಳಿ ತಾಯಣ್ಣರವರಿಗೆ ತಿಳಿಸಿ ಎಂದು ಕಾರ್ಯಕರ್ತರಲ್ಲಿ ಕೋರಿದರು.
ಜೆಡಿಎಸ್.ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ತಂತ್ರಗಾರಿಕೆ ಮಾಡುತ್ತವೆ. ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚಲು ಬಿಡುವುದಿಲ್ಲ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತರು ಇಲ್ಲವೇ ಲಿಂಗಾಯಿತರು ಯಾರಾದರೂ ಸ್ಪರ್ಧಿಸಲು ಮುಂದೆ ಬಂದರೆ ನಾನು ತ್ಯಾಗ ಮಾಡಿ ಅವರ ಪರವಾಗಿ ದುಡಿಯುತ್ತೇನೆ. ಯಾರು ಇಲ್ಲವೆ ಇಲ್ಲ ಎನ್ನುವ ಸಂದರ್ಭ ಬಂದಾಗ ನಾನೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಲ್ಲರೂ ಸಹಕಾರಿ ಕೊಡಿ ಎಂದು ವಿನಂತಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವುದನ್ನು ತಿಳಿಸಲು ಮಾ.5 ರವರೆಗೆ ಕಾಲಾವಕಾಶ ಬೇಕು. ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಕ್ಷೇತ್ರಕ್ಕೆ ವಿಶೇಷ ಗಮನ ಕೊಡಿ ಎಂದು ಉಸ್ತುವಾರಿ ಎದುರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರಿಯೂರು ವಿಧಾನಸಭಾ ಕ್ಷೇತ್ರದ ಪ್ರಬಲ ಸ್ಪರ್ಧಾಕಾಂಕ್ಷಿ ಎಂ.ಜಯಣ್ಣ ಮಾತನಾಡಿ ನಲವತ್ತು ವರ್ಷದಿಂದ ಪಕ್ಷಕ್ಕೆ ಕತ್ತೆ ದುಡಿದಂತೆ ದುಡಿದಿದ್ದೇನೆ. ಎತ್ತಿನಂತೆ ನನ್ನಿಂದ ಬೇಸಾಯ ಮಾಡಿಸಿಕೊಂಡಿದ್ದೀರಿ. ನನ್ನ ಸಾಮಥ್ರ್ಯ ಏನು ಎಂದು ನಿಮಗೆ ಗೊತ್ತಿದೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಿದ್ದೇನೆ. ನನ್ನ ಹೆಸರನ್ನು ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವರುಗಳಿಗೆ ನೀವೆ ಶಿಫಾರಸ್ಸು ಮಾಡಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರರವರನ್ನು ತಾಕೀತು ಮಾಡಿದರು.
ಹದಿನೇಳು ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಜೆಡಿಎಸ್. ಅಧ್ಯಕ್ಷನಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಕೇಳಿಕೊಂಡಿದ್ದೇನೆ. ಅದಕ್ಕಾಗಿ ನನ್ನ ಪರ ವರಿಷ್ಠರುಗಳ ಮುಂದೆ ವಕಾಲತ್ತು ವಹಿಸಿ. ನನ್ನಿಂದ ದುಡಿಸಿಕೊಂಡಿರುವವರು ನೀವು ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೇಟ್ ಕೊಡಬೇಡಿ. ಎ.ಕೃಷ್ಣಪ್ಪ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಪ್ಪತ್ತು ಸಾವಿರ ಮತಗಳನ್ನು ಪಡೆದು ಸೋತು ನಂತರ ನಮ್ಮ ಪಕ್ಷದ ಕೆಲವು ಕಾರ್ಯಕರ್ತರನ್ನು ಹಿಂದೆ ಹಾಕಿಕೊಂಡು ಓಟ ಕಿತ್ತರು. 2018 ರ ಚುನಾವಣೆಯಲ್ಲಿ ಅವರ ಪುತ್ರಿ ಪೂರ್ಣಿಮ ಇಲ್ಲಿಂದ ಸ್ಪರ್ಧಿಸಿ ಈಗ ಶಾಸಕಿಯಾಗಿದ್ದಾರೆಂದರೆ ನಮ್ಮವರೆ ಕೆಲವರು ಕೈಜೋಡಿಸಿದ್ದಾರೆ. ಅದಕ್ಕಾಗಿ ಹೊರಗಿನವರಿಗೆ ಕೊಟ್ಟರೆ ಅನಾಹುತವಾಗುತ್ತೆ. ಸ್ಥಳೀಯರೆ ಸ್ಪರ್ಧಿಸಲು ಅವಕಾಶ ಒದಗಿಸಿ. ನಾನು ಸಾವಿರಾರು ಕೋಟಿಗಳ ಒಡೆಯಲ್ಲ. ಆದರೆ ನಿಮ್ಮ ನಿರೀಕ್ಷೆಗೂ ಮೀರಿ ಚುನಾವಣೆ ಆಡುತ್ತೇನೆ. ನೊಂದು ಬೆಂದು ಕಾರ್ಯಕರ್ತರು ಹಾಳಾಗಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್.ಉಳಿಯಬೇಕಾದರೆ ದುಡಿದವರಿಗೆ ಮನ್ನಣೆ ಕೊಡಿ ಎಂದು ಉಸ್ತುವಾರಿ ಮೀನಳ್ಳಿ ತಾಯಣ್ಣ ಹಾಗೂ ಜಿಲ್ಲಾಧ್ಯಕ್ಷ ಡಿ.ಯಶೋಧರ ಇವರುಗಳ ಗಮನ ಸೆಳೆದರು.
ಜೆಡಿಎಸ್,ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿ.ಗೀತ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸಣ್ಣತಿಮ್ಮಪ್ಪ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಬಿ.ಟಿ.ತಿಪ್ಪೇಸ್ವಾಮಿ, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ಯರಗುಂಟಪ್ಪ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಗಣೇಶ್‍ಮೂರ್ತಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಹನುಮಂತರಾಯ, ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್‍ಜೋಗಿ, ಗುರುಸಿದ್ದಪ್ಪ ಜೆ.ಎನ್.ಕೋಟೆ, ಮೂಡಲಗಿರಿಯಪ್ಪ, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಇನ್ನು ಅನೇಕರು ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours