ವಾಲ್ಮೀಕಿ ನಾಯಕ ಮಹಾಸಭಾದಿಂದ ವಿಜಯನಗರ ಸಂಸ್ಥಾಪನಾ ದಿನಾಚರಣೆ

 

ಬೆಂಗಳೂರು, ಏ.18: ವಿಜಯನಗರ ಸಂಸ್ಥಾನನ ವಂಶಸ್ಥರು ಇನ್ನೂ ಇದ್ದಾರೆ. ಅವರೆಲ್ಲ ವಾಲ್ಮೀಕಿ ನಾಯಕ ಸಮಾಜದವರು. ಅವರುಗಳ ಈಗಿನ ಸ್ಥಿತಿಗತಿಯ ಬಗ್ಗೆ ಸರ್ಕಾರ ಅಧ್ಯಯನ ನಡೆಸಬೇಕಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಆಗ್ರಹಿಸಿದೆ.

ಬೆಂಗಳೂರಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಲ್ಲಿಂದು ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಹಕ್ಕ-ಬುಕ್ಕರು, ಶ್ರೀಕೃಷ್ಣದೇವರಾಯ, ಮದಕರಿ ನಾಯಕ, ಆದಿಕವಿ ಮಹರ್ಷಿ ವಾಲ್ಮೀಕಿ, ಎಲ್.ಜಿ.ಹಾವನೂರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಕೆಂಪರಾಮಯ್ಯ ಹಾಗೂ ಕಾರ್ಯದರ್ಶಿ ಡಾ. ಡಿ.ಕೆ. ಸಣ್ಣನಾಯಕ್ ಆಗ್ರಹಿಸಿದರು.

ವಾಲ್ಮೀಕಿ ನಾಯಕ ಸಮುದಾಯಕ್ಕೆ ತಮ್ಮದೇ ಆದ ಇತಿಹಾಸ ಇದೆ. ವಿಜಯನಗರ, ಕೆಳದಿ, ಚಿತ್ರದುರ್ಗದ ಮದಕರಿ ಕೋಟೆ ಹೀಗೆ ಹಲವು ಸಂಸ್ಥಾನಗಳನ್ನು ಕಟ್ಟಿ ರಾಜ್ಯಭಾರ ಮಾಡಿದ ಕೀರ್ತಿ ವಾಲ್ಮೀಕಿ ಸಮುದಾಯಕ್ಕಿದೆ. ಅದೇ ರೀತಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಇಂದು ವಿಶ್ವಕ್ಕೇ ಮಾದರಿ ಗ್ರಂಥವಾಗಿದೆ. ಹಕ್ಕ-ಬುಕ್ಕರ ಬಗ್ಗೆ ಕೂಡ ಇನ್ನೂ ಸರ್ಕಾರ ಸಂಶೋಧನೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕಾರ್ಯದರ್ಶಿ ಡಾ. ಡಿ.ಕೆ. ಸಣ್ಣನಾಯಕ್ ಮಾತನಾಡಿ, ಹಕ್ಕ-ಬುಕ್ಕರು ಕೊನೆಯ ಕಾಲದಲ್ಲಿ ಮಾಗಡಿ ಬಳಿ ಬಂದು ನೆಲೆಸಿದ ಕುರುಹುಗಳಿವೆ. ಮಾಗಡಿ ಸಮೀಪದ ಕಲ್ಯಾ ಎಂಬ ಗ್ರಾಮದ ಬಳಿ ಹಕ್ಕ-ಬುಕ್ಕರ ಸಮಾಧಿ ಇದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಮಹಾಸಭಾ ಕೋರ್ ಕಮಿಟಿ ಸದಸ್ಯರಾದ ರಮೇಶ್ ಹಿರೇಜಂಬೂರು ಮಾತನಾಡಿ, ಹಕ್ಕಬುಕ್ಕರ ವಂಶಸ್ಥರ ಚರಿತ್ರೆ ನೋಡಿದರೆ ಇಬ್ಬರೂ ಸೋದರರೂ ವೀರಶೂರರು, ಜೊತೆಗೆ ಇವರು ವಾಲ್ಮೀಕಿ ಕುಡಿಗಳು ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಕೆಲವರು ಹಕ್ಕ-ಹುಕ್ಕರನ್ನು ಹೈಜಾಕ್ ಮಾಡುವ ಕುಚೋದ್ಯ ನಡೆಸುತ್ತಿದ್ದಾರೆ, ಪರವಾಗಿಲ್ಲ. ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹಕ್ಕಬುಕ್ಕರು ಕೇವಲ ನಾಯಕ ಸಮುದಾಯಕ್ಕೆ ಮಾತ್ರ ಸೀಮಿತರಾದವರಲ್ಲ. ಎಲ್ಲ ಸಮುದಾಯದವರೂ ಆರಾಧಿಸುವ ವ್ಯಕ್ತಿತ್ವ ಅವರದ್ದು. ಆದರೆ ಹೈಜಾಕ್ ಮಾಡುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ. ಹಿರಿಯ ಸಂಶೋಧಕರಾದ ಚೆಂದ್ರಕಾಂತ್ ಬಿಜ್ಜರಗಿ ಹಾಗು ಮತ್ತೆ ಕೆಲವರು ಸಮಾಜದಲ್ಲಿ ತಪ್ಪು ಸಂದೇಶ ಸಾರಲು ಹೊರಟಿದ್ದಾರೆ. ಈಗಾಗಲೇ ಚಲನಚಿತ್ರ ಸಾಹಿತಿ, ನಿರ್ಮಾಪಕ ಡಾ. ರಾಧಾಕೃಷ್ಣ ಪಲ್ಲಕ್ಕಿ ಅವರ ಜೊತೆಗೆ ಚೆಂದ್ರಕಾಂತ್ ಬಿಜ್ಜರಗಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಅವರಿಗೆ ಸರಿಯಾದ ಇತಿಹಾಸ ತಿಳಿಸುವ ಕೆಲಸವನ್ನು ರಾಧಾಕೃಷ್ಣ ಪಲ್ಲಕ್ಕಿ ಮಾಡಿದ್ದಾರೆ. ಆದರೆ ತಾವು ಹೇಳುವ ವಾದಕ್ಕೆ ಸರಿಯಾದ ಸಾಕ್ಷ್ಯ ಹಾಗೂ ಉತ್ತರ ನೀಡುವಲ್ಲಿ ಬಿಜ್ಜರಗಿ ವಿಫಲರಾಗಿದ್ದಾರೆ. ಇತಿಹಾಸ ಅರಿಯದವರು ಇತಿಹಾಸ ನಿರ್ಮಾಣ ಮಾಡುವುದು ಅಸಾಧ್ಯ ಎಂದು ಹೇಳಿದರು.

ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುವುದು ಬೇಡ. ಇಂದು ಇಡೀ ರಾಜ್ಯದಲ್ಲಿ ನಾಯಕ ಸಮುದಾಯ ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿದೆ. ಇದು ಶ್ಲಾಘನೀಯ ಸಂಗತಿ. ನಾಯಕ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಈ ರೀತಿಯ ಇತಿಹಾಸ ತಿರುಚುವವರಿಗೆ ತಕ್ಕ ಉತ್ತರ ನೀಡಲು ಸಾಧ್ಯ. ಇಷ್ಟು ದಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರನ್ನ ಕಂಡೆ ಮಾರುದ್ದ ಓಡುತ್ತಿದ್ದವರೆಲ್ಲ ಈಗ ಮೀಸಲಾತಿಗಾಗಿ ತಾವೂ ಒತ್ತಾಯಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಈ ಮೂಲಕವಾದರೂ ಸಮಾಜದಲ್ಲಿ ಸಮಾನತೆ ಜಾರಿಯಾಗಲಿ. ಆದರೆ ಸರ್ಕಾರ ಹಕ್ಕಬುಕ್ಕರು, ಶ್ರೀಕೃಷ್ಣದೇವರಾಯ ಸೇರಿದಂತೆ ವಿಜಯನಗರ ಸಂಸ್ಥಾನದ ಇತಿಹಾಸವನ್ನು ಇನ್ನಷ್ಟು ಅಧ್ಯಯನ ನಡೆಸಬೇಕು. ತುಮಕೂರಿನ ಹುಲಿಕುಂಟೆ ಬಳಿ ಹಕ್ಕ-ಬುಕ್ಕರ ವಂಶಸ್ಥರು ಇದ್ದಾರೆಂಬ ಮಾತುಗಳಿವೆ. ಈಗಾಗಲೇ ಅದು ಸರ್ಕಾರದ ಗಮನಕ್ಕೂ ಬಂದಿದೆ. ಇಂತಹ ಸಂದರ್ಭದಲ್ಲಿ ಇದರ ಅಧ್ಯಯನ ನಡೆಸಬೇಕು. ವಿಜಯನಗರದ ಅಧಿದೇವತೆ ರಾಯಮ್ಮ. ರಾಯ ಎಂದರೆ ರಾಜ, ಅಮ್ಮ ಎಂದರೆ ಮಾತೆ. ರಾಯಮ್ಮ ಎಂದರೆ ರಾಜಮಾತೆ ಎಂದರ್ಥ. ಇದನ್ನೇ ಅನೇಕರು ತಪ್ಪಾಗಿ ಅರ್ಥೈಸಿ ತಮಗೆ ಬೇಕಾದ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ವಿಜಯನಗರದ ವಂಶಸ್ಥರ ಮನೆ ದೇವರ ದಾರಮಾದಲಿಂಗೇಶ್ವರ. ಈ ದೇವರು ಕೂಡ ಹುಲಿಕುಂಟೆ ಬಳಿ ಇದೆ. ಹಕ್ಕಬುಕ್ಕರ ನಂತರ ಅವರ ವಂಶಜರು ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗಗಳಿಗೆ ಬಂದು ನೆಲೆಸಿದ ಕುರುಹುಗಳಿವೆ. ಇವುಗಳ ಬಗ್ಗೆ ಅಧ್ಯಯನ ನಡೆಸಬೇಕು. ವಾಲ್ಮೀಕಿ ಅಧ್ಯಯನ ಪೀಠಕ್ಕೆ ಸರ್ಕಾರ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ನೇಮಕ ಮಾಡಿ ಇಂತಹವುಗಳ ಬಗ್ಗೆ ಅಧ್ಯಯನ ನಡೆಸಲು ಅನುವು ಮಾಡಿಕೊಡಬೇಕು. ಆ ಮೂಲಕ ಸಮಾಜಕ್ಕೆ ರಾಜ್ಯದ ಇತಿಹಾಸದ ನೈಜ ಸ್ಥಿತಿ ತಿಳಿಸುವ ಕೆಲಸ ಸರ್ಕಾರದಿಂದಲೇ ಆಗಬೇಕು ಎಂದು ರಮೇಶ್ ಹಿರೇಜಂಬೂರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಹಾಸಭಾ ಪದಾಧಿಕಾರಿಗಳಾದ ಸಿಂಗಾಪುರ ವೆಂಕಟೇಶ್, ಆರ್. ತಿಮ್ಮರಾಜು, ಜಿ. ನಾಗರಾಜು ಗಾಣದ ಹುಣಸೆ, ಹನುಮಂತಪ್ಪ ಕಟಿಗೇರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours