ಉರಿ ಗೌಡ – ನಂಜೇ ಗೌಡ, ಇತಿಹಾಸದಿಂದ ಎದ್ದು ಬಂದ ಎರಡು ಪಾತ್ರಗಳು

 

ಉರಿ ಗೌಡ – ನಂಜೇ ಗೌಡ…

ಇತಿಹಾಸದಿಂದ ಎದ್ದು ಬಂದ ಎರಡು ಪಾತ್ರಗಳು…..

ಬಿಎಸ್ಸಿ – ವಿಜ್ಞಾನ ( ಸೈನ್ಸ್ ),
ಬಿಕಾಂ – ವಾಣಿಜ್ಯ ( ಕಾಮರ್ಸ್ )
ಬಿಎ – ಕಲೆ ( ಆರ್ಟ್ಸ್ )…
ಹೀಗೆ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ಇತಿಹಾಸ ( History ) ಕಲಾ ಮಾಧ್ಯಮದ ಅಡಿಯಲ್ಲಿ ಬರುತ್ತದೆ. ಹಾಗಾದರೆ ಇತಿಹಾಸ ಸಾಹಿತ್ಯ ಸಂಗೀತ ಸಿನಿಮಾ ಇತರ ಲಲಿತಕಲೆಗಳ ರೀತಿಯಲ್ಲಿ ಸಂಪೂರ್ಣ ಕಲಾ ಪ್ರಕಾರವೇ. ಇತಿಹಾಸವನ್ನು ಕಲಾವಿದನ ಮನಸ್ಸಿಗೆ ಇಚ್ಚಿಸಿದಂತೆ ಕಲಾತ್ಮಕವಾಗಿ, ಮನರಂಜನಾತ್ಮಕವಾಗಿ, ರೋಚಕವಾಗಿ, ಭಾವನಾತ್ಮಕವಾಗಿ, ವಾಣಿಜ್ಯೋತ್ಮಕವಾಗಿ ರಚಿಸಲಾಗಿದೆಯೇ ಎಂಬ ಪ್ರಶ್ನೆ ಅನೇಕರಿಗೆ ಎದುರಾಗಬಹುದು. …

ಇತಿಹಾಸವು ಒಂದು ವಿಜ್ಞಾನ. ನಿರ್ದಿಷ್ಟ ‌ಆಧಾರಗಳು ಮತ್ತು ಮಾನದಂಡಗಳ ಮೇಲೆ ಅದನ್ನು ರಚಿಸಲಾಗುತ್ತದೆ. ಸಂಪೂರ್ಣ ಮತ್ತು ಸ್ಪಷ್ಟ ದಾಖಲೆಗಳು ದೊರೆಯಲು ವಿಫಲವಾದಾಗ ಸಾಂಧರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಅಭಿಪ್ರಾಯ ಹೇಳಿ ಆ ಸಾಧ್ಯತೆಗಳನ್ನು ಸಹ ಇರಬಹುದು ಎಂದೇ ಸೂಚಿಸಲಾಗುತ್ತದೆ. ಅಷ್ಟು ನಿಖರತೆಯನ್ನು ಇತಿಹಾಸ ಹೊಂದಿರುತ್ತದೆ.

ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಭಾರತದ ಬಹುತೇಕ ಜನರು ಇತಿಹಾಸಕಾರರಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ…..

ನಾವೆಲ್ಲರೂ ಶೈಕ್ಷಣಿಕ ಅಪರಾಧಿಗಳು……

ಹಾದಿ ಬೀದಿಯ ಜನರು, ರಾಜಕೀಯ ಪಕ್ಷಗಳ ನೇತಾರರು, ವಕ್ತಾರರು, ಪತ್ರಕರ್ತರು ಇತಿಹಾಸವನ್ನು ಹೊಸದಾಗಿ ಬರೆಯುತ್ತಾ ಹೋದರೆ ಇತಿಹಾಸ ಎಂಬುದೇ ಇರುವುದಿಲ್ಲ. ಕೇವಲ ವರ್ತಮಾನ ಮಾತ್ರ ಇರುತ್ತದೆ. ಮುಂದೆ ಮತ್ತೊಂದು ಇತಿಹಾಸ ರಚಿತವಾಗಬಹುದು…..

ಎತ್ತ ಸಾಗುತ್ತಿದ್ದೇವೆ ನಾವು. ಬಹುಶಃ ನಮ್ಮದೇ ಮಕ್ಕಳನ್ನು ವಂಚಿಸುತ್ತಿರುವ ಆತ್ಮ ದ್ರೋಹಿಗಳು ನಾವು.
ಇತಿಹಾಸ ಹೇಗೆ ದಾಖಲಾಗುತ್ತದೆ, ಅದು ದಾಖಲು ಮಾಡುವವರು ಯಾರು, ಅದಕ್ಕೆ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬುದರ ಪ್ರಾಥಮಿಕ ಅರಿವು ಇಲ್ಲದ ಅನೇಕರು ‌ಯಾವುದೋ ಒಂದು, ಯಾರದೋ ಒಂದು ಅಭಿಪ್ರಾಯಗಳ ಆಧಾರದ ಮೇಲೆ ಇತಿಹಾಸವನ್ನು ಅರ್ಥಮಾಡಿಕೊಂಡು ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ.

ಭಾರತದಲ್ಲಿ ಸಹ ಅತ್ಯಂತ ಪ್ರಕಾಂಡ ಇತಿಹಾಸಜ್ಞರು, ಸಂಶೋಧಕರು, ಭಾಷಾ ತಜ್ಞರು, ಮಾನವ ಶಾಸ್ತ್ರಜ್ಞರು, ಪ್ರಾಚ್ಯ ವಸ್ತು ತಜ್ಞರು, ಉತ್ಖನನ ತಜ್ಞರು, ಸಂಖ್ಯಾ ಶಾಸ್ತ್ರಜ್ಞರು, ಜಾನಪದ ವಿದ್ವಾಂಸರು ಮುಂತಾದ ಅನೇಕ ಮಹಾನ್ ವ್ಯಕ್ತಿಗಳು ಇದ್ದರು ಮತ್ತು ಇದ್ದಾರೆ. ಅವರೆಲ್ಲರೂ ಶ್ರಮ ಪಟ್ಟು ಭಾರತದ ಇತಿಹಾಸವನ್ನು ಆದಷ್ಟು ಸ್ಪಷ್ಟವಾಗಿ ದಾಖಲಿಸಿದ್ದಾರೆ.

ಈಗ ರಾಜಕೀಯ ಕಾರಣಗಳಿಗಾಗಿ, ಸೈದ್ಧಾಂತಿಕ ಗುಲಾಮಿತನದ ಕಾರಣದಿಂದಾಗಿ ಇತಿಹಾಸವನ್ನೇ ತಿರುಚುವ ಕೆಲಸ ಆಗುತ್ತಿದೆ. ದಯವಿಟ್ಟು ಇದನ್ನು ನಿಲ್ಲಿಸಿ.

ಜೊತೆಗೆ ಇತಿಹಾಸವನ್ನು ಯಾರೋ ದಾರಿಹೋಕರು, ಸಾಮಾಜಿಕ ಜಾಲತಾಣಗಳ ಪಂಡಿತರು ಹೇಳುವುದಲ್ಲ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕೃತ ಗೆಜೆಟಿಯರ್ ನಲ್ಲಿ ಅದನ್ನು ದಾಖಲಿಸಲಾಗಿರುತ್ತದೆ. ಅದು ಸಂಪೂರ್ಣ ಸತ್ಯವಲ್ಲದಿರಬಹುದು. ಆದರೆ ಸದ್ಯಕ್ಕೆ ಅದೇ ಅಂತಿಮ. ಮತ್ತಷ್ಟು ಹೊಸ ದಾಖಲೆಗಳು ದೊರೆತಾಗ ಸರ್ಕಾರಗಳೇ ಅದನ್ನು ಅಧಿಕೃತವಾಗಿ ಬದಲಾವಣೆ ಮಾಡುತ್ತದೆ.ಅದನ್ನು ನಿರ್ಧಾರ ಮಾಡಲು ಇತಿಹಾಸ ತಜ್ಞರು ಇದ್ದಾರೆ.

ಯಾವುದೋ ದ್ವೇಷ ಅಸೂಯೆಯಿಂದ ಇತಿಹಾಸದ ಸುಳ್ಳು ಪ್ರಚಾರ ಒಳ್ಳೆಯದಲ್ಲ. ಭಾರತದ ಇತಿಹಾಸ ದಾಖಲಿಸುವಾಗ ಇಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ. ರಾಜಕೀಯ ಪಕ್ಷಗಳು ಇರಲಿಲ್ಲ. ಆಗ ಸುಳ್ಳು ಹೇಳುವ, ವಿಷಯ ತಿರುಚುವ ಅವಶ್ಯಕತೆ ಆಗಿನ ಇತಿಹಾಸಕಾರರಿಗೆ ಇರಲಿಲ್ಲ ಮತ್ತು ಅಷ್ಟೊಂದು ಕೆಳಮಟ್ಟಕ್ಕೆ ಇಳಿಯುವ ಶೈಕ್ಷಣಿಕ ವಾತಾವರಣವು ಇರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಅನೇಕರು ಕೇಳುತ್ತಾರೆ. ಯಾವುದು ಸರಿ – ಯಾವುದು ತಪ್ಪು ಅವರು ಹಾಗೆ ಹೇಳುತ್ತಾರೆ, ಇವರು ಹೀಗೆ ಹೇಳುತ್ತಾರೆ ಆ ಪುಸ್ತಕದಲ್ಲಿ ಹಾಗೆ ಇದೆ, ಈ ಪುಸ್ತಕದಲ್ಲಿ ಬೇರೆ ರೀತಿಯಲ್ಲಿ ಇದೆ ಎಂದು ಗಲಿಬಿಲಿಗೆ ಒಳಗಾಗಿದ್ದಾರೆ.

ಭಾರತದ ಅಧೀಕೃತ ಇತಿಹಾಸ ದಾಖಲು ಮಾಡಲು ಪ್ರಾರಂಭಿಸಿದ್ದು ಬ್ರಿಟೀಷರು, ಸುಮಾರು 1800 ರ ಆಸುಪಾಸಿನಲ್ಲಿ.

ಅಲ್ಲಿಯವರೆಗೆ ದೊರೆತ ಶಿಲಾಶಾಸನಗಳು, ಕೆತ್ತನೆಗಳು, ಅಕ್ಷರ ಮತ್ತು ಚಿತ್ರ ರೂಪದ ಎಲ್ಲಾ ಪ್ರಕಾರದ ಬರಹಗಳು, ಮಾಸ್ತಿಗಲ್ಲು, ವೀರಗಲ್ಲು, ಸ್ಮಾರಕಗಳು, ಹಾಡುಗಳ ರೂಪದ ಜಾನಪದೀಯ ಕಥನ ಕಾವ್ಯಗಳು, ಲಾವಣಿಗಳು, ವಿದೇಶೀ ಪ್ರವಾಸಿಗರ ಬರಹಗಳು, ಆಗಿನ ಜಾಗತಿಕ ವಿದ್ಯಮಾನಗಳು ಸೇರಿ ಇತಿಹಾಸದ ಬಗ್ಗೆ ಮಾಹಿತಿ ಸಿಗಬಹುದಾದ ಎಲ್ಲಾ ದಾಖಲೆಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಲಾಗುತ್ತದೆ. ಆಗ ತಿಳಿದು ಬಂದ ವಿಷಯವೆಂದರೆ ಮಾನವ ಇತಿಹಾಸ ಹೆಚ್ಚು ಕಡಿಮೆ ನದಿ ತೀರದ ಪ್ರದೇಶಗಳಲ್ಲಿಯೇ ಬೆಳೆದುಬಂದಿದೆ ಎಂದು. ಆದ್ದರಿಂದ ಮೇಲಿನ ದಾಖಲೆಗಳ ಆಧಾರದ ಮೇಲೆ ಇನ್ನಷ್ಟು ವಿಷಯಗಳನ್ನು ಖಚಿತಪಡಿಸಿಕೊಳ್ಳಲು ಅವಶ್ಯಕತೆ ಇರುವ ಸ್ಥಳಗಳಲ್ಲಿ ಉತ್ಖನನ ( ಭೂ ಅಗೆತ ) ಸಹ ಮಾಡಲಾಗುತ್ತದೆ.

ಈ ಎಲ್ಲಾ ದಾಖಲೆಗಳನ್ನು ಒಟ್ಟು ಮಾಡಿ ಅಧ್ಯಯನ – ಸಂಶೋಧನೆ ಮಾಡಲಾಗುತ್ತದೆ.

ದಿನಾಂಕಗಳು, ಮಾಸಗಳು, ವರ್ಷಗಳು, ಘಟನೆಗಳು, ರಾಜ ವಂಶಗಳು, ಹೆಸರುಗಳು, ಆಡಳಿತದ ಅವಧಿ, ಸೋಲು ಗೆಲುವು, ಪ್ರದೇಶಗಳ ವಿಸ್ತಾರ, ಭಾಷೆ, ಧರ್ಮ, ದೇವರು, ಆಚರಣೆಗಳು, ಆಗಿನ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸೇರಿ ಒಟ್ಟು ವ್ಯವಸ್ಥೆ, ಬರಹಗಳಲ್ಲಿ ಇರುವ ಹೊಗಳಿಕೆ, ತೆಗಳಿಕೆ, ಸಾಂಕೇತಿಕತೆ, ಕಾಲ್ಪನಿಕತೆ, ಪುರಾಣ, ವಿರೋಧಾಭಾಸ, ಜಯದ ಸಂಭ್ರಮ, ಸೋಲಿನ ಕಹಿ, ತಂತ್ರಗಳು ಕುತಂತ್ರಗಳು ಮುಂತಾದ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಲಾಗುತ್ತದೆ.

ಕೆಲವೊಮ್ಮೆ ಮಧ್ಯದ ದಾಖಲೆಗಳು ದೊರೆಯುವುದಿಲ್ಲ. ಪೂರಕ ಅಂಶಗಳು ಸಿಗುವುದಿಲ್ಲ, ಎರಡು ವಿರುದ್ಧ ದಿಕ್ಕಿನ ಘಟನೆಗಳ ಮಾಹಿತಿ ದೊರೆಯುತ್ತದೆ. ಹಾಗೆಲ್ಲಾ ಇರುವ ದಾಖಲೆಗಳ ಪ್ರಕಾರ ವಾಸ್ತವಕ್ಕೆ ಹತ್ತಿರದ ಊಹಾತ್ಮಕ ನಿರ್ಧಾರ ಮತ್ತು ಸಾಂದರ್ಭಿಕ ಸತ್ಯದ ತೀರ್ಮಾನ ಮಾಡುವುದು ಅನಿವಾರ್ಯವಾಗುತ್ತದೆ.

ಇವುಗಳನ್ನೆಲ್ಲ ಒಟ್ಟು ಮಾಡಿ ವಿವಿಧ ತಂಡಗಳು ಇತಿಹಾಸವನ್ನು ದಾಖಲು ಮಾಡುತ್ತವೆ. ಆ ತಂಡದಲ್ಲಿ ಕೇವಲ ಇತಿಹಾಸಕಾರರು ಮಾತ್ರವಲ್ಲದೆ, ಮಾನವ ಶಾಸ್ತ್ರಜ್ಞರು, ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಯವರು, ಭೂಗರ್ಭ ತಜ್ಞರು, ವಿಜ್ಞಾನಿಗಳು, ರಾಜಕೀಯ ಪಂಡಿತರು, ಭಾಷಾ ತಜ್ಞರು ಮುಂತಾದ ಎಲ್ಲರೂ ಇರುತ್ತಾರೆ. ಇವರೆಲ್ಲರ ಒಟ್ಟು ಸಹಮತದ ಅಭಿಪ್ರಾಯ ಇತಿಹಾಸವಾಗಿ ದಾಖಲಾಗುತ್ತದೆ ಮತ್ತು ಅದು ಕಾಲಾನುಕ್ರಮದಲ್ಲಿ ಇರುತ್ತದೆ. ಇದನ್ನು ಸರ್ಕಾರದ ಅಧೀಕೃತ ಇತಿಹಾಸ ಎಂದು ಕರೆಯಲಾಗುತ್ತದೆ. ಇದರ ಆಧಾರದ ಮೇಲೆ ಪಠ್ಯ ಪುಸ್ತಕ ಅಧ್ಯಯನ ಮತ್ತು ಸಂಶೋಧನಾ ಶಿಕ್ಷಣವನ್ನು ರೂಪಿಸಲಾಗುತ್ತದೆ.

ಹಾಗಾದರೆ ಇದು ಮಾತ್ರ ಸತ್ಯವೇ ಅಥವಾ ಅಂತಿಮವೇ ? ಇದಕ್ಕೆ ಬೇರೆ ಆಯಾಮ ಇರುವುದಿಲ್ಲವೇ ಎಂಬ ಪ್ರಶ್ನೆ ಉದ್ಬವವಾಗಬಹುದು. ಇದು ಅಂತಿಮ ಸತ್ಯ ಅಲ್ಲದಿರಬಹುದು. ಆದರೆ ಸದ್ಯದ ಅಧೀಕೃತತೆ ಇದು ಮಾತ್ರ ಆಗಿರುತ್ತದೆ.

ಇಲ್ಲಿಯೂ ಕೆಲವು ಉತ್ತರಿಸಲಾಗದ ಗೊಂದಲಗಳು ಹಾಗೆಯೇ ಉಳಿಯುತ್ತದೆ. ಅನೇಕಾನೇಕ ಸೂಕ್ಷ್ಮ ಅಂಶಗಳು ಕಾಲ ಗರ್ಭದಲ್ಲಿ ಪ್ರಶ್ನೆಗಳಾಗಿಯೇ ಅಡಗಿ ಹೋಗಿರುತ್ತವೆ.

ಆದ್ದರಿಂದ ಯಾರೋ ಭಾಷಣದಲ್ಲೋ, ಅಂಕಣದಲ್ಲೋ, ಹರಿಕಥೆಯಲ್ಲೋ ಇದೇ ಇತಿಹಾಸ ಎಂದು ಬಾಯಿಗೆ ಬಂದಂತೆ ಮಾತನಾಡಿ, ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿದರೆ ದಯವಿಟ್ಟು ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ. ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಇರುವುದು ಮಾತ್ರ ಒಪ್ಪಬಹುದಾದ ಇತಿಹಾಸ. ಇನ್ನೆಲ್ಲವೂ ಅವರವರ ಭಾವಕ್ಕೆ ತಕ್ಕಂತೆ ಮೂಡಿದ ಅಭಿಪ್ರಾಯಗಳು ಮಾತ್ರ.

ಉರಿ ಗೌಡ ಮತ್ತು ನಂಜೇ ಗೌಡ ಖಚಿತವಾದ ಮತ್ತು ನಿಖರವಾದ ಪಾತ್ರಗಳಲ್ಲ. ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿಕೊಳ್ಳಬಹುದಾದ ಸಾಂಧರ್ಭಿಕ ಸನ್ನಿವೇಶಗಳನ್ನು ಆಧಾರಿಸಿದ ಪಾತ್ರಗಳು. ಬ್ರಿಟೀಷರ ನಡುವಿನ ಮೈಸೂರು ಕದನದಲ್ಲಿ ಟಿಪ್ಪು ಸಾಯುವುದು ಇತಿಹಾಸ. ಆದರೆ ಯುದ್ಧದ ಸಂದರ್ಭದಲ್ಲಿ ಇಂತಹ ನಿರ್ದಿಷ್ಟ ವ್ಯಕ್ತಿಯೇ ಕೊಂದಿರುವುದು ಎಂದು ಸ್ಪಷ್ಟವಾಗಿ ಹೇಳಲಾಗದು. ಟಿಪ್ಪು ವಿಷಯದಲ್ಲಿ ಇದು ಮತ್ತಷ್ಟು ಅಸ್ಪಷ್ಟ. ಈಗಿನ. ಆಧುನಿಕ ಕಾಲದಲ್ಲೇ ಅನೇಕ ಕೊಲೆಗಳಿಗೆ ಕಾರಣವಾದ ನಿರ್ದಿಷ್ಟ ವ್ಯಕ್ತಿ ಮತ್ತು ಕಾರಣಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿರುವಾಗ ಆಗ ಯುದ್ಧ ಭೂಮಿಯಲ್ಲಿ ಎಷ್ಟೆಲ್ಲಾ ಸಾಧ್ಯತೆಗಳು ಇರಬಹುದು ಊಹಿಸಿ.

ಅಂತಿಮವಾಗಿ ಅಂದು ಯಾರೇ ಕೊಂದಿರಲಿ ಅದು ಈಗ ಓಟು ಬ್ಯಾಂಕಿನ ರಾಜಕೀಯ ಮಾಡುವುದು ಸರಿಯಲ್ಲ. ಇತಿಹಾಸ ನಮಗೆ ಒಂದು ಪಾಠವಾಗಬೇಕೆ ಹೊರತು ನಮ್ಮ ನಡುವಿನ ದ್ವೇಷಕ್ಕೆ ಆಯುಧ ಆಗಬಾರದು. ಇತಿಹಾಸ ಒಂದು ಎಚ್ಚರಿಕೆ ಒಂದು ತಿಳಿವಳಿಕೆ ಒಂದು ಮಾದರಿ. ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಅನಾಗರಿಕ ಸಮಾಜದ ಲಕ್ಷಣ……….

ಇದೊಂದು ಸರಳ ನಿರೂಪಣೆ. ಆಳದಲ್ಲಿ ಇದನ್ನೂ ಮೀರಿದ ಇನ್ನಷ್ಟು ಆಯಾಮಗಳು ಇತಿಹಾಸಕ್ಕೆ ಇದೆ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

[t4b-ticker]

You May Also Like

More From Author

+ There are no comments

Add yours