ಹೊಳಲ್ಕೆರೆ ಪಟ್ಟಣದಲ್ಲಿ ಜುಲೈ ಒಂದರಿಂದ ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ – ಮುಖ್ಯಾಧಿಕಾರಿ ವಾಸಿಂ*

 

*ಹೊಳಲ್ಕೆರೆ :ಸರ್ಕಾರದ ಆದೇಶದ ರೀತ್ಯ 01 ಜುಲೈ 2022ರಿಂದ ಜಾರಿಗೆ ಬರುವಂತೆ ಹೊಳಲ್ಕೆರೆ ಪಟ್ಟಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳು, 2021ರ ಅನುಸಾರವಾಗಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೊಳಲ್ಕೆರೆ ಪುರಸಭೆಯ ಮುಖ್ಯಾಧಿಕಾರಿ ಎ ವಾಸಿಂ ತಿಳಿಸಿದ್ದಾರೆ. ಮಣ್ಣಿನಲ್ಲಿ ಬೆರೆತು ಕೊಳೆಯದ, ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಪರಿಸರದ ಮೇಲೆ, ಸಕಲ ಜೀವರಾಶಿಗಳ ಮೇಲೆ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಅರ್ಥ ಮಾಡಿಕೊಂಡು, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕೈಬಿಡುವಂತೆ ಹಾಗೂ ದೈನಂದಿನ ಅಗತ್ಯತೆಗಳಿಗೆ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆಯೇ ಅವಲಂಬಿತವಾಗುವ ಅಭ್ಯಾಸವನ್ನು ಕೈಬಿಟ್ಟು ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ನಿರ್ಮಾಣಕ್ಕೆ ನಾಗರಿಕರು, ವರ್ತಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು ಎಲ್ಲರೂ ಸ್ವಯಂಪ್ರೇರಣೆಯಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಪ್ಲಾಸ್ಟಿಕ್ ವಿರುದ್ಧದ ಸಮರಕ್ಕೆ ಹಾಗೂ ಸಕಲ ಜೀವ ಸಂಕುಲದ ಒಳಿತಿಗೆ ಕೈಜೋಡಿಸುವಂತೆ ಹೊಳಲ್ಕೆರೆ ಪುರಸಭೆಯ ಅಧ್ಯಕ್ಷರಾದ ಆರ್ ಎ ಅಶೋಕ್ ಹಾಗೂ ಉಪಾಧ್ಯಕ್ಷರಾದ ಕೆ ಸಿ ರಮೇಶ್ ರವರೂ ಸಹ ಮನವಿ ಮಾಡಿಕೊಂಡಿದ್ದು ಪ್ಲಾಸ್ಟಿಕ್ ನಿರ್ಮೂಲನೆಗೆ ಹೊಳಲ್ಕೆರೆ ಪುರಸಭೆಯ ಸರ್ವ ಸದಸ್ಯರುಗಳ ಸಂಪೂರ್ಣ ಸಹಕಾರವಿದೆ ಎಂದಿದ್ದಾರೆ.

ಕಳೆದ 2 ವರ್ಷಗಳಿಂದ ಹೊಳಲ್ಕೆರೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದರೂ ಸಹ, ವರ್ತಕರು ಮತ್ತು ಸಾರ್ವಜನಿಕರು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆಯನ್ನು ಮುಂದುವರೆಸಿದ್ದಾರೆ. ಜುಲೈ 1ರ ಬಳಿಕ ಆರೋಗ್ಯ ನಿರೀಕ್ಷಕರಾದ ನಾಗಭೂ಼ಷಣ್ ನೇತೃತ್ವದಲ್ಲಿ ಈ ವರೆಗೆ ಹೊಳಲ್ಕೆರೆ ಪಟ್ಟಣದ ಹಲವಾರು ಅಂಗಡಿಗಳನ್ನು ಜಪ್ತಿ ಮಾಡಿ, 25 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ಸರಕುಗಳನ್ನು ವಶಪಡಿಸಿಕೊಂಡು ನಾಲ್ಕು ಸಾವಿರ ದಂಡ ವಸೂಲಿ ಮಾಡಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಹಾಗೂ ಬಳಸಲು ಪ್ರಚೋದನೆಗೆ ಈ ವರೆಗೆ ಕೇವಲ ದಂಡ ಮಾತ್ರ ವಿಧಿಸಲಾಗುತ್ತಿದ್ದು ಉದ್ದಿಮೆದಾರರು ಪ್ಲಾಸ್ಟಿಕ್ ಸರಕುಗಳ ಬಳಕೆ ಮತ್ತು ಮಾರಾಟ ಮುಂದುವರೆಸಿದಲ್ಲಿ ಹಾಗೂ ಸಾರ್ವಜನಿಕರಿಗೆ ಪ್ರೋತ್ಸಾಹಿಸಿದಲ್ಲಿ ಅಂತಹವರ ವಿರುದ್ಧ ಇನ್ನೂ ಹೆಚ್ಚಿನ ಕಟ್ಟು ನಿಟ್ಟಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿ ಎ ವಾಸಿಂ ಎಚ್ಚರಿಸಿದ್ದಾರೆ. ಪ್ರಜ್ಞಾವಂತ ನಾಗರಿಕರು ಈ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ, ನಿಮ್ಮ ಆತ್ಮೀಯರಿಗೆ ತಿಳುವಳಿಕೆ ನೀಡುವಂತೆ ಸಹ ಅವರು ಮನವಿ ಮಾಡಿಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours