ಸಾಹಿತಿಗಳಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಸಿಸಿಬಿ ಪೋಲಿಸರಿಂದ ಬಂಧನ

 

ಬೆಂಗಳೂರು : ರಾಜ್ಯದ ಪ್ರಮುಖ ಸಾಹಿತಿಗಳು ಮತ್ತು ಬುದ್ದಿ ಜೀವಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಖೆಡ್ಡಾಗೆ ಕೆಡವುವಲ್ಲಿ ಕೇಂದ್ರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ದಾವಣಗೆರೆಯ ಹಿಂದೂ ಸಂಘಟನೆಯ ಸಂಚಾಲಕ ಶಿವಾಜಿರಾವ್ ಜಾಧವ್‌ ಬಂಧಿತ ಆರೋಪಿ.

ಈತ ಕಳೆದ ಎರಡು ವರ್ಷಗಳಿಂದ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಈತನ ಬಂಧನಕ್ಕೆ ಬಲೆ ಬೀಸಿದ್ದ ಸಿಸಿಬಿ ಪೊಲೀಸರು, ದಾವಣಗೆರೆಯಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಬೆಂಗಳೂರು ಸೇರಿದಂತೆ 7 ಕಡೆಗಳಲ್ಲಿ ಬೆದರಿಕೆ ಪ್ರಕರಣ ದಾಖಲಾಗಿತ್ತು. ಸರ್ಕಾರ ಪ್ರಕರಣದ ಗಂಭೀರತೆ ಅರಿತು ಸಿಸಿಬಿ ತನಿಖೆಗೆ ವಹಿಸಿತ್ತು. ಸಿಸಿಬಿ ಅಧಿಕಾರಿಗಳು ಪತ್ರಗಳನ್ನು ಎಫ್‌ಎಸ್ ಎಲ್ ಪರೀಕ್ಷೆ ಮಾಡಿಸಿದ್ದಾಗ ಎಲ್ಲಾ ಪತ್ರಗಳು ಒಂದೇ ಕೈ ಬರಹ ಹೊಂದಿರುವುದು ಗೊತ್ತಾಗಿದೆ. ಅಲ್ಲದೆ, ಆರೋಪಿ ಬೇರೆ ಬೇರೆ ಪೋಸ್ಟ್ ಆಫೀಸ್ ಗಳಿಂದ ಪತ್ರ ರವಾನಿಸಿರುವುದು ಬಯಲಾಗಿತ್ತು. ಆದರೆ, ಪತ್ರ ಬರೆದವರು ಯಾರು ಎಂಬುವುದು ನಿಗೂಢವಾಗಿತ್ತು. ಇದೀಗ ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಿ.ಎಲ್.ವೇಣು,  ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಸಾಹಿತಿಗಳು ಮತ್ತು ಬುದ್ದಿ ಜೀವಿಗಳಿಗೆ ಬೆದರಿಕೆ ಪತ್ರ ಬರೆದಿದ್ದ ಎಂದು ತಿಳಿದು ಬಂದಿದೆ.

[t4b-ticker]

You May Also Like

More From Author

+ There are no comments

Add yours