ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ವಹಿಸಿ:ಡಿಸಿ ಟಿ. ವೆಂಕಟೇಶ್ ಸೂಚನೆ

 

ಚಿತ್ರದುರ್ಗ ಫೆ. 07 (ಕರ್ನಾಟಕ ವಾರ್ತೆ) :
ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಮಿತಿ, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ಸರ್ಕಾರದಿಂದ ಪ್ರತ್ಯೋಜಿಸಲಾದ ಅಧಿಕಾರದಡಿಯಲ್ಲಿ ಟಾಸ್ಕ್ ಫೋರ್ಸ್ (ಗಣಿ) ಸಮಿತಿಯ ಎಲ್ಲಾ ಸದಸ್ಯ ಇಲಾಖೆಯ ಅಧಿಕಾರಿಗಳು ತಂಡ ರಚಿಸಿಕೊಂಡು ಕಟ್ಟು ನಿಟ್ಟಾಗಿ ಕ್ರಮವಹಿಸಬೇಕು. ಈ ಸಂಬಂಧ ಜಿಲ್ಲೆಯಲ್ಲಿನ ಖನಿಜ ಸಾಗಾಣಿಕೆ ಮಾರ್ಗಗಳಲ್ಲಿ ಬರುವ ಪ್ರಮುಖ ಜಂಕ್ಷನ್‍ಗಳಲ್ಲಿ ಹಾಗೂ ಅಂತರ್‍ರಾಜ್ಯ ಗಡಿಗಳಲ್ಲಿ ಸಂಯುಕ್ತ ಖನಿಜ ತನಿಖಾ ಠಾಣೆಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಆಡಳಿತಾತ್ಮಕ ವೆಚ್ಚದಲ್ಲಿ ಸ್ಥಾಪಿಸಿ, ಹೋಂಗಾರ್ಡ್‍ಗಳನ್ನು ನೇಮಕ ಮಾಡಿಕೊಂಡು, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾಹಿತಿ ನೀಡಿ, ಸರ್ಕಾರದಿಂದ ಜಿಲ್ಲೆಗೆ ವರ್ಷಕ್ಕೆ 740 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಿದ್ದು, ಜನವರಿ ಅಂತ್ಯದವರೆಗೆ 592 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿ ಇದೆ.  ಇದಕ್ಕೆ ಬದಲಾಗಿ ಜನವರಿ ಅಂತ್ಯದವರೆಗೆ ಮುಖ್ಯ ಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಂದ 494.23 ಕೋಟಿ ರೂ. ರಾಜಸ್ವ ಸಂಗ್ರಹಣೆಯಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಈ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ. 100 ರ ಗುರಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಖನಿಜ/ಉಪ ಖನಿಜ ಗಣಿ ಗುತ್ತಿಗೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೆಗೊಳಿಸಿ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ. 100 ರ ಗುರಿ ಸಾಧಿಸಲು ಸಂಬಂಧಪಟ್ಟ ಅರ್ಜಿಗಳನ್ನು ವಿಳಂಬ ಮಾಡದಂತೆ ನಿಯಮಾನುಸಾರ ಕ್ರಮವಹಿಸಲು ಟಾಸ್ಕ್ ಫೋರ್ಸ್ (ಗಣಿ) ಸಮಿತಿಯ ಎಲ್ಲಾ ಸದಸ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಸೂಚಿಸಿದರು.
ಕೆ.ಎಂ.ಎಂ.ಸಿ.ಆರ್-1994 ರ ನಿಯಮ 3-ಎಫ್ ರಡಿಯಲ್ಲಿ ಕುಲಕಸಬುದಾರರ ಜೀವನೋಪಾಯಕ್ಕೆ ಅನುವು ಮಾಡಿಕೊಡುವ ಸಂಬಂಧ ಈಗಾಗಲೇ 15 ಕಲ್ಲು ಬ್ಲಾಕ್‍ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುರುತಿಸಿ ನಿರಾಕ್ಷೇಪಣಾ ಪತ್ರಗಳಿಗೆ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ನಕ್ಷೆಯೊಂದಿಗೆ ಪತ್ರ ಬರೆಯಲಾಗಿದ್ದು, ಹೊಳಲ್ಕೆರೆ ತಾಲ್ಲೂಕಿನ 03 ಬ್ಲಾಕ್‍ಗಳಿಗೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ 01 ಬ್ಲಾಕ್‍ಗೆ ನಿರಾಕ್ಷೇಪಣಾ ಪತ್ರಗಳು ಸ್ವೀಕೃತಿಯಾಗಿದ್ದು, ನಿಯಮಾನುಸಾರ ಅಧಿಸೂಚನೆ ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಿ ಅರ್ಹ ಅರ್ಜಿಗಳನ್ನು ಲಾಟರಿ ಮೂಲಕ ಬ್ಲಾಕ್‍ಗಳನ್ನು ಮಂಜೂರು ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಕಾರ್ತಿಕ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳೆಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಪರಿಸರ ಅಧಿಕಾರಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours