ಶಾಲಾ ಮಕ್ಕಳ ಕಲಿಕಾಂಶ ಕೊರತೆ ನಿವಾರಣೆಗೆ ಕ್ರಮ ವಹಿಸಿ:ಡಾ.ಪಿ.ಸಿ.ಜಾಫರ್ ಸೂಚನೆ

 

ಚಿತ್ರದುರ್ಗ(ಕರ್ನಾವಾರ್ಡ ವಾರ್ಡ) ಕೋವಿಡ್  ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಮಕ್ಕಳು ಸರಿಯಾಗಿ ಶಾಲೆಗೆ ಹೋಗಿಲ್ಲದಿರುವುದರಿಂದ ಸಮರ್ಪಕವಾಗಿ ಕಲಿಕೆಯಾಗಿಲ್ಲ. ಹಾಗಾಗಿ ಪಠ್ಯಕ್ರಮ ಪೂರ್ಣಗೊಳಿಸುವುದಕ್ಕಿಂತ ಮುಖ್ಯವಾಗಿ  ವಿದ್ಯಾರ್ಥಿಗಳಿಗೆ ಕಲಿಕಾಂಶಗಳ ಕೊರತೆ ನಿವಾರಣೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು  ಆರ್ಥಿಕ ಇಲಾಖೆ (ವೆಚ್ಚ) ಸರ್ಕಾರದ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.
         ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿದ್ದು, ಈ ವರ್ಷ ಭೌತಿಕ ತರಗತಿಗಳು ಆರಂಭವಾಗಿದೆ. ಹಾಗಾಗಿ ಕಳೆದ ಎರಡು ವರ್ಷಗಳ ಕಲಿಕೆಯ ಅಂಶಗಳನ್ನು ಕಲಿಸುವ ಬಗ್ಗೆ ಕ್ರಮ ವಹಿಸಬೇಕು. ಶೈಕ್ಷಣಿಕ ವರ್ಷದ ಸಿಲಬಸ್ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡುವ ಬದಲು, ಕಳೆದೆರಡು ವರ್ಷಗಳಲ್ಲಿನ ಕಲಿಕಾಂಶದ ಕೊರತೆ ನೀಗಿಸಲು ಗಮನ ಕೊಡಬೇಕು.  ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಪರಿಹಾರ ಬೋಧನೆ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಕಲಿಕಾ ಚೇತರಿಕೆಯ ಉಪಕ್ರಮಗಳನ್ನು ಪ್ರತಿ ಮಾಹೆವಾರು ಪರಾಮರ್ಶೆ ಮಾಡಲಾಗುತ್ತಿದೆ. ಕಲಿಕಾ ಚೇತರಿಕೆಯ ಜೊತೆಗೆ ಪಠ್ಯಕ್ರಮ ಬೋಧನೆಯು ಮಾಡಲಾಗುತ್ತಿದೆ ಎಂದರು. ಆದರ್ಶ ವಿದ್ಯಾಲಯಗಳಲ್ಲಿ ಉತ್ತಮ ಗುಣಮಟ್ಟದ ಕಟ್ಟಡ, ಪ್ರಯೋಗದ ಸೌಲಭ್ಯ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ಲಭ್ಯವಿವೆ ಹಾಗಾಗಿ ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯ ಇಲ್ಲದೇ ಇರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪಟ್ಟಿ ತಯಾರಿಸಿ, ಇಂತಹ ಕಾಲೇಜುಗಳನ್ನು ಆದರ್ಶ  ವಿದ್ಯಾಲಯಕ್ಕೆ ಶಿಫ್ಟ್ ಮಾಡಲು ಡಿಡಿಪಿಯು ಹಾಗೂ ಡಿಡಿಪಿಐ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹೇಳಿದರು.

ವೇತನ ಸರಿಯಾಗಿ ನೀಡಿ :
********* ಶಿಕ್ಷಣ, ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರಿದ್ದಾರೆ. ಪ್ರತಿ ತಿಂಗಳು ಸರಿಯಾಗಿ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಕ್ರಮ ವಹಿಸಬೆಕು.  ಈ ವರ್ಷದ ಬಾಕಿ ವೇತನವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಪಾವತಿಸಲು ಅವಕಾಶವಿಲ್ಲ, ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಎಲ್ಲ ಬಾಕಿ ವೇತನಗಳನ್ನು ಪಾವತಿಸಬೇಕು.  ವರ್ಷದ ವೇತನದ ಕ್ರಿಯಾ ಯೋಜನೆ ವ್ಯರ್ಥವಾಗದಂತೆ ಅಗತ್ಯ ಕ್ರಮ ವಹಿಸಬೇಕು. ವೇತನಕ್ಕೆ ಸಂಬಂಧಪಟ್ಟಂತೆ ತಾಲ್ಲೂಕು ಪಂಚಾಯಿತಿ ಅಧೀಕ್ಷಕರು ಹಾಗೂ ಬಿಇಒ ಅವರೊಂದಿಗೆ ಚರ್ಚಿಸಬೇಕು ಎಂದು ಹೇಳಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದರಿಂದ ಸರ್ಕಾರ ಅನುದಾನ ನೀಡಿದ್ದು, ಈ ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ:
********* ರಾಜ್ಯದಲ್ಲಿ 1000 ಪ್ರೌಢ ಶಾಲಾ ಅತಿಥಿ ಶಿಕ್ಷಕರು, 3000 ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರು ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ವಾರದೊಳಗೆ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಸಲು ರೂ.7.5 ಲಕ್ಷ ಅನುದಾನ ಅವಶ್ಯಕತೆ ಇದ್ದು, ಅನುದಾನ ಮಂಜೂರು ಮಾಡುವಂತೆ ಹೇಳಿದ ಅವರು, ಪ್ರೌಢಶಾಲೆಯ ಸಹಶಿಕ್ಷಕರು ಮುಖ್ಯ ಶಿಕ್ಷಕರಾಗಿ ಮುಂಬಡ್ತಿಯಿಂದಾಗಿ  ಬೇರೆ ಕಡೆಗೆ ವರ್ಗಾವಣೆಯಾಗಿದ್ದಾರೆ. ಜಿಲ್ಲೆಯಲ್ಲಿ 32 ಹುದ್ದೆಗಳು  ಖಾಲಿ ಇವೆ. ಹಾಗಾಗಿ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಹೇಳಿದರು.
ಸಿರಿಧಾನ್ಯ ತಳಿ ಸಂಶೋಧನಾ ಕೇಂದ್ರಕ್ಕೆ ಪ್ರಸ್ತಾವನೆ :
********* ಜಂಟಿಕೃಷಿ ನಿರ್ದೇಶಕ ರಮೇಶ್‍ಕುಮಾರ್ ಮಾತನಾಡಿ, ಸಿರಿಧಾನ್ಯ ಬೆಳೆಯುವ ರೈತರಿಗೆ ಹಲವು ಪ್ರೋತ್ಸಾಹ ಯೋಜನೆ ನೀಡಿದರ ಫಲವಾಗಿ ಹಾಗೂ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸದ್ಯ ಸಿರಿಧಾನ್ಯ ಕೃಷಿ ಕ್ಷೇತ್ರ ವಿಸ್ತರಣೆಗೊಳ್ಳುತ್ತಿದೆ.  ಜನವರಿಯಲ್ಲಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳ ಜರುಗಲಿದೆ.   ಪ್ರಸ್ತುತ ರಾಣೆಬೆನ್ನೂರಿನಲ್ಲಿ ಹಾಗೂ ಹೈದರಾಬಾದ್ ನಲ್ಲಿ ಮಾತ್ರ ಸಿರಿಧಾನ್ಯ ತಳಿ ಸಂಶೋಧನೆ ನಡೆಯುತ್ತಿದ್ದು, ಅಲ್ಲಿನ ತಳಿಗಳು ಈ ಜಿಲ್ಲೆಯ ವಾತಾವರಣಕ್ಕೆ ಸೂಕ್ತವಾಗುವುದಿಲ್ಲ.  ಹೀಗಾಗಿ ಸಿರಿಧಾನ್ಯ ತಳಿಗಳ ಸುಧಾರಣೆ, ಸಂಸ್ಕರಣೆ ನಿಟ್ಟಿನಲ್ಲಿ ಇಲ್ಲಿ ಸಂಶೋಧನೆ ಕೇಂದ್ರದ ಅಗತ್ಯವಿದೆ ಎಂದರು.  ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲೆಗೆ ಸಿರಿಧಾನ್ಯ ತಳಿಗಳ ಸಂಶೋಧನಾ ಕೇಂದ್ರದ ಅಗತ್ಯತೆ ಕುರಿತು ಸಮಗ್ರ ವಿವರದೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಬರುವ ಬಜೆಟ್‍ನಲ್ಲಿ ಸೇರ್ಪಡೆಗೊಳಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು.  ಅಲ್ಲದೆ ಸಿರಿಧಾನ್ಯಗಳ ಸಂಸ್ಕರಣೆ ಘಟಕಗಳನ್ನು ವ್ಯಾಪಕವಾಗಿ ಸ್ಥಾಪಿಸಲು ಅಧಿಕಾರಿಗಳು ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿ ಗ್ರಾ.ಪಂ.ವಾರು ಎರಡು ಯುವಕ ಸಂಘ ಗುರುತಿಸಿ:
*********ಮುಖ್ಯಮಂತ್ರಿಗಳು, ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯನ್ನು ಮುಂಬರುವ ಡಿಸೆಂಬರ್ ಮಾಹೆಯಲ್ಲಿ ಜಾರಿಗೆ ತರಲಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿವಾರು ಎರಡು ಯುವಕ ಸಂಘಗಳನ್ನು ಗುರುತಿಸುವಂತೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ ಅವರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ರೂ.1.93 ಕೋಟಿ ಬೇಡಿಕೆ ಸಲ್ಲಿಕೆ:
*********ಚರ್ಮಗಂಟು ರೋಗದಿಂದ ಮೃತಪಡುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲು ಜಿಲ್ಲೆಯಲ್ಲಿ ರೂ.1.93 ಕೋಟಿ ಅನುದಾನದ ಬೇಡಿಕೆ ಇದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಸಭೆಗೆ ಮಾಹಿತಿ ನೀಡಿದರು.
ಚರ್ಮಗಂಟು ರೋಗದಿಂದಾಗಿ ಇದುವರೆಗೂ 863 ರಾಸುಗಳು ಮೃತಪಟ್ಟಿವೆ ಎಂದು ಹೇಳಿದ ಅವರು, ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಪ್ರೋಟೋಕಾಲ್ ಪ್ರಕಾರ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ದಾಸ್ತಾನು ಇದೆ ಎಂದು ಹೇಳಿದರು.
ಚರ್ಮಗಂಟು ರೋಗದ ನಿಯಂತ್ರಣಕ್ಕಾಗಿ ನಿರಂತರವಾಗಿ ಲಸಿಕೆ ಕಾರ್ಯ ನಡೆಯುತ್ತಿರುವುದರಿಂದ ಚರ್ಮಗಂಟು ರೋಗ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.
ದಾನಿಗಳ ನೆರವು ಪಡೆಯಿರಿ:
*********ಡಯಾಲಿಸಿಸ್ ಹಾಗೂ ಕ್ಯಾನ್ಸರ್ ರೋಗಗಳಿಗೆ ಚಿಕಿತ್ಸೆ ನೀಡಲು ಉಪಕರಣಗಳು ಅಗತ್ಯವಿದೆ. ಸರ್ಕಾರದ ಅನುದಾದನ ಜೊತೆಗೆ ದಾನಿಗಳ ನೆರವು ಪಡೆದು ಡಯಾಲಿಸಿಸ್ ಉಪಕರಣಗಳನ್ನು ಖರೀದಿ ಮಾಡಬೇಕು. ಒಬ್ಬ ಡಯಾಲಿಸಿಸ್ ರೋಗಿಯು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‍ಗೆ ಒಳಗಾಗಬೇಕು. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.  ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಪದೇ ಪದೇ ಉಪಕರಣಗಳು ಕೆಟ್ಟು ಹೋಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಜಿಲ್ಲಾ ಪಂಚಾಯಿತಿ ಅನುದಾನದಡಿ ಡಯಾಲಿಸಿಸ್ ಉಪಕರಣ ಖರೀದಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಿ:
**************ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದರೆ ಸಾಕಾಗುವುದಿಲ್ಲ. ಇದರ ಜೊತೆಗೆ ವಸತಿ ಶಾಲೆಯ ವಿದ್ಯಾರ್ಥಿಗಳನ್ನು 6ನೇ ತರಗತಿಯಿಂದಲೇ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದರ ಮೂಲಕ ಐಎಟಿ, ಜೆಇಇ, ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ಅವರಿಗೆ ಸೂಚನೆ ನೀಡಿದರು.
ವಸತಿ ಶಾಲೆಯ ವಿದ್ಯಾರ್ಥಿಗಳು ಎನ್‍ಎಂಎಂಸ್ ಹಾಗೂ ಎನ್‍ಟಿಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣಗೊಳ್ಳಲು ವಿಶೇಷ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ಚಂದ್ರಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours