ಮನೆ ಮನೆಗೆ ಗ್ಯಾರೆಂಟಿ ಯೋಜನೆ ಸೌಲಭ್ಯ ತಲುಪಿಸಲು ಕ್ರಮ ವಹಿಸಿ:ಶಾಸಕ ಟಿ.ರಘುಮೂರ್ತಿ ಸೂಚನೆ

 

ಚಿತ್ರದುರ್ಗ: ನಮ್ಮ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಯಾರು ಸಹ ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಟಿ‌.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ತಾಲೂಕಿನ ಚಿಕ್ಕಗೊಂಡನಹಳ್ಳಿ ಮತ್ತು ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ  ” ಜನಸ್ಪಂದನ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಯಲ್ಲಿ ನಾಲ್ಕು ಯೋಜನೆಗಳು ಜಾರಿಯಾಗಿವೆ‌. ಗೃಹಲಕ್ಷ್ಮಿ , ಗೃಹ ಜ್ಯೋತಿ , ಶಕ್ತಿ, ಅನ್ನ ಭಾಗ್ಯ ಯೋಜನೆಯ ಲಾಭವನ್ನು ಈಗಾಗಲೇ ಫಲಾನುಭವಿಗಳು ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಯ ಮಾಹಿತಿಯನ್ನು ಜನರಿಗೆ ತಲುಪಿಸಿ ಸೌಲಭ್ಯ ವಂಚಿತರನ್ನು ಸರ್ಕಾರದ ಸೌಲಭ್ಯ ತಲುಪಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚನೆ ನೀಡಿದರು.

ಜನರು ಸಹ ಅಧಿಕಾರಿಗಳಿಂದ ಮಾಹಿತಿ ಪಡೆದು ಗ್ಯಾರೆಂಟಿ ಯೋಜನೆಯ ಲಾಭ ಪಡೆಯಬೇಕು‌.ಅಧಿಕಾರಿಗಳು ನೂರಕ್ಕೆ ನೂರರಷ್ಟು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು. ತಾಂತ್ರಿಕ ದೋಷವಿರುವ ಫಲಾನುಭವಿಗಳ ಅರ್ಜಿಯನ್ನು ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡದೇ ಸಬೂಬು ಹೇಳಿ ದಿನ ಕಳೆದರೆ ನಾನು ಸಹಿಸುವುದಿಲ್ಲ ವಾರ್ನಿಂಗ್ ನೀಡಿದರು.

ಗ್ರಾಮೀಣ ಭಾಗದ ಸರ್ವೆ ನಂಬರ್ ಗಳ ವಸತಿ ಪ್ರದೇಶಗಳನ್ನು ಗ್ರಾಮಠಾಣ ವ್ಯಾಪ್ತಿಗೆ ಒಳಪಡಿಸಿ:
ಹಲವು ವರ್ಷಗಳ ಹಿಂದೆ ಜಮೀನುಗಳಲ್ಲಿ ಹೊಸದಾಗಿ ಊರುಗಳು ನಿರ್ಮಿಸಿಕೊಂಡಿದ್ದಾರೆ‌. ನನ್ನ ಕ್ಷೇತ್ರದ ಎಲ್ಲಾ ಕಡೆ ಈ ರೀತಿಯಲ್ಲಿ ಹೊಸದಾಗಿ ನಿರ್ಮಿಸಿಕೊಂಡಿರುವ ವಸತಿ ಪ್ರದೇಶಗಳನ್ನು ಗ್ರಾಮಠಾಣ ವ್ಯಾಪ್ತಿ ತರುವ ಕೆಲಸ ಕೂಡಲೇ ಆಗಬೇಕು‌. ಅದಕ್ಕೆ ಅಗತ್ಯದ ಸಹಕಾರ ನಾನು ನೀಡುತ್ಥೇನೆ ತುರ್ತಾಗಿ ಈ ಕೆಲಸ ಆಗಬೇಕು ಎಂದು ತಾ.ಪಂ. ಇಓ‌ ಮತ್ತು ತಹಶೀಲ್ದಾರ್ ಅವರಿಗೆ ತಿಳಿಸಿದರು.

ನೀರು ಸಂಗ್ರಹಣ ಘಟಕಗಳನ್ನು ಸ್ವಚ್ಚಗೊಳಿಸಿ:

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಹಳ್ಳಿಗಳ ಓವರ್ ಹೆಡ್ ಟ್ಯಾಂಕ್, ನೆಲ‌ತೊಟ್ಟಿಗಳು, ತೊಟ್ಟಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಜನರಿಗೆ ಶುದ್ದ ನೀರು ಒದಗಿಸುವ ಕೆಲಸ ಮಾಡಬೇಕು.ಜನರ ಉತ್ತಮ ಆರೋಗ್ಯಕ್ಕೆ ಅತ್ಯವಶ್ಯಕವಾಗಿ ನೀರು ಬೇಕು. ನೀರಿನ ಸ್ವಚ್ಚತೆ ಇದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ಒಂದು ವೇಳೆ ಸ್ವಚ್ಚತೆ ಇಲ್ಲ ಎಂಬ ದೂರುಗಳು ಕೇಳಿ ಬಂದರೆ ನಾನು ಸುಮ್ಮನಿರಲ್ಲ ಎಂದು ಗುಡುಗಿದರು‌.

ಗ್ರಾಮ ಆಡಳಿತಧಿಕಾರಿಗಳು ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸಿ: ಎಲ್ಲಾ ಗ್ರಾಮ ಆಡಳಿತಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಗೆ ತೆರಳಿ ಕೆಲಸ ಮಾಡಬೇಕು. ಜನರನ್ನು ನಗರಗಳಿಗೆ ಕರೆಸಿಕೊಳ್ಳುವ ಸಂಸ್ಕ್ರತಿ ಬಿಡಬೇಕು. ಜನರಿಗೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಅವರವರ ಗ್ರಾಮಗಳಿಗೆ ನಿಗದಿಪಡಿಸಿದ ದಿನಾಂಕಗಳಿಗೆ ಆ ಗ್ರಾಮಕ್ಕೆ ತೆರಳಿ ಕೆಲಸ ಮಾಡಬೇಕು. ಇವರು ಬರದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಜನರಿಗೆ ಸೂಚಿಸಿದರು.

ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಗಳು ಈ ಸ್ವತ್ತು ನೀಡಲು ಜನರನ್ನು ಅಲೆದಾಡಿಸುವ ದೂರುಗಳಿವೆ. ಇದನ್ನು ಸರಿಪಡಿಸಿಕೊಂಡು ಕಾಲಮಿತಿಯೊಳಗೆ ಕೆಲಸ ಮುಗಿಸಬೇಕು‌. ಜನರು ಕೂಲಿನಾಲಿ ಬಿಟ್ಟು ಪಂಚಾಯತಿ ಕಾಯುವಂತೆ ಮಾಡದೇ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಎಂದರು. ಪಿಂಚಣೆಯಿಂದ ಹೊರಗುಳಿದ ಜನರಿಗೆ ಪಿಂಚಣಿಗೆ ಅರ್ಜಿ ಹಾಕಿಸಬೇಕು. ಎಲ್ಲಾ ಹಳ್ಳಿಗಳಲ್ಲಿ ಸರ್ವೆ ಮಾಡಿಸಿ ಎಲ್ಲಾರಿಗೂ ಪಿಂಚಣಿ ಸೌಲಭ್ಯ ಒದಗಿಸಬೇಕು. ಸ್ಮಶಾನ ಸಮಸ್ಯೆಗಳಲ್ಲಿ ಕೇಲವು ಮುಗಿಯುವ ಹಂತಕ್ಕೆ ಬಂದಿವೆ. ಇನ್ನು ಕೆಲವು ಬಾಕಿ ಇದೆ. ಖಾಲಿ ನಿವೇಶನಗಳಿಗೆ ಸರ್ಕಾರ ಜಮೀನು ಇರುವ ಕಡೆ ಗುರುತಿಸಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು‌.

ಈ‌ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ, ತಾ.ಪಂ.ಇಓ ಹನುಮಂತಪ್ಪ, ಸಿಡಿಪಿಓ ಸುಧಾ,ಮುದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳ ಸಿದ್ದೇಶ್, ಉಪಾಧ್ಯಕ್ಷೆ ಸುಧಾರಾಣಿ ನಾಗರಾಜ್ , ಚಿಕ್ಕಗೊಂಡನಹಳ್ಳಿ ಅಧ್ಯಕ್ಷೆ ಮಹಂತಮ್ಮ. ಉಪಾಧ್ಯಕ್ಷ ಗಂಗಾಧರಯ್ಯ ಮತ್ತು ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿ ಸಮಸ್ಯೆಗಳ ಅರ್ಜಿಗಳನ್ನು ಸಲ್ಲಿಸಿದರು‌.

[t4b-ticker]

You May Also Like

More From Author

+ There are no comments

Add yours