ನಮ್ಮನ್ನು ಅರ್ಥ ಮಾಡಿಕೊಳ್ಳದ ಅವಿವೇಕಿಗಳಿಂದ ಅಪಪ್ರಚಾರ: ಸಾಣೆಹಳ್ಳಿ ಶ್ರೀ

 

ಹೊಸದುರ್ಗ: ಮೊನ್ನೆ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲವೆಂದು ಹೇಳಿದ್ದೆ. ನಮ್ಮ ಸಂಸ್ಕೃತಿ ಎಂದರೆ ಲಿಂಗಾಯತ ಸಂಸ್ಕೃತಿ, ಶರಣ ಸಂಸ್ಕೃತಿ ಎಂದರ್ಥ. ಆದರೆ, ಕೆಲವು ಮಹಾನುಭಾವರು ಲೇಖನಗಳ ಮೂಲಕ ನಮ್ಮ ಬಗ್ಗೆ ಇಲ್ಲದ ಪದಗಳನ್ನು ಬಳಕೆ ಮಾಡಿದ್ದಾರೆ. ನಮ್ಮನ್ನು ಅರ್ಥಮಾಡಿಕೊಳ್ಳದ ಅವಿವೇಕಿಗಳು, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಪಂಡಿತರಾಧ್ಯ ಶಿವಾಚಾರ್ಯ (Shri Panditaradhya Shivacharya)  ಸ್ವಾಮೀಜಿ ಕಿಡಿಕಾರಿದರು.
 ತಾಲೂಕಿನ ಸಾಣೇಹಳ್ಳಿ ಮಠದಲ್ಲಿ ಶನಿವಾರ ನಡೆದ ರಾಷ್ಟ್ರೀಯ ನಾಟಕೋತ್ಸವದ 3ನೇ ದಿನದ ಕಾಯಕ ಮತ್ತು ದಾಸೋಹ ತತ್ವಗಳ ಅಂತರ್ ಸಂಬಂಧ ವಿಚಾರ ಸಂಕೀರ್ಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
  ನಿಜಗುಣಾನಂದಸ್ವಾಮೀಜಿ ಇಂತಹ ಮಾತುಗಳನ್ನಾಡಿಯೇ, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಪಂಡಿತರಾಧ್ಯ ಸ್ವಾಮೀಜಿಯೂ ಇಂತಹ ಮಾತುಗಳನ್ನಾಡಿ ಪ್ರಶಸ್ತಿ ಪಡೆಯುವ ಆಸೆಯಲ್ಲಿದ್ದಾರೆ ಎಂದಿದ್ದಾರೆ. ಕರ್ನಾಟಕದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮೊಟ್ಟಮೊದಲು ಬಂದಿದ್ದು ಪಂಡಿತರಾಧ್ಯ ಸ್ವಾಮೀಜಿಗಳಿಗೆ ಎಂಬುದು ಅವರಿಗೆ ತಿಳಿದಿಲ್ಲ. ಸ್ವಾಮೀಜಿ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬರೆದಿದ್ದಾರೆ. ನಾವು ವಿದ್ಯಾರ್ಥಿ ದೆಸೆಯಿಂದಲೂ ಕೂಡ ನಾವು ಅಂದುಕೊಂಡಂತೆ ನಡೆ-ನುಡಿಗೆ ಒಂದಾಗಿ ನಡೆಯುತ್ತಿದ್ದೇವೆ ಎಂದರು.
 ನಮ್ಮನ್ನು ಬಲ್ಲವರಿಗೆ ತಿಳಿದಿದೆ, ನಾವೂ ಯಾವುದೇ ಗಣಪತಿ ಉತ್ಸವಗಳಿಗೆ ಹೋಗುವುದಿಲ್ಲವೆಂದು. ಕಾರಣವಿಷ್ಟೇ, ಸ್ಥಾವರ ಕಳೆಯುಂಟು, ಜಂಗಕ್ಕೆ ಅಳಿವಿಲ್ಲ ಎಂಬುದು ಶರಣರ ಸಂದೇಶ. ಅದರಂತೆ ನಮ್ಮ ಬದುಕನ್ನ ನಮ್ಮ ಸುತ್ತಲಿನವರ ಬದುಕನ್ನ ಕಟ್ಟಬೇಕೆಂಬುದು ನಮ್ಮ ಕಲ್ಪನೆ. ನಮ್ಮನ್ನು ಅರ್ಥ ಮಾಡಿಕೊಳ್ಳದ ಅವಿವೇಕಿಗಳು ಏನೇನೋ ಬರೆಯುತ್ತಾರೆ. ಶರಣರ ವಚನಗಳಲ್ಲಿಯೇ ಗಣಪತಿಯನ್ನು ವಿರೋಧ ಮಾಡಿದ್ದು ಸಾಕಷ್ಟು ನಿದರ್ಶನಗಳಿವೆ ಹೇಳಿದರು.
  ನಮ್ಮನ್ನು ಇಂದಿಗೂ ಕಂದಾಚಾರದ ಕೂಪದಲ್ಲಿ ಮುಳುಗಿಸುವಂತಹ ಪುರೋಹಿತಶಾಹಿ ಪರಂಪರೆ ಈ ನಾಡಿನಲ್ಲಿ ಬಹುದೊಡ್ಡದಾಗಿದೆ. ಒಂದು ದೇವಸ್ಥಾನವನ್ನು ಕಟ್ಟಿದ ತಕ್ಷಣ. ಅಲ್ಲಿಗೆ ಜನ ಕಾಲಿಡುತ್ತಾರೆ, ಪೂಜೆ ಮಾಡುತ್ತಾರೆ, ಸುತ್ತರಿಯುತ್ತಾರೆ. ಏನೋ ಪುಣ್ಯ ಸಿಗುತ್ತದೆಂದು. ಇಂಥವರಿಗೆ ಯಾರಿಗಾದರೂ ಪುಣ್ಯ ದೊರಕಿದೆಯೇ? ದೇವರು ಇದುವರೆಗೂ ವರವನ್ನು ಕೊಟ್ಟಿಲ್ಲ, ಶಾಪವನ್ನು ನೀಡಿಲ್ಲ. ಈ ಸತ್ಯದ ಅರಿವು ಮುಟ್ಟದ ಕೂಪದಲ್ಲಿ ಮುಳುಗಿರುವವರಿಗೆ ಅರ್ಥವಾಗುವುದು ಕಷ್ಟ ಎಂದರು.
  ಯಾವಾಗಲೂ ಕೂಡ ಇನ್ನೊಬ್ಬರ ತಲೆ ಬೋಳಿಸುವ ಕೆಲಸವನ್ನು ಮಾಡುತ್ತಿರುತ್ತಾರೆಯೇ ಹೊರತು, ಇನ್ನೊಬ್ಬರ ತಲೆಯ ವಿಚಾರವನ್ನು ಅರ್ಥ ಮಾಡಿಕೊಳ್ಳುವುದು, ವಿಚಾರಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ. ನಮ್ಮ ಬಗ್ಗೆ ಮಾತನಾಡುವವರಿಗೆ ಬರೆಯುವವರಿಗೆ ವಚನ ಸಾಹಿತ್ಯದ ಪರಿಚಯ, ವೈಚಾರಿಕ ಪ್ರಜ್ಞೆ, ವಿವೇಕ ಉದಯವಾಗಿದ್ದಿದ್ದರೆ, ಅರಿವಿನ ಸಂಕೇತ ಬಂದಿದ್ದರೆ ನಾವು ಅರ್ಥವಾಗುತ್ತಿದ್ದೇವು. ಲೋಕದಲ್ಲಿ ಸ್ತುತಿನಿಂದೆಗಳು ಸಹಜ. ನಾವು ಜನಗಳಿಗೆ ಏನನ್ನು ಹೇಳಬೇಕು ಅದನ್ನು ಹೇಳುತ್ತಾ ಹೋದರೆ, ಅರಿವು ಮೂಡಿಸಲು ಸಾಧ್ಯವಿದೆ ಎಂದು ತಿಳಿಸಿದರು.
  ಈ ವೇಳೆ ಕಾರ್ಯಕ್ರಮದಲ್ಲಿ ಪ್ರೊ.ಏಸ್.ಜಿ. ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ಪ್ರಾಧ್ಯಾಪಕಿ ಡಾ.ಎಂ.ಏಸ್.ಆಶಾದೇವಿ, ಚಿತ್ರದುರ್ಗ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ರವಿಶಂಕರರೆಡ್ಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
[t4b-ticker]

You May Also Like

More From Author

+ There are no comments

Add yours