ಹಾಸನಾಂಬೆಯ ದೇಗುಲದ ಹಿಂದೆ ರೋಚಕ ಕಥೆ, ಭಕ್ತರಿಗೆ 14 ದಿನ ದರ್ಶನ ಭಾಗ್ಯ

 

ಹಾಸನ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಿ ದೇಗುಲದ ಗರ್ಭಗುಡಿಯ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತದೆ. ಶಕ್ತಿ ದೇವತೆಯಾಗಿರುವ ಹಾಸನಾಂಬೆ(Hasanamba )ದರ್ಶನ ಪಡೆಯಲು ಭಕ್ತಾದಿಗಳು, ರಾಜ್ಯ, ಹೊರರಾಜ್ಯಗಳಿಂದಲೂ ಹಾಸನಕ್ಕೆ ಬರುತ್ತಾರೆ.

ಹಾಸನಾಂಬೆಯ ದೇಗುಲದ ಹಿಂದೆ ರೋಚಕ ಕಥೆ ಇದೆ.

ವಾರಾಣಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ದುರ್ಗೆ, ಚಾಮುಂಡಿ, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಸಾವಿರಾರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದರು ಎಂಬ ಐತಿಹ್ಯವಿದೆ.

ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬೆ ದೇವಾಲಯದಲ್ಲಿ ಹುತ್ತದ ರೂಪದಲ್ಲಿದ್ದರೆ, ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಚಾಮುಂಡಿ, ವಾರಾಹಿ, ಇಂದ್ರಾಣಿಯರು ನಗರದ ಮಧ್ಯೆ ಇರುವ ದೇವಿಗೆರೆಯ ಬಳಿ ನೆಲೆಸಿದರು ಎಂದು ಭಕ್ತರು ಹೇಳುತ್ತಾರೆ.

ಕ್ರಿ.ಶ.12ನೇ ಶತಮಾನದಲ್ಲಿ ಚೋಳರ ಅರಸ, ಪಾಳೆಗಾರ ಕೃಷ್ಣಪ್ಪನಾಯಕ, ಚನ್ನಪಟ್ಟಣದಲ್ಲಿ ಕೋಟೆಯೊಂದನ್ನು ಕಟ್ಟಿದ್ದ. ಅವನ ನಂತರ ಬಂದ ಸಂಜೀವನಾಯಕ, ಕಾರ್ಯನಿಮಿತ್ತ ಹೊರಗಡೆ ಪ್ರಯಾಣ ಹೊರಟಾಗ ಮೊಲ ಅಡ್ಡ ಬಂತು. ಇದು ಅಪಶಕುನವೆಂದು ಭಾವಿಸಿದ ಅರಸ, ಪ್ರಯಾಣ ರದ್ದುಗೊಳಿಸಲು ನಿರ್ಧರಿಸಿದ. ಈ ವೇಳೆ ಪ್ರತ್ಯಕ್ಷಳಾದ ಹಾಸನಾಂಬೆ, ‘ನಾನಿರುವ ಈ ಸ್ಥಳದಲ್ಲಿ ದೇಗುಲವೊಂದನ್ನು ಕಟ್ಟು. ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ’ಎಂದಳಂತೆ. ಅದರಂತೆ ದೇಗುಲ ನಿರ್ಮಾಣ ಮಾಡಲಾಯಿತು ಎನ್ನುವ ನಂಬಿಕೆ ಭಕ್ತರದ್ದು.

ವಿಶ್ವರೂಪ ದರ್ಶನ:

ದರ್ಶನೋತ್ಸವ ಆರಂಭದ ದಿನ ಮಾತ್ರವೇ ಭಕ್ತರಿಗೆ ಅಲಂಕಾರಗಳಿಲ್ಲದ ದೇವಿಯ ವಿಶ್ವರೂಪ ದರ್ಶನಕ್ಕೆ ಅವಕಾಶವಿರುತ್ತದೆ. ದೇವಿಯ ವಿಶ್ವರೂಪ ದರ್ಶನದಿಂದ ಹೆಚ್ಚು ಪುಣ್ಯ ಲಭಿಸುವುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬಾಗಿಲು ತೆರೆದ ತಕ್ಷಣವೇ ದರ್ಶನ ಪಡೆಯಲು ಭಕ್ತರು ಮುಗಿಬೀಳುತ್ತಾರೆ. ಬಾಗಿಲು ತೆರೆದ ದಿನ ಮಧ್ಯಾಹ್ನದ ನಂತರ ದೇಗುಲದ ಗರ್ಭಗುಡಿಗೆ ಸುಣ್ಣ ಬಳಿಯುವುದು, ದೇವಿಗೆ ಆಭರಣಗಳ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಆ ಸಂದರ್ಭದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಕಳ್ಳಪ್ಪನ ಗುಡಿ:

ದೇವಿಯು ಹಾಸನದಲ್ಲಿ ನೆಲೆಸಿದ ನಂತರ ದೇವಾಲಯ ಪ್ರಸಿದ್ಧಿ ಪಡೆಯಿತು. ದೇವಿಯ ಮೇಲಿರುವ ಆಭರಣಗಳನ್ನು ಅಪಹರಿಸಲೆಂದು ನಾಲ್ವರು ಕಳ್ಳರು ಒಳಪ್ರವೇಶಿಸಿದರು. ಅವರು ಆಭರಣಗಳನ್ನು ತೆಗೆಯಲು ದೇವಿಯ ಮೇಲೆ ಕೈ ಇರಿಸಿದಾಗ, ಕೋಪಗೊಂಡ ದೇವಿಯ ಶಾಪಕ್ಕೆ ತುತ್ತಾಗಿ ಕಲ್ಲಾದರು. ಇಂದಿಗೂ ದೇವಾಲಯದ ಪಕ್ಕದಲ್ಲಿಯೇ ಕಲ್ಲಾದ ಕಳ್ಳರ ಗುಡಿ ಇದ್ದು, ಅದನ್ನು ‘ಕಳ್ಳಪನ ಗುಡಿ’ ಎಂದೇ ಭಕ್ತರು ಕರೆಯುತ್ತಾರೆ.

ಹಾಲಪ್ಪನ ಗದ್ದುಗೆ:

ಕಳ್ಳಪ್ಪನ ಗುಡಿಯ ಪಕ್ಕದಲ್ಲಿ ಹಾಲಪ್ಪನ ಗದ್ದುಗೆ ಇದೆ. ಇಲ್ಲಿರುವ ಐದು ಅಡಿ ಉದ್ದದ ಒಂದು ಕಂಬವನ್ನೇ ಹಾಲಪ್ಪನ ಗದ್ದುಗೆ ಎಂದು ನಂಬಿರುವ ಭಕ್ತರು, ಪೂಜೆ ಸಲ್ಲಿಸುತ್ತಾರೆ. ಸಪ್ತ ಮಾತೃಕೆಯರು ನೆಲೆಸಿರುವಲ್ಲಿ ವೀರಭದ್ರಸ್ವಾಮಿಯನ್ನೂ ಪೂಜಿಸುವುದು ಧಾರ್ಮಿಕ ಸಂಪ್ರದಾಯ. ಅದರಂತೆ ಇಲ್ಲಿ ವೀರಭದ್ರನೂ ನೆಲೆಸಿದ್ದು, ನಾಗರ ಕಲ್ಲುಗಳೂ ಇವೆ.

ದರ್ಬಾರ್‌ ಗಣಪತಿಗೆ ಪೂಜೆ:

ಧಾರ್ಮಿಕ ನಂಬಿಕೆಯಂತೆ ಸಪ್ತಮಾತೃಕೆಯರ ಸ್ಥಾನದ ಬಲ ಭಾಗದಲ್ಲಿ ವೀರಭದ್ರೇಶ್ವರ, ಎಡಭಾಗದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಮಾತೃಗಣಗಳ ನ್ನಾಗಿರಿಸಬೇಕು. ಅದರಂತೆ ಹಾಸನಾಂಬೆ ಗರ್ಭಗುಡಿ ಎಡಭಾಗದಲ್ಲಿ ದರ್ಬಾರ್‌ ಗಣಪತಿಯಿದ್ದು, ಇಷ್ಟಾರ್ಥ ನೆರವೇರಿಸುವ ಶಕ್ತಿ ಹೊಂದಿದ್ದಾನೆ ಎಂದು ಭಕ್ತರು ನಂಬಿದ್ದಾರೆ.

ಸಿದ್ಧೇಶ್ವರ ಸ್ವಾಮಿ ಜಾತ್ರೆ: ಬಲಿಪಾಡ್ಯಮಿಯಂದು ರಾತ್ರಿ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ ಮರುದಿನ ಬೆಳಗಿನ ಜಾವ ಕೆಂಡೋತ್ಸವ ನಡೆಯುತ್ತದೆ. ಅಂದು ರಾತ್ರಿಯಿಡೀ ಹಾಸನಾಂಬೆ ದರ್ಶನಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ ದೇವಿಗೆ ನೈವೇದ್ಯ, ಮಂಗಳಾರತಿ ನೆರವೇರಿಸಿ ದರ್ಶನೋತ್ಸವ ಮುಕ್ತಾಯಗೊಳ್ಳುತ್ತದೆ.

ದೇವಿಯ ವಿಶೇಷತೆ ಎಂದರೆ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದೇಗುಲದ ಬಾಗಿಲು 7 ದಿನಗಳಿಗಿಂತ ಕಡಿಮೆ ಮತ್ತು 16 ದಿನಗಳಿಗಿಂತ ಹೆಚ್ಚು ತೆರೆಯುವುದಿಲ್ಲ. ದೇವಿಯ ಎದುರು ಪ್ರಾಣಿಬಲಿಗೆ ಅವಕಾಶ ಇಲ್ಲದ ಕಾರಣ ಬಾಗಿಲು ತೆಗೆಯುವ ಸಂದರ್ಭದಲ್ಲಿ ಬಾಳೆ ಕಂದು ಕಡಿದು ಶಾಂತಿ ಮಾಡಲಾಗುತ್ತದೆ. ವರ್ಷವಿಡೀ ಬಾಗಿಲ ಮರೆಯಲ್ಲಿ ಇರುವ ದೇವಿ ಒಮ್ಮೆಲೆ ಬೀರಿದ ದೃಷ್ಟಿ ಪ್ರಳಯ ತರಿಸುವಷ್ಟು ಕ್ರೂರವಾಗಿರಲಿದೆ ಎನ್ನುವುದು ಪ್ರತೀತಿ. ಹೀಗಾಗಿ ಭಕ್ತರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಾಳೆ ಕಂಬ ಕಡಿಯಲಾಗುತ್ತದೆ. ಬಾಗಿಲು ತೆರೆಯುತ್ತಿದ್ದಂತೆಯೇ ದೇವಿಯ ದೃಷ್ಟಿ ಬಾಳೆ ಕಂಬದ ಮೇಲೆ ಬೀಳುವುದರಿಂದ ದೃಷ್ಟಿಯ ತೀಕ್ಷ್ಣತೆ ಕಡಿಮೆಯಾಗಲಿದೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಇನ್ನೊಂದು ವಿಶೇಷವೆಂದರೆ ಕಳೆದ ವರ್ಷ ಬಾಗಿಲು ಮುಚ್ಚುವಾಗ ದೇವಿಯ ಎದುರು ಇಟ್ಟ ಹೂ ಮಾರನೇ ವರ್ಷ ಬಾಗಿಲು ತೆರೆದಾಗ ಹಾಗೆಯೇ ಇರುತ್ತದೆ. ಹಚ್ಚಿಟ್ಟ ದೀಪ ಉರಿಯುತ್ತಿರುತ್ತದೆ. ನೈವೇದ್ಯವೂ ಹಾಗೇ ಇರುತ್ತದೆ.ಹಾಸನಾಂಬೆಯ ವಿಶೇಷತೆ..

 

[t4b-ticker]

You May Also Like

More From Author

+ There are no comments

Add yours