ಸಾವಿ‌ನಲ್ಲೂ ಸಮಾಜಕ್ಕೆ ಸಂದೇಶ ನೀಡಿದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು

 

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಅಸ್ತಂಗತರಾಗಿದ್ದಾರೆ. 81 ವರ್ಷ ವಯಸ್ಸಿನ ಸಿದ್ದೇಶ್ವರ ಶ್ರೀಗಳು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಯನ್ನೂ ನಿರಾಕರಿಸಿದ್ದರು. ಮುಖ್ಯಮಂತ್ರಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಫೋನ್​ ಮೂಲಕ ಮಾತನಾಡಿದ್ದರು.

ನಿನ್ನೆ ವೈಕುಂಠ ಏಕಾದಶಿ ದಿನದಂದೇ ಲಿಂಗೈಕ್ಯರಾಗಿದ್ದಾರೆ. ಸಾವಿಗೂ ಮುನ್ನ ಸಮಾಜಕ್ಕೆ ಅಂತಿಮ ಸಂದೇಶ ನೀಡಿದ್ದಾರೆ ಸಿದ್ದೇಶ್ವರ ಶ್ರೀಗಳು. ಯಾವುದೇ ಕಾರಣಕ್ಕೂ ಸಮಾಧಿ ಮಾಡಬಾರದು, ಗುಡಿ ಗೋಪುರವನ್ನು ಕಟ್ಟಬಾರದು, ನನ್ನ ಪ್ರತಿಮೆಯನ್ನು ನಿರ್ಮಿಸಬಾರದು ಎಂದಿದ್ದಾರೆ ಸಿದ್ದೇಶ್ವರ ಸ್ವಾಮೀಜಿ . ಇನ್ನು ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ, ಇಲ್ಲ, ಇಲ್ಲ ಎಂಬುದು ತಾನಿಲ್ಲ, ಗುಹೇಶ್ವರನೆಂಬುದು ತಾ ಬಯಲು ಎಂದು ಅಂತಿಮವಾಗಿ ಮಾತು ನಿಲ್ಲಿಸಿದ್ದಾರೆ.

ಮೂರ್ತಿ ಪೂಜೆ ವಿರೋಧಿಸಿದ್ದ ಬಸವಣ್ಣನ ಅನುಯಾಯಿ..!

ಸಿದ್ದೇಶ್ವರರು 24 ಅಕ್ಟೋಬರ್ 1941ರಲ್ಲಿ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಬಿಜ್ಜರಗಿಯಲ್ಲಿ ಸಂಗಮ್ಮ ಪಾಟೀಲ್​ ಹಾಗು ಓಗಪ್ಪ ಬಿರಾದಾರ ಪಾಟೀಲ್ ದಂಪತಿಯ ಪುತ್ರನಾಗಿ ಜನಿಸಿದ್ದ ಸಿದ್ದಗೊಂಡಪ್ಪ ತದನಂತರ ಸಿದ್ದೇಶ್ವರರಾಗಿ ಬದಲಾದರು. ಹುಟ್ಟೂರು ಬಿಜ್ಜರಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಶ್ರೀಗಳು, ಚಡಚಣದಲ್ಲಿ ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣ ಮುಗಿಸಿದರು. ಕರ್ನಾಟಕ ವಿವಿಯಲ್ಲಿ ಡಿಗ್ರಿ ಪಡೆದ ಶ್ರೀಗಳು, ಕೊಲ್ಹಾಪುರ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದುಕೊಂಡರು. ತತ್ವಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಿದ್ದೇಶ್ವರರು, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆ ನಿಷ್ಣಾತರಾಗಿದ್ದರು. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಜ್ಞಾನದಾಸೋಹಿ ಮಾಡುವುದನ್ನು ಸಿದ್ದೇಶ್ವರರು ರೂಢಿಸಿಕೊಂಡಿದ್ದರು. ಮೂರ್ತಿ ಪೂಜೆ ವಿರೋಧಿಸಿದ್ದ ಬಸವಣ್ಣನ ಆರಾಧಕರಾಗಿದ್ದ ಸಿದ್ದೇಶ್ವರ ಸ್ವಾಮೀಜಿ, ಅಂತಿಮವಾಗಿಯೂ ತನ್ನ ಸಿದ್ಧಾಂತದಿಂದ ಬದಲಾಗಲಿಲ್ಲ. ಸಮಾಧಿ, ಗುಡಿ, ಮೂರ್ತಿ ಏನನ್ನೂ ಮಾಡಂದೆ ವಿಲ್​ ಬರೆದಿದ್ದಾರೆ. ಭೂಮಿಯಲ್ಲಿ ಊಳಲು ಬಾರದು, ಸುಟ್ಟು ಚಿತಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ಬಿಟ್ಟು ಬಿಡುವುವಂತೆ ಸೂಚಿಸಿದ್ದಾರೆ.

ಇವತ್ತು ಹೇಗಿರಲಿದೆ ಸಿದ್ದೇಶ್ವರ ಶ್ರೀಗಳ ಅಂತಿಮ ಕಾರ್ಯ..!?

ನಿನ್ನೆ ಸಂಜೆ 6.05ಕ್ಕೆ ಸಿದ್ದೇಶ್ವರ ಸ್ವಾಮೀಜಿ ಆತ್ಮ ದೇಹ ತ್ಯಜಿಸಿದ್ದು, ಇಂದು ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಸೈನಿಕ ಶಾಲೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲು ನಿರ್ಧಾರ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿದ್ದು, ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೆ ಪ್ರಸಾದ ಹಾಗು ನೀರಿನ ವ್ಯವಸ್ಥೆ ಮಾಡುವಂತೆ ಸಿದ್ದೇಶ್ವರ ಶ್ರೀಗಳು ತಿಳಿಸಿದ್ದಾರೆ. ಸಂಜೆ 4 ಗಂಟೆಗೆ ಜ್ಞಾನಯೋಗಾಶ್ರಮಕ್ಕೆ ಪಾರ್ಥಿವ ಶರೀರ ಸ್ಥಳಾಂತರ ಮಾಡಿದ ಬಳಿಕ 5 ಗಂಟೆಯೊಳಗೆ ಜ್ಞಾನಯೋಗಾಶ್ರಮ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಧಾರ ಮಾಡಲಾಗಿದೆ. ನಡೆದಾಡುವ ಸಂತ, ವಿವೇಕಾನಂದರ ಪ್ರತಿರೂಪ ಎನ್ನುವ ಬಿರುದು ಪಡೆದುಕೊಂಡಿದ್ದ ಸಿದ್ದೇಶ್ವರ ಶ್ರೀಗಳು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ನಯವಾಗಿಯೇ ತಿರಸ್ಕಾರ ಮಾಡಿದ್ದರು. ನಾನು ಸರಳ ವ್ಯಕ್ತಿ ಎಂದು ಪ್ರಶಸ್ತಿ ನಿರಾಕರಣೆಗೆ ಕಾರಣವನ್ನೂ ಕೊಟ್ಟಿದ್ದರು.

ಜೇಬು ಇಲ್ಲದ ಬಟ್ಟೆಯನ್ನೇ ಧರಿಸುತ್ತಿದ್ದ ಮಾದರಿ ಶರಣರು..!

ಸಿದ್ದೇಶ್ವರ ಶ್ರೀಗಳು ಎಂದೂ ಜೇಬು ಇರುವ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ. ಸ್ವಾಮೀಜಿ ಎನ್ನುವ ಕಾರಣಕ್ಕೆ ಕಾವಿ ಬಟ್ಟೆಯನ್ನು ಧರಿಸದೆ ಶುಭ್ರವಾದ ಬಿಳಿ ವಸ್ತ್ರವನ್ನೇ ಧರಿಸುತ್ತಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ನಿರಾಕರಿಸಿದ್ದರು ಸಿದ್ದೇಶ್ವರ ಶ್ರೀಗಳು. ಕೋಟಿ ಕೋಟಿ ಹಣ ಸಂಗ್ರಹ ಮಾಡಿ ಮಠವನ್ನು ಐಶಾರಾಮಿಯಾಗಿ ನಿರ್ಮಾಣ ಮಾಡುವ ಅವಕಾಶ ಸಾಕಷ್ಟು ಬಾರಿ ಸಿಕ್ಕರೂ ಸಿದ್ದೇಶ್ವರ ಶ್ರೀಗಳು ಆ ಕಡೆಗೆ ಗಮನ ನೀಡಲಿಲ್ಲ. ಬದುಕುವುದಕ್ಕಾಗಿ ಮಾತ್ರವೇ ಹಣ ಇರಬೇಕೇ ಹೊರತು, ಹಣ ಸಂಪಾದನೆ ಮಾಡುವುದೇ ಬದುಕಲ್ಲ ಎನ್ನುವ ಸತ್ಯವನ್ನು ಅರಿತಿದ್ದವು. ಅನ್ನ, ಅಕ್ಷರ, ವಸತಿ ಜೊತೆ ಪ್ರವಚನ ನೀಡುತ್ತ ಸಜ್ಜನರು ಎನಿಸಿಕೊಂಡಿದ್ದ ಸಿದ್ದೇಶ್ವರ ಶ್ರೀಗಳನ್ನು ನಡೆದಾಡುವ ದೇವರು ಎಂದೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧರಾಗಿದ್ದರು. ಇನ್ನು 2ನೇ ವಿವೇಕಾನಂದ ಎಂದೇ ಹೆಸರುವಾಸಿ ಆಗಿದ್ದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಅಪಾರ ಭಕ್ತವೃಂದ ಕಂಬನಿ ಮಿಡಿಯುತ್ತಿದೆ.

[t4b-ticker]

You May Also Like

More From Author

+ There are no comments

Add yours