ಜೂ.19 ರಿಂದ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ:ಡಿಸಿ ಅ

 

ಚಿತ್ರದುರ್ಗ ಜೂ. 17 (ಕರ್ನಾಟಕ ವಾರ್ತೆ) :
ರಾಜ್ಯ ಚುನಾವಣೆ ಆಯೋಗದ ಆದೇಶದಂತೆ 2020ನೇ ಸಾಲಿನಲ್ಲಿ ಆಯ್ಕೆಯಾದ ಜಿಲ್ಲೆಯ 189 ಗ್ರಾಮ ಪಂಚಾಯತಿಗಳ ಗ್ರಾ.ಪಂ. ಸದಸ್ಯರಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿಯನ್ನು ನಿಗಧಿಪಡಿಸುವ ಕಾರ್ಯಕ್ರಮ ಜೂ. 19 ರಿಂದ 22 ರವರೆಗೆ ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮೀಸಲಾತಿ ನಿಗದಿಯು ತಂತ್ರಾಂಶ ಆಧಾರಿತವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಬಿ, ಹಿಂದುಳಿದ ವರ್ಗ(ಬ) ಮತ್ತು ಸಾಮಾನ್ಯ ವರ್ಗಗಳಿಗೆ ಹಾಗೂ ಈ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಅದ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಗಳನ್ನು ನಿರ್ದಿಷ್ಟಪಡಿಸಲಾಗಿದ್ದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಹುದ್ದೆಗಳನ್ನು ಆಯಾಯ ತಾಲ್ಲೂಕಿನ ಜನಸಂಖ್ಯೆ ಆಧಾರದ ಮೇಲೆ ನಿಗದಿಪಡಿಸಲಾಗಿರುತ್ತದೆ.
ಕಳೆದ 1993 ರಿಂದ 2015 ರವರೆಗೆ ಮತ್ತು 2020 ರಲ್ಲಿ ನಿಗದಿಪಡಿಸಿದ ಮೀಸಲಾತಿ ಹಾಗೂ ಗ್ರಾಮ ಪಂಚಾಯತಿಯ ವಿವಿಧ ಮೀಸಲು ವರ್ಗದ ಸದಸ್ಯ ಸ್ಥಾನಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿರುತ್ತದೆ.  ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿರ್ಧರಿಸುವಾಗ ಮೊದಲು ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ಈ ಅನುಕ್ರಮದಲ್ಲಿಯೇ ನಿಗದಿಪಡಿಸಲಾಗುವುದು.
ಕಳೆದ 2020 ರಲ್ಲಿ ಯಾವ ಗ್ರಾಮ ಪಂಚಾಯತಿಗೆ ಯಾವ ವರ್ಗ ಅಥವಾ ಮಹಿಳೆ ಸ್ಥಾನ ಮೀಸಲಿರಿಸಲಾಗಿದೆಯೇ ಆ ಗ್ರಾಮ ಪಂಚಾಯತಿಗೆ ಅದೇ ಮೀಸಲಾತಿ ಪುನರಾವರ್ತನೆಯಾಗದಂತೆ ಗಮನಹರಿಸಲಾಗಿದೆ.  ಯಾವುದೇ ಮೀಸಲು ವರ್ಗ ಅಥವಾ ಮಹಿಳಾ ಮೀಸಲಾತಿ ಸ್ಥಾನಗಳನ್ನು ನಿರ್ಧರಿಸುವಾಗ ಮೀಸಲು ಸ್ಥಾನಗಳ ಸಂಖ್ಯೆಗಿಂತ ಮೀಸಲು ಸದಸ್ಯ ಬಲ ಸಮಾನವಾಗಿ ಹೊಂದಿರುವ ಗ್ರಾಮ ಪಂಚಾಯತಿಗಳು ಹೆಚ್ಚಾಗಿದ್ದಾಗ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿಯೇ ಚೀಟಿ ಎತ್ತಿಸುವ ಮೂಲಕ ಅಂತಹ ಗ್ರಾ.ಪಂ. ಗಳನ್ನು ಆಯ್ಕೆ ಮಾಡಲಾಗುವುದು.
ಗ್ರಾಮ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಕಾರ್ಯಕ್ಕಾಗಿಯೇ ಕಂಪ್ಯೂಟರ್ ತಂತ್ರಾಂಶ ರೂಪಿಸಲಾಗಿದ್ದು, ಈ ವ್ಯವಸ್ಥೆಯಡಿಯೇ ತಂತ್ರಾಂಶ ಆಧಾರದಲ್ಲಿ ಮೀಸಲಾತಿ ನಿಗದಿಯಾಗಲಿದ್ದು, ಇದರಲ್ಲಿ ಯಾವುದೇ ವ್ಯಕ್ತಿಗಳ, ಮಾನವ ನಿರ್ಮಿತ ಪ್ರಭಾವಕ್ಕೆ ಅವಕಾಶ ಇರುವುದಿಲ್ಲ.  ಹೀಗಾಗಿ ಮೀಸಲಾತಿ ನಿಗದಿ ಕಾರ್ಯವು ತಂತ್ರಾಂಶದಲ್ಲಿಯೇ ನಡೆಯಲಿರುವುದರಿಂದ, ಯಾರೂ ಕೂಡ ಯಾವುದೇ ಪ್ರಭಾವಕ್ಕೆ ಹಾಗೂ ಆಮಿಷಕ್ಕೆ ಒಳಗಾಗಬಾರದು, ಅಲ್ಲದೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.  ಒಂದು ವೇಳೆ ಯಾರಾದರೂ, ಮೀಸಲಾತಿ ನಿಗದಿ ಮಾಡಿಸುವ ಬಗ್ಗೆ ಪ್ರಭಾವ ಬೀರಲು ಅಥವಾ ಆಮಿಷ ಒಡ್ಡಲು ಯತ್ನಿಸಿದಲ್ಲಿ ಈ ಕುರಿತ ದೂರುಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ಮೀಸಲಾತಿ ನಿಗದಿ ವೇಳಾಪಟ್ಟಿ :
*********ಗ್ರಾಮ ಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಕಾರ್ಯಕ್ರಮವನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಜೂನ್ 19 ರಂದು ಬೆಳಿಗ್ಗೆ 11 ಗಂಟೆಗೆ ಮೊಳಕಾಲ್ಮೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಮೊಳಕಾಲ್ಮೂರು ಪಟ್ಟಣದ ಗುರುಭವನ, ಚಳ್ಳಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ಚಳ್ಳಕೆರೆ ನಗರದ ಪಾವಗಡ ರಸ್ತೆಯ ಶ್ರೀ ಗುರು

 

ರಾಘವೇಂದ್ರ ಕಲ್ಯಾಣ ಮಂಟಪ, ಜೂನ್ 20 ರಂದು ಬೆಳಿಗ್ಗೆ 11 ಗಂಟೆಗೆ ಹೊಳಲ್ಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯ ಕುಕ್ಕಾಡೇಶ್ವರಿ ದೇವಸ್ಥಾನದ ಎದುರಿನ ವಾಲ್ಮೀಕಿ ಸಮುದಾಯ ಭವನದಲ್ಲಿ, ಹೊಸದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ಹೊಸದುರ್ಗ ಪಟ್ಟಣದ ಮುಖ್ಯ ರಸ್ತೆಯಲ್ಲಿನ ಗೌಸಿಯಾ ಶಾದಿಮಹಲ್, ಜೂನ್ 21 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಹಿರಿಯೂರು ನಗರದ ಹುಳಿಯಾರು ಮುಖ್ಯ ರಸ್ತೆ ತಹಾ ಕಲ್ಯಾಣ ಮಂಟಪ, ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಜೂ. 22 ರಂದು ಬೆ. 11 ಗಂಟೆಗೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿ ರಸ್ತೆಯ ಶ್ರೀ ತಿರುಮಲ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿಗಳೇ ಖುದ್ದು ಉಪಸ್ಥಿತರಿದ್ದು, ಮೀಸಲಾತಿ ನಿಗದಿ ಕಾರ್ಯಕ್ರಮ ನಡೆಸಲಿದ್ದಾರೆ.
ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours