ಇಂಗಳದಾಳು ಗ್ರಾಮ ಪಂಚಾಯಿತಿಯಲ್ಲಿ 6 ರಿಂದ 7 ಕೋಟಿ ರೂ ಅವ್ಯವಹಾರ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ತಾಲೂಕಿನ ಇಂಗಳದಾಳು ಗ್ರಾಮ ಪಂಚಾಯಿತಿಯಲ್ಲಿ 6 ರಿಂದ 7 ಕೋಟಿ ರೂ ಅವ್ಯವಹಾರ ನಡೆದಿದ್ದು  ಈ ಬಗ್ಗೆ ವಿಶೇಷ ಆಡಿಟ್ ನಡೆದಿದೆ ತಾಲೂಕು ಹಾಗೂ ಜಿಪಂ ಕೆಡಿಪಿಗೆ ವರದಿ ಸಲ್ಲಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯಿತಿಯ ಪ್ರಸಕ್ತ ಸಾಲಿನ ಮೊದಲ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ 5 ರಿಂದ 6  ವರ್ಷಗಳಲ್ಲಿ ಇಂಗಳದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6  ರಿಂದ 7  ಕೋಟಿ ರೂ. ಅಕ್ರಮ ನಡೆದಿದೆ. 16-17  ವರ್ಷಗಳ ಹಿಂದೆ ನಾನು ಕಟ್ಟಿಸಿರುವ ಚೆಕ್‌ಡ್ಯಾಂಗಳಿಗೆ ಸುಣ್ಣ ಬಳಿದು ಬಿಲ್ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಕಡತಗಳು ಸಿಗದಂತೆ ಸುಟ್ಟು ಹಾಕಲಾಗಿದೆ ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪಿಡಿಒ ಅವರಿಗೆ ನೀವು ಎಲ್ಲ ಕಡತಗಳನ್ನು ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಮಾತನಾಡಿ  ಸ್ಟೋರ್ ರೂಂ ನಲ್ಲಿ ಕೆಲ ಕಡತ ಸಿಕ್ಕಿದ್ದರೂ ಗೆದ್ದಲು ಹಿಡಿದಿವೆ. ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯದರ್ಶಿ ತಾಲೂಕು ಪಂಚಾಯಿತಿ ಲೆಕ್ಕಾಧಿಕಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಿ ವಿಶೇಷ ಆಡಿಟ್ ನಡೆಸಲು ಇಒಗೆ ಸೂಚಿಸಿದರು.

ಅಕ್ರಮ ಎಸಗಿದವರು ನಮ್ಮನ್ನು ಏನು ಮಾಡಿಕೊಳ್ಳಲು ಆಗಿಲ್ಲ ಎಂದು  ಬಹಿರಂಗವಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಂದು ತಿಂಗಳಲ್ಲಿ ಆಡಿಟ್ ವರದಿ ಸಲ್ಲಿಕೆಯಾದ ನಂತರ ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡೋಣ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಬೆಸ್ಕಾಂ ಇಲಾಖೆ ಪರಿಶೀಲನೆ ನಡೆಸಿದ ಶಾಸಕರು, ನಗರದಲ್ಲಿ ರಸ್ತೆ ಕಾಮಗಾರಿಗೆ ಕಂಬಗಳನ್ನು ತೆರವುಗೊಳಿಸಲು ಹಣ ಪಾವತಿ ಮಾಡಿದ್ದರೂ ವಿಳಂಭ ಮಾಡಲಾಗುತ್ತಿದೆ ಎಂದು ಬೆಸ್ಕಾಂ ಇಂಜಿನಿಯರ್‌ಗಳಿಗೆ ಪ್ರಶ್ನಿಸಿದರು. ನೀವು ಮಾಡುವ ಕೆಲಸಕ್ಕೆ ಜನರಿಂದ ನಾನು ಮಾತು ಹೇಳಬೇಕಿದೆ. ತಡಮಾಡದೇ ರಸ್ತೆ ಕಾಮಗಾರಿ ಸ್ಥಳದಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಕುರಿತು ಮಾಹಿತಿ ಪಡೆಯುತ್ತಾ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಆದರೆ, ಅಲ್ಲಲ್ಲಿ ಕಾರಿನ ಚಕ್ರ ಇಳಿಯುವಷ್ಟು ಗ್ಯಾಪ್ ಬಿಟ್ಟಿದ್ದು, ಜನ ದಿನವೂ ದೂರು ತರುತ್ತಿದ್ದಾರೆ. ಮೊದಲು ಸರಿಪಡಿಸಿ ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗೂ ರಸ್ತೆ ವಿಭಜಕಕ್ಕೆ ಬಳಿದ ಬಣ್ಣ ಈಗಾಗಲೇ ಕಿತ್ತು ಹೋಗಿದೆ. ಮೊದಲು ಪ್ರೆöÊಮರ್ ಹೊಡೆದು ನಂತರ ಬಣ್ಣ ಬಳಿಯಬೇಕಾಗಿತ್ತು. ಆದರೆ, ಗುತ್ತಿಗೆದಾರ ನಿಯಮಾನುಸಾರ ಕೆಲಸ ಮಾಡಿಲ್ಲ. ಎಲ್ಲವನ್ನೂ ಕಿತ್ತು ಮತ್ತೆ ಬಣ್ಣ ಬಳಿಯುವವರೆಗೆ ಬಿಲ್ ಪಾವತಿ ಮಾಡಬೇಡಿ ಎಂದು ತಿಳಿಸಿದರು.

ಕನಕವೃತ್ತದಿಂದ ಎಸ್‌ಜೆಎಂ ಕಾಲೇಜು, ಭೀಮಸಮುದ್ರ ಮಾರ್ಗದ ರಸ್ತೆ ಕಾಮಗಾರಿ ನಡೆಯುತ್ತಿದೆ. ಎಲ್ಲ ಒತ್ತುವರಿ ತೆರವುಗೊಳಿಸಿ ಕಾಮಗಾರಿ ನಡೆಸಬೇಕು. ಜತೆಗೆ ಮೇದೆಹಳ್ಳಿ ರಸ್ತೆಯಲ್ಲಿನ ಕಾಮಗಾರಿಯ ಲೋಪ ಸರಿಪಡಿಸಬೇಕು. ಸೆಪ್ಟಂಬರ್ ಅಂತ್ಯಕ್ಕೆ ಎಲ್ಲವೂ ಪೂರ್ಣವಾಗಿ ವಿದ್ಯುತ್ ದೀಪಗಳು ಬೆಳಗಬೇಕು ಎಂದರು.

ಸAಚಾರ ಪೊಲೀಸರೊಂದಿಗೆ ಸಭೆ ನಡೆಸಿ ನಗರದಲ್ಲಿ ನಗರ ಬಸ್ ಸಂಚಾರವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಬಸ್ ಸಂಚಾರದ ವೇಳಾಪಟ್ಟಿ ಸೇರಿದಂತೆ ಅಗತ್ಯ ಸಿದ್ಧತೆ ನಡೆಸಿ ಜನತೆಗೆ ಅನುಕೂಲ ಮಾಡಿ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ವ್ಯವಸ್ಥಾಪಕರಿಗೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಆರೋಗ್ಯ ಇಲಾಖೆ ವಾಹನಗಳ ದುರಸ್ಥಿ ಕಾರ್ಯವನ್ನು ‘ಶಿರಾ’ದಲ್ಲಿ ಏಕೆ ಮಾಡಿಸುತ್ತಿದ್ದೀರಾ. ಚಿತ್ರದುರ್ಗ ಜಿಲ್ಲಾ ಕೇಂದ್ರ, ಇಲ್ಲಿಂದು ಒಂದು ತಾಲೂಕು ಕೇಂದ್ರಕ್ಕೆ ಹೋಗುವುದು ಯಾಕೆ, ಇಲ್ಲಿ ಮೆಕ್ಯಾನಿಲ್ ಇಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಟಿಎಚ್‌ಒ ಗಿರೀಶ್, ವಾಹನ ರಿಪೇರಿಯನ್ನು ಡಿಎಚ್‌ಒ ನೋಡಿಕೊಳ್ಳುತ್ತಿದ್ದಾರೆ. ನಾವು ಮಾಡಿಸುತ್ತಿಲ್ಲ ಎಂದರು. ಇದಕ್ಕೆ ಸಿಟ್ಟಾದ ಶಾಸಕರು, ಹಣ ಪಾವತಿ ಮಾಡುವುದು ಯಾರು, ನನಗೆ ಎಲ್ಲವೂ ಗೊತ್ತಿದೆ. ನಿಮ್ಮ ಇತಿಹಾಸ ಬಿಚ್ಚಿಡಬೇಕಾ ಎಂದು ಎಚ್ಚರಿಕೆ ನೀಡಿದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿಗೆ ಎಚ್ಚರಿಕೆ: ನಗರದ ಒನಕೆ ಓಬವ್ವ ಕ್ರೀಡಾಂಗಣ ವ್ಯಾಪ್ತಿಯ ಈಜುಕೊಳದಲ್ಲಿ ಕೆಲಸ ಮಾಡುವ ಮಹಿಳೆಯ ಮಗಳು ನಿಮ್ಮ ಮನೆಗೆ ಕೆಲಸಕ್ಕೆ ಬರಲಿಲ್ಲ ಎನ್ನುವ ಕಾರಣಕ್ಕೆ ಆ ಮಹಿಳೆಯ ಕೆಲಸ ತೆಗೆಯುತ್ತೀರಾ, ದೂರು ದಾಖಲಿಸಬೇಕಾ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಸಭೆಗೆ ಗೈರಾದ ಅಧಿಕಾರಿಗಳಿಗೆ ಕ್ಲಾಸ್:

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆ.೧೪ ರಂದು ಕೆಡಿಪಿ ಸಭೆ ಕರೆದಿದ್ದಾಗ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇನ್ನೂ ಕೆಲವರು ಇಂದಿನ ಸಭೆಗೂ ತಡವಾಗಿ ಆಗಮಿಸಿದರು.

ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಶಾಸಕರು, ಸಭೆಯ ಆರಂಭದಲ್ಲಿ ಗೈರಾದವರನ್ನು ತರಾಟೆಗೆ ತೆಗೆದುಕೊಂಡರು. ಆಹಾರ ಇಲಾಖೆ ಅಧಿಕಾರಿ ಮೈಲಾರಪ್ಪ ಎಂಬುವವರನ್ನು ಅಮಾನತು ಮಾಡುವುದು, ಇತರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಜಿಪಂ ಸಿಇಒ ಡಾ.ಕೆ.ನಂದಿನಿದೇವಿ ಅವರಿಗೆ ತಿಳಿಸಿದರು.

[t4b-ticker]

You May Also Like

More From Author

+ There are no comments

Add yours