ದೇಶದ ಸಮಗ್ರತೆ ಕಾಪಾಡುವಲ್ಲಿ ಯುವ ಜನತೆಯ ಪಾತ್ರ ಹಿರಿದು:ಇ.ಬಾಲಕೃಷ್ಣ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಅಕ್ಟೋಬರ್ 31:
ದೇಶದ ಸಮಗ್ರತೆ ಕಾಪಾಡುವಲ್ಲಿ ಯುವ ಜನತೆಯ ಪಾತ್ರ ಹಿರಿದು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ ಏಕತಾ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಯುವ ಜನತೆ ಭಾರತದ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಹಾಗೂ ದೇಶದ ಸದೃಢತೆ, ಭಾವೈಕ್ಯತೆಗಾಗಿ ಹೋರಾಡಿದಂತಹ ಮಹಾನಾಯಕರ ಆದರ್ಶ ತತ್ವಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಂಡಾಗ ಮಾತ್ರ ಎಲ್ಲ ಯುವಕರಲ್ಲಿ ದೇಶಭಕ್ತಿ ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡ ಸಂದರ್ಭದಲ್ಲಿ ಅನೇಕ ಸವಾಲುಗಳಿದ್ದವು. ಅದರಲ್ಲಿ ಬಹಳ ಪ್ರಮುಖವಾದದ್ದು ಅಖಂಡ ಭಾರತದ ನಿರ್ಮಾಣ. ಸರ್ದಾರ್ ವಲ್ಲಬಾಯ್ ಪಟೇಲ್‍ರವರ ದೂರದೃಷ್ಟಿಯ ಮೂಲಕ ಹರಿದು ಹಂಚಿ ಹೋದ ಭಾರತದ ವಿವಿಧ ಸಂಸ್ಥಾನಗಳನ್ನು ಒಂದೇ ಒಕ್ಕೂಟದಲ್ಲಿ ಸೇರ್ಪಡೆಗೊಳಿಸುವುದರ ಮೂಲಕ ತಮ್ಮ ರಾಜಕೀಯ ಮುತ್ಸದ್ಧಿತನ ಮೆರೆದರು ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಯುವಜನ ಅಧಿಕಾರಿ ಸುಹಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಲೋಕೇಶ್ ನಾಯಕ್ ಪ್ರತಿಜ್ಞಾವಿಧಿ ಬೋಧಿಸಿದರು.
ಏಕತಾ ಓಟವು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾಗಿ ನಗರ ಪೊಲೀಸ್ ಠಾಣೆ, ಗಾಂಧಿ ಸರ್ಕಲ್, ಹೆಡ್ ಪೋಸ್ಟ್ ಆಫೀಸ್, ಕೆಎಸ್‍ಆರ್‍ಟಿಸಿ  ಬಸ್ ಸ್ಟ್ಯಾಂಡ್ ಮೂಲಕ ಪ್ರವಾಸಿ ಮಂದಿರ ಮಾರ್ಗವಾಗಿ ಮತ್ತೆ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀಬಾಯಿ, ಜಿಲ್ಲೆಯ ಅಂತರರಾಷ್ಟ್ರೀಯ ಕ್ರೀಡಾಪಟು ನಾಗಭೂಷಣ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಮಜಹರ್ ಉಲ್ಲ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎನ್ ಎಸ್ ಎಸ್ ಸ್ವಯಂಸೇವಕರು ಹಾಗೂ ಎನ್.ವೈ.ಕೆ ಸ್ವಯಂಸೇವಕರು ರಾಯಲ್ ಸ್ಪೋಟ್ರ್ಸ್ ಕ್ಲಬ್‍ನ ಲೋಕೇಶ್, ಎಪಿಎಂಸಿ ಹಿರಿಯ ಮಾರುಕಟ್ಟೆ ಮೇಲ್ವಿಚಾರಕರು ಸುರೇಂದ್ರಬಾಬು ಸೇರಿದಂತೆ ಮತ್ತಿತರರು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours